ಕೇರಳ ಪ್ರವೇಶಿಸಿದ ಮುಂಗಾರು?

Team Udayavani, May 29, 2018, 6:00 AM IST

ಹೊಸದಿಲ್ಲಿ: ಪ್ರಸಕ್ತ ಸಾಲಿನ ಮುಂಗಾರು ಮಾರುತ ಸೋಮವಾರ ಕೇರಳ ಪ್ರವೇಶಿಸಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್‌ ಹೇಳಿಕೊಂಡಿದೆ. ಆದರೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) 24 ತಾಸುಗಳ ಒಳಗಾಗಿ ಮುಂಗಾರು ಪ್ರವೇಶಿಸಲಿದೆ ಎಂದು ಸೋಮವಾರ ಮುನ್ಸೂಚನೆ ನೀಡಿದೆ.

ಈ ಕುರಿತು ಮಾಹಿತಿ ನೀಡಿದ ಸ್ಕೈಮೆಟ್‌ ಸಿಇಒ ಜತಿನ್‌ ಸಿಂಗ್‌, ಕೇರಳದಲ್ಲಿ ಮುಂಗಾರು ವಾತಾವರಣ ನಿರ್ಮಾಣವಾಗಿದ್ದು, ಸೋಮವಾರ ನೈಋತ್ಯ ಮಾರುತ ಪ್ರವೇಶಿಸಿದೆ ಎಂದಿದ್ದಾರೆ. ಆದರೆ ಹವಾಮಾನ ಇಲಾಖೆ, ಮೇ 10ರ ಬಳಿಕ ಮಂಗಳೂರು, ಕೊಲ್ಲಂ, ತಿರುವನಂತಪುರ ಸಹಿತ 14 ಸ್ಥಳಗಳಲ್ಲಿ ಸತತ 2 ದಿನ 2.5 ಮಿ.ಮೀ. ಅಥವಾ ಹೆಚ್ಚು ಮಳೆಯಾದರೆ, ಅದರ ಮಾರನೇ ದಿನ ಕೇರಳಕ್ಕೆ ಮುಂಗಾರು ಪ್ರವೇಶಿಸಿದೆ ಎಂದು ಘೋಷಿಸಲು ಸಾಧ್ಯ ಎಂದಿದೆ.

ನಾಲ್ಕಾರು ದಿನಗಳಿಂದ ರಾಜ್ಯ ಕರಾವಳಿ ಸಹಿತ ದೇಶದ ಬಹುತೇಕ ಕಡೆ ಮಳೆಯಾಗಿದೆ. ಮುಂಗಾರು ಪ್ರವೇಶ ಹಿನ್ನೆಲೆಯಲ್ಲಿ ಕರಾವಳಿ ನಿವಾಸಿಗರಿಗೆ ಹಾಗೂ ಮೀನುಗಾರರಿಗೆ ಎಚ್ಚರ ವಹಿಸುವಂತೆ ಮುನ್ಸೂಚನೆ ನೀಡಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ