ದಿಲ್ಲಿಯಲ್ಲಿ ನಾಯ್ಡು ನಿರಶನ ಪಾಲಿಟಿಕ್ಸ್‌

Team Udayavani, Feb 12, 2019, 12:30 AM IST

ಹೊಸದಿಲ್ಲಿ/ಕೋಲ್ಕತಾ: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಸೋಮವಾರ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಧಾನಿ ಮೋದಿ ರಾಜ್ಯದ ವಿಚಾರದಲ್ಲಿ ರಾಜಧರ್ಮ ಮರೆತಿದ್ದಾರೆ ಎಂದು ದೂರಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಉಪವಾಸ ಸತ್ಯಾಗ್ರಹ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಪರ್ಯಾಯ ರಾಜಕೀಯ ಶಕ್ತಿರೂಪು ಗೊಳ್ಳುತ್ತಿದೆ ಎಂಬ ಸಂದೇಶವನ್ನೂ ರವಾನಿಸುವ ಪ್ರಯತ್ನವನ್ನು ನಾಯ್ಡು ಮಾಡಿದ್ದಾರೆ. ಆಂಧ್ರ ಭವನದಲ್ಲಿ ಉಪವಾಸ ಕುಳಿತ ಟಿಡಿಪಿ ನಾಯಕ 2014ರಲ್ಲಿ ಆಂಧ್ರ ವಿಭಜನೆ ವೇಳೆ ನೀಡಿದ್ದ ವಿಶೇಷ ಸ್ಥಾನಮಾನ ವಾಗ್ಧಾನ ಈಡೇರಿಸಬೇಕು ಎಂದು ಒತ್ತಾಯಿಸಿದರು. 5 ಕೋಟಿ ಮಂದಿಯ ಪರವಾಗಿ ಸರಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದರು ನಾಯ್ಡು. 

2002ರ ಗುಜರಾತ್‌ ಗಲಭೆ ವೇಳೆ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ರಾಜಧರ್ಮ ಪಾಲಿಸಿಲ್ಲ ಎಂದು ಪ್ರಧಾನಿ ಯಾಗಿದ್ದ ವಾಜಪೇಯಿ ಹೇಳಿದ್ದರು ಎಂದು ಅವರು ನೆನಪಿಸಿಕೊಂಡಿದ್ದಾರೆ. ಸಂಸತ್‌ ಆವರಣದಲ್ಲಿ ಉಪವಾಸ ನಡೆಸಲು ಯತ್ನಿಸಿದ ನಾಯ್ಡುಗೆ ಅನುಮತಿ ಸಿಕ್ಕಿರಲಿಲ್ಲ. 

ಆಂಧ್ರದಿಂದ ಕದ್ದು ಅಂಬಾನಿಗೆ ಕೊಟ್ಟರು: ಆಂಧ್ರಪ್ರದೇಶ ಮುಖ್ಯಮಂತ್ರಿಗೆ ಬೆಂಬಲ ನೀಡಲು ಆಗಮಿಸಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಾತನಾಡಿ, ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದೆ, ಕಿತ್ತೂಕೊಂಡು ಪ್ರಧಾನಿ ಮೋದಿ ಆ ಮೊತ್ತವನ್ನು ರಫೇಲ್‌ ಡೀಲ್‌ ಮೂಲಕ ಅನಿಲ್‌ ಅಂಬಾನಿಗೆ ನೀಡಿದರು ಎಂದು ಟೀಕಿಸಿದರು.

ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಫಾರೂಕ್‌ ಅಬ್ದುಲ್ಲಾ, ಎನ್‌ಸಿಪಿಯ ಮಜೀದ್‌ ಮೆಮೊನ್‌, ಟಿಎಂಸಿಯ ಡೆರೆಕ್‌ ಒ ಬ್ರಿಯಾನ್‌, ಡಿಎಂಕೆಯ ತಿರುಚ್ಚಿ ಶಿವ, ಎಸ್‌ಪಿಯ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ಸೇರಿದಂತೆ ಪ್ರಮುಖರು ನಾಯ್ಡು ಉಪವಾಸ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿ ಬೆಂಬಲ ನೀಡಿದರು. 

ನಾಯ್ಡುಗೆ ದೀದಿ ಬೆಂಬಲ
ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಹೊಸದಿಲ್ಲಿಯಲ್ಲಿ ನಡೆಸಿದ ಉಪವಾಸಕ್ಕೆ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೆಂಬಲ ನೀಡಿದ್ದಾರೆ. ಬ್ಯಾನರ್ಜಿ ಸೋಮವಾರ ತಡ ರಾತ್ರಿ ಹೊಸದಿಲ್ಲಿಗೆ ಆಗಮಿಸಿ ಅವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. 

ಶಿವಸೇನೆ ಅಚ್ಚರಿ!
ಅಚ್ಚರಿಯೆಂಬಂತೆ, ಬಿಜೆಪಿ ಮಿತ್ರಪಕ್ಷ ಶಿವಸೇನೆಯು ತನ್ನ ಸಂಸದ ಸಂಜಯ್‌ ರಾವತ್‌ ಅವರನ್ನು ಪಕ್ಷದ ಪ್ರತಿನಿಧಿಯಾಗಿ, ನಾಯ್ಡು ಅವರ ನಿರಶನ ಸ್ಥಳಕ್ಕೆ ಕಳುಹಿಸಿತ್ತು. ಮಧ್ಯಪ್ರದೇಶ ಸಿಎಂ ಕಮಲ್‌ನಾಥ್‌ ಮತ್ತು ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಅವರ ಜೊತೆಗೆ ರಾವತ್‌ ಕೆಲ ಕಾಲ ಕುಳಿತಿದ್ದರು.

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕೊಡುವ ಬಗ್ಗೆ ಸಂಸತ್‌ನಲ್ಲಿ ಚರ್ಚೆಯಾಗಿದ್ದ ವೇಳೆ ಎಲ್ಲರ ಬೆಂಬಲ ಸಿಕ್ಕಿತ್ತು. ನಾಯ್ಡು ವಾದಕ್ಕೆ ನನ್ನ ಸಹಮತವಿದೆ. 
ಡಾ| ಮನಮೋಹನ್‌ ಸಿಂಗ್‌,  ಮಾಜಿ ಪ್ರಧಾನಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ