ಜೀವಿತಾವಧಿಗೆ ಟಿಇಟಿ ವಿಸ್ತರಣೆ
Team Udayavani, Jun 4, 2021, 7:10 AM IST
ಹೊಸದಿಲ್ಲಿ: ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಯ ಪ್ರಮಾಣ ಪತ್ರದ ಅವಧಿಯನ್ನು ಈಗಿರುವ 7 ವರ್ಷಗಳಿಂದ ಜೀವಿತಾವಧಿಗೆ ವಿಸ್ತರಿಸಲಾಗಿದೆ. ಈ ಸಂಬಂಧ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಘೋಷಣೆ ಮಾಡಿದ್ದಾರೆ.
ಈ ನಿರ್ಧಾರ 2011 ರಿಂದಲೇ ಪೂರ್ವಾನ್ವಯವಾಗಲಿದೆ. ಈಗಾಗಲೇ ಅವಧಿ ಮುಗಿದಿರುವ ಪ್ರಮಾಣ ಪತ್ರವನ್ನು ನವೀಕರಿಸಲು ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಪೋಖ್ರಿಯಾಲ್ ಹೇಳಿದ್ದಾರೆ.
ಶಿಕ್ಷಕರ ಹುದ್ದೆಗೆ ಸೇರಲಿಚ್ಛಿಸುವ ಅಭ್ಯರ್ಥಿಗಳಿಗೆ ಇದರಿಂದ ಉಪಯೋಗವಾಗಲಿದೆ. 2011ರ ಫೆ. 11ರಂದು ಟಿಇಟಿ ಜಾರಿಗೆ ಬಂದಿದೆ. ಒಮ್ಮೆ ಅಭ್ಯರ್ಥಿ ಉತ್ತೀರ್ಣನಾದ ಬಳಿಕ ಅದರ ಅವಧಿ 7 ವರ್ಷಗಳ ವರೆಗೆ ಇರುತ್ತಿತ್ತು. ಇನ್ನು ನೆಟ್ ಅಥವಾ ಸ್ಲೆಟ್ ರೀತಿಯಲ್ಲೇ ಜೀವಿತಾವಧಿ ವರೆಗೆ ಇರಲಿದೆ.