ಕಪಿಲ್ ಸಿಬಲ್ ಕೊರಳಿಗೆ ಭೂ ಹಗರಣದ ಉರುಳು
Team Udayavani, Mar 30, 2018, 10:40 AM IST
ಹೊಸದಿಲ್ಲಿ: ನ್ಯಾಷನಲ್ ಹೆರಾಲ್ಡ್ ಭೂ ಅವ್ಯವಹಾರ ಪ್ರಕರಣವನ್ನೇ ಹೋಲುವ ಅವ್ಯವಹಾರದ ಆರೋಪ ಇದೀಗ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ವಿರುದ್ಧ ಕೇಳಿಬಂದಿದೆ. ದಿಲ್ಲಿಯ ಜನನಿಬಿಡ ಸ್ಥಳದಲ್ಲಿರುವ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿ ಮಾಡಿದ ಆರೋಪ ಸಿಬಲ್ ವಿರುದ್ಧ ಮಾಡಲಾಗಿದೆ.
ದಕ್ಷಿಣ ಆಫ್ರಿಕಾದ ‘ಡೈಲಿ ಮಾವೆರಿಕ್’ ಎಂಬ ಸುದ್ದಿ ಸಂಸ್ಥೆ ನಡೆಸಿದ ತನಿಖೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. 89 ಕೋಟಿ ರೂ. ಮೌಲ್ಯದ ಭೂಮಿಯನ್ನು ಹೊಂದಿರುವ ಕಂಪನಿ ಗ್ರಾಂಡೆ ಕಾಸ್ಟೆಲೋ ಪ್ರೈವೇಟ್ ಲಿ.ನಲ್ಲಿ ಸಿಬಲ್, ಪತ್ನಿ ಪ್ರಮೀಳಾ ಸಿಬಲ್ ತಲಾ ಶೇ.50ರಷ್ಟು ಹೂಡಿಕೆ ಮಾಡಿದ್ದಾರೆ. ಸಿಬಲ್ ಕೇವಲ 1 ಲಕ್ಷ ರೂ.ಗೆ ಈ ಹೂಡಿಕೆ ಮಾಡಿದ್ದು, 89 ಕೋಟಿಯ ಭೂಮಿ ಕೇವಲ 1 ಲಕ್ಷ ರೂ.ಗೆ ಸಿಬಲ್‌ಗೆ ಸಿಕ್ಕಂತಾಗಿದೆ.
ಈ ಬಗ್ಗೆ ಮಾತನಾಡಿದ ಸಚಿವೆ ಸ್ಮತಿ ಇರಾನಿ, ಅಕ್ರಮ ಭೂ ವಹಿವಾಟುಗಳ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ವಿವರಣೆ ನೀಡಬೇಕು ಎಂದಿದ್ದಾರೆ. ಇದೇ ವೇಳೆ ಯಾವುದೇ ಅಕ್ರಮ ನಡೆದಿಲ್ಲ ಎಂದು ಸಿಬಲ್ ಹೇಳಿದ್ದು, ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ.