ಭಾರತಾಂಬೆಯ ಮಡಿಲ ಮಿನುಗುವ ನಕ್ಷತ್ರಗಳು

Team Udayavani, Jan 27, 2020, 6:46 AM IST

ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿಗಳ ಪೈಕಿ 21 ಮಂದಿ ಎಲೆಮರೆಯ ಕಾಯಿಗಳಿಗೆ ಅವರ ನಿಸ್ವಾರ್ಥ ಸೇವೆಯನ್ನು ಗೌರವಿಸಲಾಗಿದೆ. ಈ ಮೂಲಕ ಕೇಂದ್ರ ಸರಕಾರ ತನ್ನನ್ನು
ತಾನೇ ಗೌರವಿಸಿಕೊಂಡಿದೆ ಎಂದರೆ ಸಮರ್ಥನೀಯ. ಪ್ರಸಕ್ತ ಸಾಲಿನ ಗೌರವ ಪಡೆದ ಕೆಲವು ಎಲೆಮರೆ ಕಾಯಿಗಳ ಪರಿಚಯ ಇಲ್ಲಿದೆ.

ಜಗದೀಶ್‌ ಲಾಲ್‌ ಅಹುಜಾ (ಲಂಗರ್‌ ಬಾಬಾ)
ವಯಸ್ಸು: 84, ಸಮಾಜ ಸೇವೆ, ಪಂಜಾಬ್‌

– ಚಂಡೀಗಡದಲ್ಲಿರುವ ಸ್ನಾತಕೋತ್ತರ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಹೊರಭಾಗದಲ್ಲಿ ಪ್ರತಿ ನಿತ್ಯ ಉಚಿತವಾಗಿ ಹಲವಾರು ಬಡ ರೋಗಿಗಳಿಗೆ ಉಚಿತ ಆಹಾರ ಪೂರೈಕೆ
– 1980ರಲ್ಲಿ ಉಚಿತ ಆಹಾರ ಪೂರೈಕೆ ಶುರು ಮಾಡಿದ್ದರು. ನಂತರ ಅವರು ಸ್ನಾತಕೋತ್ತರ ವೈದ್ಯಕೀಯ ಸಂಶೋಧನೆ ವಿಭಾಗದ ಹೊರಭಾಗಕ್ಕೆ 2 ಸಾವಿರನೇ ಇಸ್ವಿಯಲ್ಲಿ ಆಹಾರ ಪೂರೈಕೆ ಸ್ಥಳಾಂತರ. 15 ವರ್ಷಗಳ ಕಾಲ 2 ಸಾವಿರ ಮಂದಿಗೆ ನಿತ್ಯವೂ ಆಹಾರ ಪೂರೈಕೆ.
– ದೇಶ ವಿಭಜನೆಯ ಕಾಲದಲ್ಲಿ ಕೋಟ್ಯಧಿಪತಿಯಾಗಿದ್ದ ಅವರು ಬರಿಗೈನಲ್ಲಿ ಭಾರತಕ್ಕೆ ಬಂದಿದ್ದರು.
– ಉಚಿತ ಆಹಾರ ಪೂರೈಕೆ ಗುರಿ ಸಾಧಿಸಲು ಕೋಟ್ಯಂತರ ಮೌಲ್ಯ ರೂ.ಗಳ ಆಸ್ತಿ ಮಾರಾಟ ಮಾಡಿದ್ದರು. ಅವರಿಗೆ ಸ್ವತಃ ಹೊಟ್ಟೆಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ಸೇವೆಗೆ ಏನೂ ಬಾಧಕವಾಗಲಿಲ್ಲ.
– ಪಾಕಿಸ್ಥಾನದ ಪೇಶಾವರದಲ್ಲಿ ಜನಿಸಿರುವ ಅವರು, ದೇಶ ವಿಭಜನೆಗೊಂಡಾಗ ಕುಟುಂಬ ಪೋಷಣೆಯ ಹೊಣೆಗಾರಿಕೆ ವಹಿಸಿಕೊಂಡರು. ತಾವು ಕಳೆದುಕೊಂಡ ಬಾಲ್ಯವನ್ನು ಇತರ ಮಕ್ಕಳಿಗೆ ಆಹಾರ ಪೂರೈಸಿ ಅವರ ಸಂತೋಷವನ್ನು ತಮ್ಮದೆಂದು ಖುಷಿ ಪಡುತ್ತಾರೆ.

ಜಾವೇದ್‌ ಅಹ್ಮದ್‌ ತಖ್ತ್ (ಅನಂತ್‌ನಾಗ್‌ ಕೆ ಅಪ್ನೇ)
ವಯಸ್ಸು: 46, ದಿವ್ಯಾಂಗರ ಅಭಿವೃದ್ಧಿ, ಜಮ್ಮು – ಕಾಶ್ಮೀರ

– ಸ್ವತಃ ದಿವ್ಯಾಂಗರಾಗಿದ್ದುಕೊಂಡೇ ಎರಡು ದಶಕಗಳಿಂದ ಅಂಥ ಮಕ್ಕಳನ್ನು ಮುಖ್ಯವಾಹಿನಿಗೆ ಸೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.
– ವಿಶೇಷ ಮಕ್ಕಳಿಗಾಗಿ ‘ಝೈಬಾ ಅಪಾ ಸ್ಕೂಲ್‌’ ಅನ್ನು ಸ್ಥಾಪಿಸಿದ್ದಾರೆ. ಕಾಶ್ಮೀರದಲ್ಲಿ ಹ್ಯುಮಾನಿಟಿ ವೆಲ್ಫೇರ್‌ ಆರ್ಗನೈಸೇಷನ್‌ ಎಂಬ ಸಂಸ್ಥೆಯನ್ನೂ ನಡೆಸಿಕೊಂಡು ಬರುತ್ತಿದ್ದಾರೆ.
– ಅನಂತ್‌ನಾಗ್‌ ಮತ್ತು ಪುಲ್ವಾಮಾಗಳ 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಹಲವು ರೀತಿಯ ಮಕ್ಕಳ ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡುವಲ್ಲಿ ಮುತುವರ್ಜಿ
– 1997ರಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಬೆನ್ನು ಹುರಿಗೆ ಜಖಂ ಆದ ಬಳಿಕ ಅವರು ಗಾಲಿ ಕುರ್ಚಿ ಬಳಸುವಂತಾಯಿತು.
– ‘ಭಾಗವಾಗಿರಲಿ; ಪ್ರತ್ಯೇಕವಾಗುವುದು ಬೇಡ’ ಎಂಬ ತತ್ವದ
ಅನ್ವಯ ಜೀವನ.
– ಕಾಶ್ಮೀರದ ಅನಂತ್‌ನಾಗ್‌ನ ಬಿಜ್‌ಬೆಹಾರ ಮೂಲದವರು.

ಸತ್ಯನಾರಾಯಣ ಮುಂಡಯೂರ್‌ (ಅರುಣಾಚಲ ಪ್ರದೇಶದ ಅಂಕಲ್‌ ಮೂಸಾ)
ವಯಸ್ಸು: 69, ಸಮಾಜ ಸೇವೆ – ಕೈಗಟಕುವ ರೀತಿಯಲ್ಲಿ ಶಿಕ್ಷಣ, ಅರುಣಾಚಲ ಪ್ರದೇಶ

– ಅರುಣಾಚಲ ಪ್ರದೇಶದ ಕುಗ್ರಾಮಗಳಲ್ಲಿ ಶಿಕ್ಷಣ ಮತ್ತು ಓದುವ ಅಭಿರುಚಿ ಬೆಳೆಸಿದ ಹೆಗ್ಗಳಿಕೆ ಅವರದ್ದು.
– ವಕ್ರೋ, ಚೋಂಗ್‌ಖಾಮ್‌, ಲಾಥಾ, ಅಂಜಾ ಸೇರಿದಂತೆ ಹಲವಾರು ಕುಗ್ರಾಮಗಳಲ್ಲಿ 13 ‘ಬಾಂಬೂಸಾ ಲೈಬ್ರರಿ’ ಶುರು ಮಾಡಿದ್ದಾರೆ.
– ಅಮರಚಿತ್ರ ಕತೆಯಿಂದ ರೋಲ್ಡ್‌ ದಾಲ್‌, ರಸ್ಕಿನ್‌ ಬಾಂಡ್‌ ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಅವರ ಗ್ರಂಥಾಲಯಗಳಲ್ಲಿವೆ.
– ಮನೆಗಳಲ್ಲಿ ಗ್ರಂಥಾಲಯ ಹೊಂದುವ ಚಳವಳಿಯನ್ನು ಶುರು ಮಾಡಿದ ಹೆಗ್ಗಳಿಕೆ ಅವರದ್ದು.
– ಅರುಣಾಚಲ ಪ್ರದೇಶದ ಜನಪದದ ಬಗ್ಗೆ ಅವರು ಮಕ್ಕಳಿಗಾಗಿ ಮಲಯಾಳಂನಲ್ಲಿ ಪುಸ್ತಕ ಬರೆದಿದ್ದಾರೆ.
– ಕೇರಳದಲ್ಲಿ ಜನಿಸಿದ ಅವರು ಉದ್ಯೋಗ ನಿಮಿತ್ತ ಮುಂಬಯಿಗೆ ತೆರಳಿದ್ದರು. ಅಲ್ಲಿ ಅವರು ಕಂದಾಯ ಇಲಾಖೆ ಅಧಿಕಾರಿಯಾಗಿದ್ದರು. 1979ರಲ್ಲಿ ಅವರು ಅರುಣಾಚಲ ಪ್ರದೇಶದ ಲೋಹಿತ್‌ ಎಂಬಲ್ಲಿಗೆ ತೆರಳಿದರು.

ಅರುಣೋದಯ ಮಂಡಲ್‌ (ಸುಂದರ್‌ಬನ್‌ ಕೆ ಸುಜನ್‌)
ವಯಸ್ಸು: 66, ವೈದ್ಯಕೀಯ – (ಕೈಗಟಕುವ ರೀತಿಯ ಆರೋಗ್ಯ ವ್ಯವಸ್ಥೆ), ಪಶ್ಚಿಮ ಬಂಗಾಳ

– ಸುಂದರ್‌ಬನ್‌ನ ಅತ್ಯಂತ ಕುಗ್ರಾಮಗಳಲ್ಲಿ ಇರುವ ಜನರಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಅವರು ವಾರಾಂತ್ಯದಲ್ಲಿ ಆರು ಗಂಟೆಗಳ ಕಾಲ ಪ್ರಯಾಣ ಮಾಡುತ್ತಾರೆ.
– ಮಕ್ಕಳ ಸಂಬಂಧಿ ರೋಗ, ಹೃದಯ, ಕಣ್ಣು ಸೇರಿದಂತೆ ಹಲವಾರು ರೀತಿಯ ಚಿಕಿತ್ಸೆಗಳನ್ನು ವಾರಾಂತ್ಯದಲ್ಲಿ 250ಕ್ಕೂ ಅಧಿಕ ಮಂದಿಗೆ ಚಿಕಿತ್ಸೆ ನೀಡುತ್ತಾರೆ. ಅವರಲ್ಲಿ ಹೆಚ್ಚಿನವರು ಶೇ.80 ಮಂದಿ ಬಿಪಿಎಲ್‌ ವ್ಯಾಪ್ತಿಗೆ ಸೇರಿದವರು.
– ಅವರಿಗಾಗಿ ವೈದ್ಯಕೀಯ ತಪಾಸಣಾ ಶಿಬಿರ, ವಿವಿಧ ರೀತಿಯ ಔಷಧಗಳನ್ನು ನೀಡುತ್ತಾರೆ. ಇದರ ಜತೆಗೆ ರಕ್ತದಾನ ಶಿಬಿರಗಳ ಆಯೋಜನೆ ಮಾಡುತ್ತಾರೆ.
– 2 ಸಾವಿರನೇ ಇಸ್ವಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಪ್ರವಾಹ ಉಂಟಾದ ಬಳಿಕ ಅವರು ಸುಜನ್‌ ಫೌಂಡೇಷನ್‌ ಶುರು ಮಾಡುವ ಮೂಲಕ ಮನೆಯಲ್ಲಿಯೇ ಉಚಿತ ವೈದ್ಯ ತಪಾಸಣೆ, ಚಿಕಿತ್ಸೆ ನೀಡುತ್ತಿದ್ದಾರೆ.
– ಸುಜನ್‌ ಫೌಂಡೇಷನ್‌ ಶುರು ಮಾಡುವುದಕ್ಕಿಂತ ಮೊದಲು ಪಶ್ಚಿಮ ಬಂಗಾಳದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವೈದ್ಯಕೀಯ ಸಲಹೆ.
– ಇದುವರೆಗೆ ಸುಮಾರು 4 ಸಾವಿರ ಮಂದಿಗೆ ಚಿಕಿತ್ಸೆ ನೀಡಿದ್ದಾರೆ.
– ಬಡ ದಲಿತ ಕುಟುಂಬಕ್ಕೆ ಸೇರಿರುವ ಅವರು, ಶಿಕ್ಷಣ ವೆಚ್ಚ ಮತ್ತು ಇತರ ಅಗತ್ಯಗಳನ್ನು ಭರಿಸಿಕೊಳ್ಳಲು ಕಠಿನ ಶ್ರಮ ಪಟ್ಟಿದ್ದರು.

ಸುಂದರಂ ವರ್ಮಾ
ವಯಸ್ಸು: 68, ಸಮಾಜ ಸೇವೆ ಪರಿಸರ ಸಂರಕ್ಷಣೆ- ಅರಣ್ಯೀಕರಣ, ರಾಜಸ್ಥಾನ‌

– ರಾಜಸ್ಥಾನದ ಶೇಖಾವತಿ ಪ್ರದೇಶದಲ್ಲಿ ನೀರು ಕಡಿಮೆ ಬಳಕೆ ಮಾಡುವ ಮೂಲಕ ಒಣ ಪ್ರದೇಶದಲ್ಲಿ ಅರಣ್ಯೀಕರಣ ಎಂಬ ಹೆಸರಿನಲ್ಲಿ 50 ಸಾವಿರ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ.
– ಮಳೆಯಿಂದ ಬಿದ್ದ ನೀರನ್ನು ಪೋಲಾಗದಂತೆ ಮಾಡಲು ಭೂಮಿಯನ್ನು ಅಗೆಯುವ ತಂತ್ರಜ್ಞಾನ ಅಳವಡಿಸಿದರು. ನೆಲವನ್ನು ಉಳುವ ಮೂಲಕ ಕಳೆಗಳನ್ನು ತೆಗೆದರು. ನಂತರ ಗಿಡ ನೆಟ್ಟರು. ಆಳವಾದ ಗುಂಡಿಯಲ್ಲಿ 1 ಲೀಟರ್‌ ನೀರು ಹಾಕಿ ಗಿಡ ಬೆಳೆಸಿದರು.
– 6 ನರ್ಸರಿಗಳ ಸ್ಥಾಪನೆ. ಅವುಗಳ ಮೂಲಕ 1,50,000 ಗಿಡಗಳ ವಿತರಣೆ.
– ಸ್ಥಳೀಯವಾಗಿ ಬಳಕೆ ಮಾಡುವ ಬಿತ್ತನೆ ಬೀಜ, ಬೆಳೆ, ಗಿಡಗಳನ್ನು ಸಂರಕ್ಷಿಸಿದ್ದಾರೆ.
– ಒಣ ಭೂಮಿ ಪ್ರದೇಶದಲ್ಲಿ ಅರಣ್ಯೀಕರಣ ಮಾಡಿ ಜೀವ ವೈವಿಧ್ಯ ಬೆಳೆಸಿದ ಹೆಗ್ಗಳಿಕೆ ಹೊಂದಿದ್ದಾರೆ.

ಮೊಹಮ್ಮದ್‌ ಷರೀಫ್ (ಚಾಚಾ ಷರೀಫ್)
ವಯಸ್ಸು: 80, ಸಮಾಜ ಸೇವೆ (ಅಂತಿಮ ಸಂಸ್ಕಾರ ನೆರವೇರಿಸುವುದು), ಉತ್ತರ ಪ್ರದೇಶ

– ಇಪ್ಪತ್ತೈದು ವರ್ಷಗಳಿಂದ ಗುರುತು ಪರಿಚಯ ಇಲ್ಲದೇ ಇರುವ ಸುಮಾರು 25 ಸಾವಿರಕ್ಕೂ ಅಧಿಕ ಶವಗಳಿಗೆ ಅಂತಿಮ ಸಂಸ್ಕಾರ ಮಾಡಿದ ಹೆಗ್ಗಳಿಕೆ ಅವರದ್ದು.
– ನಿಗದಿತ ಸಮಾಜಕ್ಕೆಂದೇ ಅಂಟಿಕೊಳ್ಳದೇ ಎಲ್ಲಾ ಸಮುದಾಯದ ಶವಗಳನ್ನು ಸೂಕ್ತ ಕ್ರಮದಂತೆ ಅಂತ್ಯ ಸಂಸ್ಕಾರ ಮಾಡಿ ಕೋಮು ಸೌಹಾರ್ದತೆಗೆ ಮತ್ತೂಂದು ಹೆಸರೇ ಫೈಜಾಬಾದ್‌ನ ಮೊಹಮ್ಮದ್‌ ಷರೀಫ್ ಎಂಬ ಮನ್ನಣೆಗೆ ಪಾತ್ರರು.
– ಮೂಲತಃ ವೃತ್ತಿಯಲ್ಲಿ ಸೈಕಲ್‌ ದುರಸ್ತಿ.

ಅಬ್ದುಲ್‌ ಜಬ್ಬಾರ್‌ (ಭೋಪಾಲದ ಧ್ವನಿ)
ವಯಸ್ಸು: 63, ಸಮಾಜ ಸೇವೆ, ಮಧ್ಯಪ್ರದೇಶ

– ಭೋಪಾಲ ಅನಿಲ ದುರಂತದಿಂದ ನೊಂದ ಮಹಿಳಾ ಉದ್ಯೋಗಸ್ಥರ ಸಂಘಟನೆಯ ಸಂಚಾಲಕ.
– ಮರಣೋತ್ತರವಾಗಿ ಅವರಿಗೆ ಈ ಗೌರವ ನೀಡಲಾಗಿದೆ.
– ಜನರ ಪರವಾದ ಚಳವಳಿಯಲ್ಲಿ 35 ವರ್ಷಗಳ ಅನುಭವ. ಸಣ್ಣ ಪಂಪ್‌ ಫಿಟ್ಟರ್‌ನಿಂದ ಹಿಡಿದು ಸಾರ್ವಜನಿಕ ಸಮಸ್ಯೆಗಳಿಗೆ ಹೋರಾಡಿದ್ದಾರೆ.
– 2,300 ಮಂದಿಗೂ ಅಧಿಕ ವಿಧವೆಯರಿಗೆ ವೃತ್ತಿಪರ ತರಬೇತಿ ನೀಡಿದ್ದಾರೆ.
– ದುರಂತದಿಂದ ನೊಂದವರಿಗೆ ವೈದ್ಯಕೀಯ ಪರಿಹಾರ ಕೊಡಿಸಲು ಕೋರ್ಟ್‌ಗಳಲ್ಲಿ ಮೊಕದ್ದಮೆ ಹೂಡಿ ಹೋರಾಟ ಮಾಡಿದ ಹೆಗ್ಗಳಿಕೆ.
– ಭೋಪಾಲ ಅನಿಲ ದುರಂತದಿಂದಾಗಿ ಅವರು ತಮ್ಮ ಕುಟುಂಬ ಕಳೆದುಕೊಂಡರು. ಅವರು ಸ್ವತಃ ಶ್ವಾಸಕೋಶದ ಫೈಬ್ರೋಸಿಸ್‌ನಿಂದ ನರಳುತ್ತಿದ್ದಾರೆ.
– ಅಪಘಾತವೊಂದರಿಂದಾಗಿ ಶೇ.50ರಷ್ಟು ದೃಷ್ಟಿ ಕಳೆದುಕೊಂಡಿದ್ದಾರೆ.

ರಾಧಾ ಮೋಹನ್‌, ಸಬರಮತಿ (ಸಂಭವ್‌ ಸೇ ಸಂಚಯ)
ವಯಸ್ಸು: 76, 47, ಇತರ- ಸಹಜ ಕೃಷಿ, ಒಡಿಶಾ

– ರೈತರಿಗಾಗಿ ಸಂಭವ ಎಂಬ ಸಂಪನ್ಮೂಲ ಕೇಂದ್ರವನ್ನು ಶುರು ಮಾಡಿದ್ದರು. ದೇಶದ ಎಲ್ಲಾ ಭಾಗಗಳಿಂದ ಬಂದ ರೈತರು ಸ್ಥಳೀಯ ಮತ್ತು ಸಹಜ ಕೃಷಿ ನಡೆಸುವ ಬಗ್ಗೆ ತರಬೇತಿ ಮತ್ತು ಬೀಜಗಳ ವಿನಿಯಮಕ್ಕೆ ಅವಕಾಶ.
– ವಿನಾಶದ ಅಂಚಿನಲ್ಲಿದ್ದ ಲವಂಗ, ಬ್ಲಾಕ್‌ ರೈಸ್‌ ಸೇರಿದಂತೆ ಹಲವಾರು ತಳಿಗಳನ್ನು ಅವರು ಉಳಿಸಿದ್ದಾರೆ.
– ನಯಾಗಢ್‌ ಜಿಲ್ಲೆಯ 36 ಹೆಕ್ಟೇರ್‌ ಜಮೀನಿನಲ್ಲಿ ವಿವಿಧ ರೀತಿಯ ಆಹಾರ ಬೆಳೆಗಳನ್ನು ಬೆಳೆದಿದ್ದಾರೆ. ಅಲ್ಲಿ ಅವರು ನೀರಿನ ಬಳಕೆಯ ತಂತ್ರಜ್ಞಾನ, ವಿವಿಧ ರೀತಿಯ ಮಣ್ಣುಗಳನ್ನು ಬಳಸಿದ್ದರು.
– ಈ ಅರಣ್ಯದಲ್ಲಿ 1 ಸಾವಿರ ವಿವಿಧ ತಳಿಗಳ ಗಿಡಗಳು ಇವೆ ಮತ್ತು 500 ವಿಧದ ಅಕ್ಕಿಯ ತಳಿಗಳು ಇವೆ. 700 ವಿವಿಧ ರೀತಿಯ ಬೀಜಗಳನ್ನು ಸಂಗ್ರಹಿಸಿ ಇರಿಸಲಾಗಿದೆ.
– ವಿವಿಧ ರೀತಿಯ ಪ್ರಾದೇಶಿಕ ಬೆಳೆಗಳನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ “ಬೀಜ ದತ್ತು’ ಎಂಬುದನ್ನು ಜಾರಿಗೆ ತಂದರು.
– ರಾಧಾ ಮೋಹನ್‌ ಅವರು ಅರ್ಥಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ. ಪತ್ನಿ ಸಬರಮತಿ ತಳಿಗಳ ಸಂರಕ್ಷಕಿ.

ಮುನ್ನಾ ಮಾಸ್ಟರ್‌
ವಯಸ್ಸು: 61, ಕಲೆ- ಭಜನೆ ಹಾಡುಗಳು, ರಾಜಸ್ಥಾನ‌

– ಸಾಂಪ್ರದಾಯಿಕವಾಗಿ ಭಜನೆಗಳನ್ನು ಹಾಡುವ ಅವರು ಜೈಪುರ ಜಿಲ್ಲಿಯ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಅವರು ರಾಮ ಮತ್ತು ಕೃಷ್ಣನಿಗೆ ಸಂಬಂಧಿಸಿದ ಭಜನೆಗಳನ್ನು ಹಾಡುತ್ತಾರೆ.
– ಕೃಷ್ಣ ಮತ್ತು ಗೋವುಗಳ ಬಗ್ಗೆ ಹಲವಾರು ಭಜನೆಗಳನ್ನು ಬರೆದಿದ್ದಾರೆ.
– ಜೈಪುರ ಜಿಲ್ಲೆಯಲ್ಲಿ ಅವರು ಬರೆದ “ಶ್ರೀ ಶ್ಯಾಮ ಸುರಭಿ ವಂದನಾ’ ಎಂಬ ಪುಸ್ತಕ ಜನಪ್ರಿಯ
– ಅವರು ಸಂಸ್ಕೃತ ಶ್ಲೋಕಗಳನ್ನು ಹಾಡುತ್ತಾರೆ. ಭಜನೆಗಳು ಮತ್ತು ಗೋವುಗಳ ರಕ್ಷಣೆಯಲ್ಲಿ ನಿರತರು.

ಪೋಪಟ್‌ ರಾವ್‌ ಪವಾರ್‌ (ಗ್ರಾಮ ಸ್ವರಾಜ್ಯದ ಸೂಪರ್‌ ಸರಪಂಚ್‌)
ವಯಸ್ಸು: 60, ಸಮಾಜ ಸೇವೆ- ನೀರಿನ ಬಳಕೆ, ಮಹಾರಾಷ್ಟ್ರ‌

– ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಹಿವಾರೆ ಬಝಾರ್‌ ಗ್ರಾಮದ ಅಧ್ಯಕ್ಷ
– ಒಂದು ಕಾಲದಲ್ಲಿ ಬರಡು ಭೂಮಿಯಾಗಿದ್ದ ಗ್ರಾಮವನ್ನು ಮಾದರಿಯಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಿದ್ದಾರೆ.
– ಈ ಗ್ರಾಮದಲ್ಲಿ ಈಗ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳೇ ಇಲ್ಲ. ಮದ್ಯಪಾನ ಮಾಡುವವರು ಇಲ್ಲ. 1992ರಲ್ಲಿಯೇ ಬಯಲು ಶೌಚಮುಕ್ತ ಗ್ರಾಮ ಎಂದು ಘೋಷಣೆ ಮಾಡಿಕೊಂಡಿದೆ.
– ಮದುವೆಗೆ ಮುನ್ನವೇ ಎಚ್‌ಐವಿ ಪರೀಕ್ಷೆ ಮಾಡಿಸಿಕೊಳ್ಳುವುದನ್ನು ಕಡ್ಡಾಯ ಮಾಡಿಕೊಂಡ ಬಳಿಕ ಅಲ್ಲಿ ಅದರ ಪ್ರಮಾಣ ಕಡಿಮೆಯಾಗಿದೆ.
– ಮಳೆ ನೀರಿನ ಇಂಗಿಸುವಿಕೆಗೆ 40 ಸಾವಿರ ಗುಂಡಿಗಳ ನಿರ್ಮಾಣ.
– ಇದುವರೆಗೆ ಸುಮಾರು 4.5 ಲಕ್ಷ ಗಿಡಗಳ ನಾಟಿ.

ರವಿ ಕಣ್ಣನ್‌ (ಸಿಲ್ಚಾರ್‌ ಅನ್ನು ಬದುಕಿಸಿದಾತ)
ವಯಸ್ಸು: 55, ವೈದ್ಯಕೀಯ- ಕ್ಯಾನ್ಸರ್‌ ಚಿಕಿತ್ಸೆ, ಅಸ್ಸಾಂ

– ಚೆನ್ನೈ ಮೂಲದ ಖ್ಯಾತ ಶಸ್ತ್ರಚಿಕಿತ್ಸಾ ಕ್ಯಾನ್ಸರ್‌ ತಜ್ಞರಾಗಿರುವ ಅವರು ಬರಾಕ್‌ ಕಣಿವೆಯಲ್ಲಿ ಸುಮಾರು 70 ಸಾವಿರಕ್ಕೂ ಅಧಿಕ ಮಂದಿಗೆ ಉಚಿತವಾಗಿಯೇ ಚಿಕಿತ್ಸೆ ನೀಡಿದ್ದಾರೆ.
– ವಸತಿ, ಆಹಾರ, ಉದ್ಯೋಗ ಮತ್ತು ರೋಗದ ಬಗ್ಗೆ ಅರಿವು ಮೂಡಿಸುವ ವ್ಯವಸ್ಥೆ ಅವರು ನೀಡುವ ಚಿಕಿತ್ಸಾ ಪದ್ಧತಿಯಲ್ಲಿ ಸೇರಿಕೊಂಡಿತ್ತು.
– ಗ್ರಾಮೀಣ ಪ್ರದೇಶದಲ್ಲಿದ್ದ ಕ್ಯಾನ್ಸರ್‌ ಕೇಂದ್ರವನ್ನು ಪೂರ್ಣ ಪ್ರಮಾಣದ ಕ್ಯಾನ್ಸರ್‌ ಚಿಕಿತ್ಸೆ ಮತ್ತು ಸಂಶೋಧನಾ ಕೇಂದ್ರವನ್ನಾಗಿ ಪರಿವರ್ತಿಸಿದರು.
– ಮನೆ ಬಾಗಿಲಿಗೇ ಆರೋಗ್ಯ ಮತ್ತು ಸ್ಯಾಟಲೈಟ್‌ ಕ್ಲಿನಿಕ್‌ಗಳನ್ನು ಅವರು ಜಾರಿಗೆ ತಂದರು.
– ಬರಾಕ್‌ ಕಣಿವೆಯಲ್ಲಿ ಉತ್ತಮ ಸೇವೆ ನೀಡಲೋಸುಗ ಚೆನ್ನೈನಲ್ಲಿದ್ದ ಉದ್ಯೋಗ ತೊರೆದು 2007ರಲ್ಲಿ ಕುಟುಂಬದ ಜತೆಗೆ ಅಸ್ಸಾಂಗೆ ಬಂದರು. ಬರಾಕ್‌ ಕಣಿವೆಯಲ್ಲಿ ಆಸ್ಪತ್ರೆಗೆ ಹೋಗಬೇಕಾದರೆ ಸಮೀಪ ಎಂದರೂ 300 ಕಿಮೀ ದೂರಕ್ಕೆ ಪ್ರಯಾಣಿಸಬೇಕಾಗಿತ್ತು.

ಉಷಾ ಚೌಮಾರ್‌ (ಸುಲಭದಿಂದ ಸ್ವಚ್ಛತೆ)
ವಯಸ್ಸು: 53, ಸಮಾಜ ಸೇವೆ- ನೈರ್ಮಲ್ಯ, ರಾಜಸ್ಥಾನ

– ದಲಿತ ಸಮುದಾಯಕ್ಕೆ ಸೇರಿದ ಇವರು ಕಠಿನ ನಿಲುವು ಮತ್ತು ಸಬಲೀಕರಣಕ್ಕೆ ಮತ್ತೂಂದು ಉದಾಹರಣೆ ಎನ್ನಲಡ್ಡಿಯಿಲ್ಲ. ಒಂದು ಕಾಲದಲ್ಲಿ ಅಸಹಾಯಕವಾಗಿದ್ದ ಅವರು ಈಗ ಸಾವಿರಾರು ಮಂದಿಯ ಧ್ವನಿಯಾಗಿದ್ದಾರೆ.
– ಏಳನೇ ವಯಸ್ಸಿನಿಂದ ಅವರು ಮಲ ಹೊರುವ ಕೆಲಸ ಮಾಡುತ್ತಿದ್ದರು. ಹತ್ತನೇ ವಯಸ್ಸಿಗೆ ವಿವಾಹವಾಗಿ ಪಡಬಾರದ ಕಷ್ಟಗಳನ್ನು ಅನುಭವಿಸಿದರು.
– ಸುಲಭ್‌ ಇಂಟರ್‌ನ್ಯಾಷನಲ್‌ನ ನಯೀ ದಿಶಾ ಎಂಬ ಎನ್‌ಜಿಒ ಅವರ ನೆರವಿಗೆ ಬಂದಿತು. ಅವರ ಕಠಿನ ಪರಿಶ್ರಮದ ಹಿನ್ನೆಲೆಯಲ್ಲಿ ಅವರು ಈಗ ಸುಲಭ್‌ ಇಂಟರ್‌ನ್ಯಾಷನಲ್‌ ಸೋಶಿಯಲ್‌ ಸರ್ವಿಸ್‌ ಆರ್ಗನೈಸೇಷನ್‌ನ ಅಧ್ಯಕ್ಷರು. ಅದರ ಮೂಲಕ ಮಾನವರು ಮಲ ಹೊರುವ ಕೆಲಸದ ವಿರುದ್ಧ ಜಾಗೃತಿ ಮೂಡಿಸುವುದು, ಹೋರಾಟ ನಡೆಸುತ್ತಿದ್ದಾರೆ.

ಮುಳಿಕ್ಕಲ್‌ ಪಂಕಜಾಕ್ಷಿ
ವಯಸ್ಸು: 70, ಕಲೆ – ಬೊಂಬೆಯಾಟ, ಕೇರಳ

– ನೊಕ್ಕುವಿದ್ಯಾ ಪವಕಳಿ ಎಂಬ ಸಾಂಪ್ರದಾಯಿಕ ಕಲೆಗಳನ್ನು ಸಂರಕ್ಷಿಸಿದ ಹೆಗ್ಗಳಿಕೆ ಅವರದ್ದು.
– ದೇಶದ ವಿವಿಧ ಭಾಗಗಳು ಮತ್ತು ವಿಶ್ವದ ಹಲವು ರಾಷ್ಟ್ರಗಳಲ್ಲಿ ಎಂಟನೇ ವಯಸ್ಸಿನಿಂದಲೇ ಅವರು ಕಾರ್ಯಕ್ರಮ ನೀಡಲಾರಂಭಿಸಿದ್ದರು.
– ಪಂಕಜಾಕ್ಷಿ ಅವರ ಕುಟುಂಬದಲ್ಲಿ 5 ಶತಮಾನಗಳಿಂದ ನೊಕ್ಕುವಿದ್ಯಾ ಪವಕಳಿ ಎಂಬ ಸಾಂಪ್ರದಾಯಿಕ ಬೆಂಬೆಯಾಟವನ್ನು ಉಳಿಸಿ, ಬೆಳೆಸಿ, ಪ್ರದರ್ಶಿಸುತ್ತಿದ್ದಾರೆ.
– ಸಂಪೂರ್ಣ ರಾಮಾಯಣ ಮತ್ತು ಮಹಾಭಾರತ ವನ್ನು ಅದರ ಮೂಲಕ ಹೇಳಲಾಗುತ್ತದೆ.
– ಈ ಮಾದರಿಯ ಕಲೆಗೆ ಸಂಪೂರ್ಣ ರೀತಿಯಲ್ಲಿ ಗಮನ ಕೇಂದ್ರೀಕೃತಗೊಂಡಿರಬೇಕು ಮತ್ತು ತರಬೇತಿ ಬೇಕು.
– ಮೊಮ್ಮಗಳು ಕೆ.ಎಸ್‌.ರಂಜಿನಿ ಅವರಿಗೆ ಈ ಸಾಂಪ್ರದಾಯಿಕ ಜ್ಞಾನದ ವರ್ಗಾವಣೆ ಮಾಡಿದ್ದಾರೆ.

ಕುಶಲ್‌ ಕೊನ್ವರ್‌ ಶರ್ಮಾ (ಆನೆಯ ಗೆಳೆಯ)
ವಯಸ್ಸು: 60, ವೈದ್ಯಕೀಯ- ಪಶುಸಂಗೋಪನೆ, ಅಸ್ಸಾಂ

– ಗುವಾಹಟಿಯಲ್ಲಿ ಪಶು ವೈದ್ಯರು. ಏಷ್ಯಾದಲ್ಲಿರುವ ಆನೆಗಳ ಸಂತತಿ ಅಭಿವೃದ್ಧಿಗೆ ಜೀವನ ಮುಡಿಪಾಗಿಟ್ಟಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಅವರು ಒಂದೇ ಒಂದು ವಾರಾಂತ್ಯದಲ್ಲಿ ಬಿಡುವು ತೆಗೆದುಕೊಂಡಿಲ್ಲ.
– ಪ್ರತಿ ವರ್ಷ 700 ಆನೆಗಳಿಗೆ ಚಿಕಿತ್ಸೆ.
– ಆನೆಗಳಿಗೆ ಅರವಳಿಕೆ ನೀಡುವ ನಿಟ್ಟಿನಲ್ಲಿ ನಡೆದ ಸಂಶೋಧನೆಯಲ್ಲಿ ಅವರ ಪಾತ್ರ ಹಿರಿದು. ಈಶಾನ್ಯ ರಾಜ್ಯದ ಪ್ರದೇಶಗಳಲ್ಲಿ ದೂರದಿಂದಲೇ ಆನೆಗಳಿಗೆ ಅರವಳಿಗೆ ನೀಡುವ ಪದ್ಧತಿ ಜಾರಿ ಮಾಡಿದ ಹೆಗ್ಗಳಿಕೆ ಅವರದ್ದು.
– ಈ ಸುದೀರ್ಘ‌ ಅವಧಿಯಲ್ಲಿ 20 ಬಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
– ಖಡ್ಗಮೃಗಳ ಅಭಿವೃದ್ಧಿ- ಸಂರಕ್ಷಣೆಯಲ್ಲೂ ತೊಡಗಿಸಿಕೊಂಡಿದ್ದಾರೆ. ದೇಶದ ವಿವಿಧ ಭಾಗಗಳಿಗೆ ತೆರಳಿ ಅವುಗಳಿಗೆ ಶಸ್ತ್ರಚಿಕಿತ್ಸೆಯನ್ನೂ ಮಾಡಿದ್ದಾರೆ.
– ಅಸ್ಸಾಂನ ಪಶು ವೈದ್ಯ ಕಾಲೇಜಿನಲ್ಲಿ ಸರ್ಜರಿ ಮತ್ತು ರೇಡಿಯಾಲಜಿ ವಿಭಾಗದ ಮುಖ್ಯಸ್ಥ
– ಗಾಯಗೊಂಡ ಆನೆಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಅಸುನೀಗಿದ್ದೇ ಆನೆಗಳ ಸಂರಕ್ಷಣೆಗೆ ಪ್ರೇರಣೆ.

ಎಸ್‌. ರಾಮಕೃಷ್ಣನ್‌ (ಅಮರ್‌ ಸೇವನಿ)
ವಯಸ್ಸು: 65, ಸಮಾಜ ಸೇವೆ - ದಿವ್ಯಾಂಗರ ಅಭಿವೃದ್ಧಿ, ತಮಿಳುನಾಡು

– 40 ವರ್ಷಗಳ ಕಾಲ 800 ಗ್ರಾಮಗಳಲ್ಲಿ 14 ಸಾವಿರ ದಿವ್ಯಾಂಗರಿಗೆ ಪುನರ್ವಸತಿ ನೀಡಿದ ಹೆಗ್ಗಳಿಕೆ.
– ದಿವ್ಯಾಂಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈಗ ದೇಶದಲ್ಲಿ ಅತ್ಯಂತ ದೊಡ್ಡದು ಎಂಬ ಹೆಗ್ಗಳಿಕೆ ಪಡೆದಿರುವ ಅಮರ ಸೇವಾ ಸಂಘ ಸ್ಥಾಪನೆ.
– ವಸತಿ, ವೈದ್ಯಕೀಯ ಚಿಕಿತ್ಸೆ, ಶಿಕ್ಷಣ, ವೃತ್ತಿ ಶಿಕ್ಷಣ ಮತ್ತು ಉದ್ಯೋಗ ಅವರ ಸಹಾಯದಲ್ಲಿ ಸೇರಿದೆ.
– ಸೆರೆಬರಲ್‌ ಫಾಲ್ಸಿ ಮತ್ತು ಹೆಚ್ಚು ಚುರುಕು ಇಲ್ಲದ ಮಕ್ಕಳ ಪೋಷಣೆಗಾಗಿ ಕೇಂದ್ರ ನಡೆಸುತ್ತಿದ್ದಾರೆ.
– ಸ್ವತಃ ಅವರೇ, 20 ವರ್ಷದವರಿದ್ದಾಗ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ನೌಕಾಪಡೆಗೆ ನೇಮಕ ಸಂದರ್ಭದ ಪರೀಕ್ಷೆ ವೇಳೆ ಅದು ನಡೆದಿತ್ತು.

ರಹಿಬಾಯಿ ಸೋಮ ಪೊಪೆರೆ
ವಯಸ್ಸು: 56, ಇತರ – ಸಹಜ ಕೃಷಿ, ಮಹಾರಾಷ್ಟ್ರ

– ಬುಡಕಟ್ಟು ಸಮುದಾಯಕ್ಕೆ ಸೇರಿದ ಅವರು ಅನಕ್ಷರಸ್ಥೆ. ಅಹ್ಮದ್‌ನಗರ ಜಿಲ್ಲೆಯವರಾದ ಅವರು ಸಿಎಸ್‌ಐಆರ್‌ನಿಂದ ‘ಬೀಜಗಳ ತಾಯಿ’ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
– ಸಂರಕ್ಷಿಸಿದ ಐವತ್ತು ಎಕರೆ ಪ್ರದೇಶದಲ್ಲಿ ಹಲವು ರೀತಿಯ ತಳಿಗಳ ಅಕ್ಕಿ ಮತ್ತು ತರಕಾರಿಗಳನ್ನು ಬೆಳೆಯುತ್ತಾರೆ.
– ಸಾಂಪ್ರದಾಯಿಕ ಬುಡಕಟ್ಟು ಶೈಲಿಯಲ್ಲಿ ಬಳಕೆ ಮಾಡುವ ಹಲವಾರು ತಳಿಗಳ ಬಿತ್ತನೆ ಬೀಜಗಳನ್ನು ಸಂರಕ್ಷಿಸಿ ‘ಬೀಜ ಬ್ಯಾಂಕ್‌’ ಸ್ಥಾಪನೆ ಮಾಡಿದ್ದಾರೆ.
– ನೀರಿನ ಉಳಿಕೆಗೆ ಹಲವು ರೀತಿಯ ವಿನೂತನ ಕ್ರಮಗಳನ್ನು ಕೈಗೊಂಡಿದ್ದಾರೆ.
– ಸುಧಾರಿತ ಬೆಳೆ ಪದ್ಧತಿ ಅನುಸರಿಸುವ ಮೂಲಕ ಶೇ.30ರಷ್ಟು ಹೆಚ್ಚು ಬೆಳೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ