ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಸೇವಾವಧಿ ವಿಸ್ತರಣೆ?
Team Udayavani, Jun 28, 2022, 10:19 PM IST
ನವದೆಹಲಿ: ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ (91) ಅವರ ಸೇವೆಯನ್ನು ಮತ್ತೊಂದು ಅವಧಿಗೆ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.
2018ರಲ್ಲಿ ಅವರು ಈ ಹುದ್ದೆಗೆ ಆಗಮಿಸಿದ್ದ ಅವರ ಸೇವಾವಧಿ 2020ರಲ್ಲಿ ಮುಕ್ತಾಯವಾಗಬೇಕಿತ್ತು. ಆದರೆ ಅವರು ತಮ್ಮ ಸೇವಾವಧಿಯನ್ನು ಒಂದು ವರ್ಷಕ್ಕೆ ಮುಂದುವರಿಸುವಂತೆ ಕೋರಿದ್ದರು. ಅದನ್ನು ಸರ್ಕಾರ ಮಾನ್ಯ ಮಾಡಿತ್ತು.
ಕಳೆದ ವರ್ಷವೂ ಅವರನ್ನು ಅದೇ ಹುದ್ದೆಯಲ್ಲಿ ಮತ್ತೊಂದು ವರ್ಷ ಅವಧಿಗಾಗಿ ಮುಂದುವರಿಸಲಾಗಿತ್ತು. ಸದ್ಯಕ್ಕೆ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೊಳಪಟ್ಟಿರುವ ಮಹತ್ವದ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿರುವುದರಿಂದ ಅವರನ್ನು ಮತ್ತೊಂದು ಅವಧಿಗೆ ಮುಂದುವರಿಸಲು ಕೇಂದ್ರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.