ಈ ವ್ಯಕ್ತಿಯ ಹೊಟ್ಟೆಯ ಶಸ್ತ್ರಚಿಕಿತ್ಸೆ ನಡೆಸಿದಾಗ ಸಿಕ್ತು ಚಮಚ, ಸ್ಕ್ರೂಡ್ರೈವರ್, ಚೂರಿ!

Team Udayavani, May 25, 2019, 3:31 PM IST

ಮಾಂಡಿ/ಹಿಮಾಚಲ್ ಪ್ರದೇಶ: ಯಾವುದೇ ಮನುಷ್ಯನ ಹೊಟ್ಟೆಯೊಳಗೆ ಗಡ್ಡೆ, ಸೂಜಿ, ಹೀಗೆ ನಾನಾ ವಿಧದ ವಸ್ತುಗಳು ಸೇರಿಕೊಳ್ಳುವುದನ್ನು ಓದಿದ್ದೀರಿ. ಆದರೆ ಹಿಮಾಚಲ್ ಪ್ರದೇಶದ ವ್ಯಕ್ತಿಯೊಬ್ಬನ ಹೊಟ್ಟೆಯೊಳಗಿಂದ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಎಂಟು ಚಮಚ, ಎರಡು ಸ್ಕ್ರೂ ಡ್ರೈವರ್ಸ್, ಎರಡು ಹಲ್ಲುಜ್ಜುವ ಬ್ರೆಶ್, ಅಡುಗೆ ಮನೆಯ ಚೂರಿ, ಬಾಗಿಲಿನ ಚಿಲಕವನ್ನು ಹೊರತೆಗೆದಿರುವ ಅಪರೂಪದ ಪ್ರಕರಣ ನಡೆದಿದೆ.

ಕರಣ್ ಸೇನ್ ಎಂಬ 35 ವರ್ಷದ ವ್ಯಕ್ತಿಯೊಬ್ಬ ಕೆಲವು ದಿನಗಳ ಹಿಂದೆ ಸುಂದರ್ ನಗರದ ಕ್ಲಿನಿಕ್ ನಲ್ಲಿ ತನಗೆ ಹೊಟ್ಟೆಯ ಮೇಲ್ಭಾಗದಲ್ಲಿ ಗುಳ್ಳೆ ಎದ್ದಿದ್ದು, ನೋವು ಕಾಣಿಸಿಕೊಂಡಿರುವುದಾಗಿ ಹೇಳಿದ್ದ. ಪ್ರಾಥಮಿಕ ಪರೀಕ್ಷೆ ನಡೆಸಿದ್ದ ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸುವಂತೆ ಸಲಹೆ ನೀಡಿದ್ದರು. ಅದರಂತೆ ಲಾಲ್ ಬಹದ್ದೂರ್ ಶಾಸ್ತ್ರಿ ಸರ್ಕಾರಿ ಮೆಡಿಕಲ್ ಆಸ್ಪತ್ರೆಗೆ ದಾಖಲಾಗಿದ್ದ.

ಎಕ್ಸ್ ರೇ ತೆಗೆದಾಗ ಆತನ ಹೊಟ್ಟೆಯೊಳಗೆ ಹಲವಾರು ವಸ್ತುಗಳು ಇದ್ದಿರುವುದು ಪತ್ತೆಯಾಗಿತ್ತು. ಬಳಿಕ ಸುಮಾರು ನಾಲ್ಕು ಗಂಟೆಗಳ ಕಾಲ ಮೂವರು ತಜ್ಞ ಸರ್ಜನ್ಸ್ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಈ ಎಲ್ಲಾ ವಸ್ತುಗಳನ್ನು ಹೊಟ್ಟೆಯಿಂದ ಹೊರ ತೆಗೆದಿರುವುದಾಗಿ ವರದಿ ತಿಳಿಸಿದೆ.

ಇದೊಂದು ಅಪರೂಪದ ಪ್ರಕರಣವಾಗಿದೆ ಎಂದು ತಂಡದ ಸರ್ಜನ್ ಒಬ್ಬರು ತಿಳಿಸಿದ್ದು, ಹೊಟ್ಟೆಯೊಳಗೆ ಕೆಲವು ಕಬ್ಬಿಣದ ವಸ್ತುಗಳಿರುವುದು ನಮ್ಮ ಪರೀಕ್ಷೆಯಲ್ಲಿ ಪತ್ತೆಯಾಗಿತ್ತು. ಕೂಡಲೇ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿ, ಆ ವಸ್ತುಗಳನ್ನು ಹೊರತೆಗೆದಿದೆ. ಈ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದ ಎಂದು ವೈದ್ಯರು ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆ ನಂತರ ರೋಗಿ ಪ್ರಾಣಾಪಾಯದಿಂದ ಪಾರಾಗಿದ್ದು, ಇದೀಗ ಆತನ ಆರೋಗ್ಯ ಸ್ಥಿರವಾಗಿರುವುದಾಗಿ ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ