ಪ್ರಿಯಾಂಕಾ ವಾದ್ರಾ ಭದ್ರತೆ ಉಲ್ಲಂಘನೆ: ದೂರು ದಾಖಲು

Team Udayavani, Dec 2, 2019, 9:32 PM IST

ನವದೆಹಲಿ: ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರಿಗೆ ಒದಗಿಸಲಾಗಿರುವ “ಝಡ್‌ ಪ್ಲಸ್‌’ ಬಿಗಿಭದ್ರತೆಯನ್ನು ಕೆಲವು ಯುವಕರು ಉಲ್ಲಂಘಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಇಲಾಖೆಯ ಸಹಾಯಕ ಸಚಿವ ಜಿ. ಕಿರಣ್‌ ರೆಡ್ಡಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ನ. 26ರಂದು ಪ್ರಿಯಾಂಕಾ ಅವರು, ತಮ್ಮ ನಿವಾಸವಾದ ಲೋಧಿ ಎಸ್ಟೇಟ್‌ ಬಂಗಲೆಯ ಮುಂದಿನ ಪೋರ್ಟಿಕೋದಲ್ಲಿ ನಿಂತಿದ್ದಾಗ, ಏಕಾಏಕಿ ಕಾರೊಂದರಲ್ಲಿ ಆಗಮಿಸಿದ 7 ಯುವಕರ ತಂಡ ಸೀದಾ ಪೋರ್ಟಿಕೋವರೆಗೆ ತೆರಳಿದ್ದಲ್ಲದೆ, ಕಾರಿನಿಂದ ಇಳಿದು ಪ್ರಿಯಾಂಕಾ ಬಳಿಗೆ ಧಾವಿಸಿ, ಫೋಟೋ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್‌, ಘಟನೆಯ ವಿವರವನ್ನು ಪ್ರಿಯಾಂಕಾರವರ ಝಡ್‌ ಪ್ಲಸ್‌ ಭದ್ರತೆ ಜವಾಬ್ದಾರಿ ಹೊತ್ತಿರುವ ಸಿಆರ್‌ಪಿಎಫ್ಗೆ ಸೋಮವಾರ ಸಲ್ಲಿಸಿದೆ.

ನ.4ರಂದು ಕೇಂದ್ರ ಸರ್ಕಾರ, ಪ್ರಿಯಾಂಕಾ, ರಾಹುಲ್‌, ಸೋನಿಯಾ ಗಾಂಧಿಯವರ ಭದ್ರತೆಯನ್ನು ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ಮಟ್ಟದಿಂದ ಝಡ್‌ ಪ್ಲಸ್‌ ಮಟ್ಟಕ್ಕೆ ಇಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ