ಇಂದು ಶಬರಿ ತೀರ್ಪು : ಕೇರಳದಲ್ಲಿ ಕುತೂಹಲ, ಭಾರೀ ಭದ್ರತೆ

Team Udayavani, Nov 14, 2019, 7:00 AM IST

ಹೊಸದಿಲ್ಲಿ/ತಿರುವನಂತಪುರ: ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಪ್ರವೇಶ ಮಾಡಬೇಕು ಎಂದು ನೀಡಿರುವ ತೀರ್ಪಿಗೆ ಮೇಲ್ಮನವಿ ಸಲ್ಲಿಸಿರುವ ಅರ್ಜಿಗಳ ಬಗ್ಗೆ ತೀರ್ಮಾನವನ್ನು ಗುರುವಾರ ಸುಪ್ರೀಂ ಕೋರ್ಟ್‌ ಪ್ರಕಟಿಸಲಿದೆ. ಇದರ ಜತೆಗೆ ಕೇರಳದಲ್ಲಿ ಆತಂಕದ ವಾತಾವರಣವೂ ನಿರ್ಮಾಣವಾಗಿದೆ.

ಶಬರಿಮಲೆಗೆ ಎಲ್ಲಾ ವಯೋಮಾನದವರು ಪ್ರವೇಶ ಮಾಡಬಹುದು ಎಂದು 2018ರ ಸೆ. 28ರಂದು ನೀಡಿದ್ದ ತೀರ್ಪಿನ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ 56 ಮರು ಪರಿಶೀಲನ ಅರ್ಜಿ ಸೇರಿದಂತೆ ಒಟ್ಟು 65 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವುಗಳನ್ನೆಲ್ಲ ವಿಚಾರಣೆ ನಡೆಸಿ ಫೆ.6ರಂದು ಸಿಜೆಐ ರಂಜನ್‌ ಗೊಗೋಯ್‌ ತೀರ್ಪು ಕಾಯ್ದಿರಿಸಿದ್ದರು.

ಕೇರಳದಲ್ಲಿ ರಾಜಕೀಯ ಪಕ್ಷಗಳು, ಅಯ್ಯಪ್ಪ ಸ್ವಾಮಿಯ ಭಕ್ತರು ಯಾವ ರೀತಿಯಾಗಿ ತೀರ್ಪು ಪ್ರಕಟವಾಗಬಹುದು ಎಂಬ ಕುತೂಹಲದಲ್ಲಿದ್ದಾರೆ. ನ.17ರಿಂದ ದೇಗುಲ ಬಾಗಿಲು ತೆರೆಯುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವದ್ದಾಗಿದೆ.

ದೇಗುಲದ ಆಡಳಿತದ ಹೊಣೆ ಹೊತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಎ.ಪದ್ಮಕುಮಾರ್‌ ಪ್ರತಿಕ್ರಿಯೆ ನೀಡಿ ಯಾವ ರೀತಿಯಲ್ಲಿ ತೀರ್ಪು ಬಂದರೂ ಅದರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ರಫೇಲ್‌ ಬಗ್ಗೆ ತೀರ್ಪು: ಫ್ರಾನ್ಸ್‌ನಿಂದ ಖರೀದಿ ಮಾಡಲಾಗಿರುವ 36 ರಫೇಲ್‌ ಯುದ್ಧ ವಿಮಾನಗಳ ಬಗ್ಗೆ ಈ ಹಿಂದೆ ನೀಡಲಾಗಿದ್ದ ತೀರ್ಪನ್ನು ಪುನರ್‌ ವಿಮರ್ಶೆ ಮಾಡಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಗಳ ಬಗ್ಗೆಯೂ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಗುರುವಾರ ತೀರ್ಪು ನೀಡಲಿದ್ದಾರೆ. ಇದಲ್ಲದೆ, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಸಲ್ಲಿಸಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿಯೂ ಇತ್ಯರ್ಥಗೊಳ್ಳಲಿದೆ.

ಹಾಲಿ ನಿಯಮಗಳ ಅನ್ವಯವೇ ನೇಮಕ: ಕೇಂದ್ರ ಸರಕಾರ ವಿವಿಧ ನ್ಯಾಯ ಮಂಡಳಿಗಳಿಗೆ ಮಾಡುವ ನೇಮಕವನ್ನು ಈಗ ಇರುವ ನೇಮಕ ಕ್ರಮದಂತೆಯೇ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಮಧ್ಯಾಂತರ ತೀರ್ಪು ನೀಡಿದೆ. ಇದರಿಂದಾಗಿ ವಿತ್ತೀಯ ಕಾಯ್ದೆ 2017ರಲ್ಲಿ ಪ್ರಸ್ತಾವಿಸಿದಂತೆ ನೇಮಕ ಮಾಡಬೇಕು ಎಂಬ ಕೇಂದ್ರದ ಪ್ರಸ್ತಾವವನ್ನು ತಿರಸ್ಕರಿಸಿತು.

ಎರಡು ತಿಂಗಳ ಕಾಲ ನಡೆಯುವ ಯಾತ್ರೆಯ ಅವಧಿಯಲ್ಲಿ ಭದ್ರತೆಗಾಗಿ ಹತ್ತು ಸಾವಿರ ಪೊಲೀಸ್‌ ಸಿಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಎಲ್ಲಾ ರೀತಿಯ ಮುನ್ನೆಚ್ಚರಿಕೆಯನ್ನು ವಹಿಸಿದ್ದೇವೆ.
– ಲೋಕನಾಥ್‌ ಬೆಹಾರ, ಕೇರಳ ಡಿಜಿಪಿ

ಸುಪ್ರೀಂಕೋರ್ಟ್‌ ತೀರ್ಪು ಭಕ್ತರ ಪರವಾಗಿಯೇ ಬರಲಿದೆ ಎಂಬ ನಂಬಿಕೆ ನಮ್ಮದು.
– ಎಂ.ಟಿ.ರಮೇಶ್‌, ಕೇರಳ ಬಿಜೆಪಿ ನಾಯಕ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ