ರಫೇಲ್ ತೀರ್ಪು ಪರಾಮರ್ಶೆ : ಮೇ 4ರೊಳಗೆ ಉತ್ತರಿಸುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ
Team Udayavani, Apr 30, 2019, 3:20 PM IST
ಹೊಸದಿಲ್ಲಿ : ಫ್ರಾನ್ಸ್ ನಿಂದ ಖರೀದಿಸಲಾಗಿರುವ 36 ರಫೇಲ್ ಫೈಟರ್ ಜೆಟ್ ವಿಮಾನಗಳ ವಹಿವಾಟನ್ನು ಪ್ರಶ್ನಿಸಲಾದ ಮನವಿಗಳನ್ನು ವಜಾ ಮಾಡಿ ಸುಪ್ರೀಂ ಕೋರ್ಟ್ ಕಳೆದ ವರ್ಷ ಡಿಸೆಂಬರ್ ನಲ್ಲಿ ನೀಡಿದ್ದ ತೀರ್ಪಿನ ಪುನರ್ ವಿಮರ್ಶೆ ಕೋರಿರುವ ಅರ್ಜಿಗಳಿಗೆ ಮೇ 4ರ ಒಳಗೆ ಉತ್ತರಿಸುವಂತೆ ಸರ್ವೋಚ್ಚ ನ್ಯಾಯಾಲಯ ಇಂದು ಕೇಂದ್ರ ಸರಕಾರಕ್ಕೆ ಆದೇಶಿಸಿದೆ.
ತೀರ್ಪು ಪರಾಮರ್ಶೆ ಕೋರಿರುವ ಅರ್ಜಿಗಳಿಗೆ ಉತ್ತರಿಸುವುದಕ್ಕೆ ತನಗೆ ನಾಲ್ಕು ವಾರಗಳ ಕಾಲಾವಕಾಶವನ್ನು ನೀಡುವಂತೆ ಕೇಂದ್ರ ಮಾಡಿಕೊಂಡ ಮನವಿಯನ್ನು ವರಿಷ್ಠ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠ ತಿರಸ್ಕರಿಸಿತು. ಈ ಶನಿವಾರದ ಒಳಗೆ ಉತ್ತರ ಸಲ್ಲಿಸಬೇಕೆಂದು ಕೋರ್ಟ್ ಕೇಂದ್ರ ಸರಕಾರಕ್ಕೆ ತಾಕೀತು ಮಾಡಿತು.
ಜಸ್ಟಿಸ್‌ಗಳಾದ ಎಸ್ ಕೆ ಕೌಲ್ ಮತ್ತು ಕೆ ಎಂ ಜೋಸೆಫ್ ಅವರನ್ನೂ ಒಳಗೊಂಡಿರುವ ಪೀಠವು ಪ್ರಕರಣದ ವಿಚಾರಣೆಯನ್ನು ಮೇ 6ಕ್ಕೆ ನಿಗದಿಸಿತು.