ಪತ್ರಕರ್ತೆಯ ಕೆನ್ನೆ ಸವರಿ ವಿವಾದಕ್ಕೆ ಸಿಲುಕಿದ ರಾಜ್ಯಪಾಲ

Team Udayavani, Apr 19, 2018, 6:00 AM IST

ಚೆನ್ನೈ: ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌ ಮಂಗಳವಾರ ಪತ್ರಕರ್ತೆಯೊಬ್ಬರ ಕೆನ್ನೆ ಸವರಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಕ್ರಮವನ್ನು ಪತ್ರಕರ್ತರ ಸಂಘಟನೆಗಳು, ರಾಜಕೀಯ ಪಕ್ಷಗಳು ಕಟುವಾಗಿ ಟೀಕಿಸಿದ್ದು, ಪ್ರತಿಭಟನೆಗಳನ್ನೂ ನಡೆಸಿವೆ. ವಿವಾದ ತೀವ್ರವಾಗುತ್ತಿದ್ದಂತೆಯೇ ಪುರೋಹಿತ್‌ ಪತ್ರಕರ್ತೆ ಲಕ್ಷ್ಮೀ ಸುಬ್ರಹ್ಮಣ್ಯಂಗೆ ಪತ್ರ ಬರೆದು ಕ್ಷಮೆ ಕೇಳಿದ್ದಾರೆ. ಅದಕ್ಕೆ ಲಕ್ಷ್ಮಿ ಒಪ್ಪಿಕೊಂಡಿದ್ದಾರೆ.

ಇಂಗ್ಲಿಷ್‌ ನಿಯತಕಾಲಿಕದ ಪತ್ರಕರ್ತೆ ಲಕ್ಷ್ಮಿಕಾರ್ಯ ಕ್ರಮದಲ್ಲಿ ಪುರೋಹಿತ್‌ಗೆ ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರಿಸದ ರಾಜ್ಯಪಾಲರು, ಸಾರ್ವಜನಿಕವಾಗಿಯೇ ಅವರ ಕೆನ್ನೆ ತಟ್ಟಿ ತೆರಳಿದ್ದರು. ಈ ವಿಡಿಯೊ ಜಾಲತಾಣಗಳಲ್ಲಿ ವೈರಲ್‌ ಆಯಿತು. ಲಕ್ಷ್ಮೀ  ಕೂಡ ಟ್ವಿಟರ್‌ನಲ್ಲಿ ರಾಜ್ಯಪಾಲರ ವರ್ತನೆಯನ್ನು  ಆಕ್ಷೇಪಿಸಿದ್ದರು. 

ಬುಧವಾರ 200 ಮಂದಿ ಪತ್ರ ಕರ್ತರು ರಾಜ್ಯಪಾಲರಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ.  ಬಳಿಕ ಪರ್ತಕರ್ತೆಗೆ ಇ-ಮೇಲ್‌ ಮಾಡಿ ಪುರೋಹಿತ್‌ ಕ್ಷಮೆ ಕೇಳಿದ್ದಾರೆ. “ನೀವು ನನ್ನ ಮೊಮ್ಮಗಳಿದ್ದಂತೆ. ಪತ್ರಕರ್ತೆಯಾಗಿ ನಿಮ್ಮ ವೃತ್ತಿಪರತೆ ಮೆಚ್ಚಿ ಕೆನ್ನೆ ಸವರಿದ್ದೆನೇ ಹೊರತು, ಬೇರಾವ ದೃಷ್ಟಿಯಿಂದಲೂ ಅಲ್ಲ’ ಎಂದಿದ್ದಾರೆ. ಅದಕ್ಕೆ ಉತ್ತರಿಸಿರುವ ಪತ್ರಕರ್ತೆ, ಕ್ಷಮಾಪಣೆ ಒಪ್ಪಿಕೊಂಡಿದ್ದೇನೆ. ಆದರೆ ನನ್ನ ಪ್ರಶ್ನೆಗೆ ಉತ್ತರಿಸದೇ ಇದ್ದದ್ದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ