ರಾಷ್ಟ್ರಪತಿ ರೇಸ್ನಲ್ಲಿ ಪವಾರ್, ಮೀರಾ ಹೆಸರು
Team Udayavani, May 12, 2017, 1:18 AM IST
ಹೊಸದಿಲ್ಲಿ: ರಾಷ್ಟ್ರಪತಿ ಚುನಾವಣೆಗೆ ಜಂಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿರುವ ವಿಪಕ್ಷಗಳು, ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲಿ ತೊಡಗಿವೆ. ಈ ನಡುವೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಮಾಜಿ ಸ್ಪೀಕರ್ ಮೀರಾ ಕುಮಾರ್, ಜೆಡಿ(ಯು)ಹಿರಿಯ ಮುಖಂಡ ಶರದ್ ಯಾದವ್ ಹಾಗೂ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲ್ ಗಾಂಧಿ ಅವರ ಹೆಸರುಗಳು ಬಲವಾಗಿ ಕೇಳಿಬರುತ್ತಿವೆ.
ಕಾಂಗ್ರೆಸ್, ಜೆಡಿ(ಯು), ಆರ್ಜೆಡಿ ಮತ್ತು ಎಡಪಕ್ಷಗಳನ್ನು ಒಳಗೊಂಡಂತೆ ವಿಪಕ್ಷಗಳ ಒಕ್ಕೂಟ, ಈ ನಾಲ್ವರ ಹೆಸರನ್ನು ಅಂತಿಮಗೊಳಿಸಿದೆ ಎಂದು ಹಿರಿಯ ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ. ರಾಜಕೀಯ ಅನುಭವದ ಆಧಾರದಲ್ಲಿ ಶರದ್ ಪವಾರ್ ಅವರನ್ನು ಪರಿಗಣಿಸಿದ್ದು, ದಲಿತ ಮುಖಂಡರು ಎಂಬ ಕಾರಣಕ್ಕೆ ಮೀರಾ ಕುಮಾರ್ ಅವರನ್ನು ಕಾಂಗ್ರೆಸ್ನಿಂದ ಆಯ್ಕೆ ಮಾಡಲಾಗಿದೆ. ಗಾಂಧೀಜಿಯವರ ಮೊಮ್ಮಗರಾಗಿರುವ ಗೋಪಾಲ್ ಗಾಂಧಿ ಹೆಸರನ್ನು ತೃಣಮೂಲ ಕಾಂಗ್ರೆಸ್ ಸೂಚಿಸಿದೆ ಎನ್ನಲಾಗಿದೆ.