ರಾಹುಲ್ ಗಾಂಧಿಗೆ ಕೈ ಕೊಟ್ಟ ಶಕ್ತಿ ಯೋಜನೆ

ಶಕ್ತಿ ಕಾರ್ಯಕರ್ತರಿಗಿಂತ ಮತಗಳೇ ಕಡಿಮೆ; ಹೆಚ್ಚು ಸಂಖ್ಯೆ ತೋರಿಸಿ ಕಾಂಗ್ರೆಸ್‌ ಅಧ್ಯಕ್ಷರಿಗೇ ವಂಚನೆ?

Team Udayavani, Jun 6, 2019, 6:00 AM IST

ಬೆಂಗಳೂರು: ಕಾಂಗ್ರೆಸ್‌ ಪಕ್ಷವನ್ನು ಬಲಿಷ್ಠಗೊಳಿಸಬೇಕೆಂಬ ಗುರಿ ಇಟ್ಟುಕೊಂಡು ಆರಂಭಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕನಸಿನ ‘ಶಕ್ತಿ’ ಯೋಜನೆ ಲೋಕಸಭೆ ಚುನಾವಣೆಯಲ್ಲಿಯೇ ನಿಶ್ಶಕ್ತವಾಗಿರುವುದು ಬೆಳಕಿಗೆ ಬಂದಿದೆ.

ಕೆಲವು ಕಡೆ ಶಕ್ತಿ ಯೋಜನೆಗೆ ಸೇರ್ಪಡೆಯಾದ ಕಾರ್ಯಕರ್ತರ ಸಂಖ್ಯೆಗೂ, ಆ ಪ್ರದೇಶದಲ್ಲಿ ಅಭ್ಯರ್ಥಿ ಪಡೆದ ಮತಗಳ ಸಂಖ್ಯೆಗೂ ಅಜಗಜಾಂತರವಿದೆ. ಕೆಲವು ಕಡೆ ಕೆಲ ಕಾರ್ಯಕರ್ತರು ತಮ್ಮ ಮನೆಯಲ್ಲಿ ಓಟರ್‌ ಐಡಿ ಇದ್ದವರೆಲ್ಲರನ್ನೂ ಸದಸ್ಯರನ್ನಾಗಿ ಮಾಡಿ ಕೈ ತೊಳೆದುಕೊಂಡಿದ್ದಾರೆ. ಇನ್ನು ಕೆಲವು ಕ್ಷೇತ್ರಗಳಲ್ಲಿ ಮೊಬೈಲ್ ಸಂಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಪ್ರತಿ ದಿನ ಖರೀದಿಯಾಗುವ ಮೊಬೈಲ್ ನಂಬರ್‌ಗಳನ್ನು ಪಡೆದು, ಆ ನಂಬರ್‌ಗಳಿಗೆ ಬೇರೆ ಯಾರಧ್ದೋ ಓಟರ್‌ ಐಡಿ ಕಾರ್ಡ್‌ ಲಿಂಕ್‌ ಮಾಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಆ ಮೂಲಕ ನಾಯಕತ್ವಕ್ಕೇ ವಂಚಿಸಲಾಗಿದೆ ಎನ್ನಲಾಗಿದೆ.

ರಾಜ್ಯದ ಸುಮಾರು 50 ವಿಧಾನಸಭಾ ಕ್ಷೇತ್ರಗಳಲ್ಲಿ ರಾಹುಲ್ ಗಾಂಧಿ ಸೂಚನೆಯ ಶಕ್ತಿ ಯೋಜನೆ ಶೇ. 100 ಯಶಸ್ವಿಯಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ ಕನಿಷ್ಠ 10 ಸಾವಿರಕ್ಕಿಂತಲೂ ಹೆಚ್ಚು ಶಕ್ತಿ ಕಾರ್ಯಕರ್ತರನ್ನು ನೋಂದಾಯಿಸಲಾಗಿದೆ. ರಾಹುಲ್ ಗಾಂಧಿ ಲೆಕ್ಕಾಚಾರದ ಪ್ರಕಾರ ಒಬ್ಬ ಶಕ್ತಿ ಕಾರ್ಯಕರ್ತ ಕನಿಷ್ಠ 15 ರಿಂದ 20 ಮತದಾರರನ್ನು ಕಾಂಗ್ರೆಸ್‌ಗೆ ಮತ ಹಾಕುವಂತೆ ಮಾಡಿದ್ದರೆ, ಪ್ರತಿ ವಿಧಾನಸಭೆಯಲ್ಲಿಯೂ ಕನಿಷ್ಠ 1 ರಿಂದ 1.5 ಲಕ್ಷ ಮತಗಳನ್ನು ಸೆಳೆಯಬೇಕಿತ್ತು.

ಆದರೆ, ಬೆಂಗಳೂರಿನ ಒಂದೆರಡು ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿದರೆ, ಬೇರೆಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳು 1 ಲಕ್ಷದ ಗಡಿ ತಲುಪಿಲ್ಲ. ರಾಹುಲ್ ಅವರ ಪ್ರಯತ್ನಕ್ಕೆ ಪಕ್ಷದ ನಾಯಕರಿಂದಲೇ ವಂಚನೆಯಾಗಿರುವುದು, ಲೋಕಸಭೆ ಚುನಾವಣೆ ಫ‌ಲಿತಾಂಶದಲ್ಲಿ ವ್ಯಕ್ತವಾಗಿದೆ.

ಶಕ್ತಿ ಸದಸ್ಯರೇ ಮತ ಹಾಕಿಲ್ಲ!: ಶಕ್ತಿ ಯೋಜನೆಯಲ್ಲಿ ನೋಂದ‌ಣಿ ಮಾಡಿಕೊಂಡ ಕಾರ್ಯಕರ್ತರ ಸಂಖ್ಯೆಗೂ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ಫ‌ಲಿತಾಂಶ ಗಮನಿಸಿದರೆ, ಶಕ್ತಿ ಯೋಜನೆಯಲ್ಲಿ ನೋಂದಣಿಯಾದ ಕಾರ್ಯಕರ್ತರ ಸಂಖ್ಯೆಗಿಂತಲೂ ಕಡಿಮೆ ಸಂಖ್ಯೆಯ ಮತದಾನವಾಗಿದೆ. ಇದು ಕಾಂಗ್ರೆಸ್‌ ನಾಯಕರಲ್ಲಿಯೂ ಅಚ್ಚರಿಗೆ ಕಾರಣ ವಾಗಿದೆ. ಯಶವಂತಪುರ ಕ್ಷೇತ್ರದಲ್ಲಿ ಶಕ್ತಿ ಕಾರ್ಯಕರ್ತರ ಸಂಖ್ಯೆ 1,17,575 ಇದ್ದರೆ, ಕಾಂಗ್ರೆಸ್‌ ಅಭ್ಯರ್ಥಿ ಕೃಷ್ಣ ಬೈರೇಗೌಡಗೆ 1,12,716 ಮತ ಬಿದ್ದಿವೆ. 4859 ಶಕ್ತಿ ಕಾರ್ಯಕರ್ತರೇ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕದಿರುವುದು ಕಂಡು ಬಂದಿದೆ.

ಇನ್ನು ಎರಡನೇ ಸ್ಥಾನದಲ್ಲಿರುವ ರಾಜರಾಜೇಶ್ವರಿ ನಗರದಲ್ಲಿ ಶಕ್ತಿ ಯೋಜನೆಗೆ 1,02,632 ಸದಸ್ಯರು ನೋಂದಾಯಿಸಿಕೊಂಡಿದ್ದು, ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ 80,675 ಮತ ದೊರೆತಿದೆ. ಇಲ್ಲಿ ಶಕ್ತಿ ಸುಮಾರು 21,957 ಕಡಿಮೆ ಮತಬಿದ್ದಿವೆ. 3ನೇ ಸ್ಥಾನದಲ್ಲಿರುವ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ 46,167 ಶಕ್ತಿ ಕಾರ್ಯಕರ್ತರಿದ್ದು,ಕೈ ಅಭ್ಯರ್ಥಿಗೆ 35,261 ಮತಗಳು ಮಾತ್ರ ಬಿದ್ದಿವೆ. ಸುಮಾರು 10,906 ಶಕ್ತಿ ಕಾರ್ಯಕರ್ತರೇ ಕೈ ಅಭ್ಯರ್ಥಿಗೆ ಕೈ ಕೊಟ್ಟಿರುವುದು ಕಂಡು ಬಂದಿದೆ.

ಅನುಷ್ಠಾನದಲ್ಲಿ ರಾಜ್ಯವೇ ನಂ.1

ಶಕ್ತಿ ಯೋಜನೆ ಅನುಷ್ಠಾನದಲ್ಲಿ ದೇಶದಲ್ಲಿಯೇ ಕರ್ನಾಟಕ ಮೊದಲ ಸ್ಥಾನದಲ್ಲಿತ್ತು. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 15,50,138 ಶಕ್ತಿ ಕಾರ್ಯಕರ್ತರನ್ನು ನೋಂದಾಯಿಸಲಾಗಿತ್ತು. ನಂತರದ ಸ್ಥಾನಗಳನ್ನು ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳು ಪಡೆದುಕೊಂಡಿವೆ. ಬೆಂಗಳೂರಿನ ಮೂರು ವಿಧಾನಸಭಾ ಕ್ಷೇತ್ರಗಳು ಅತಿ ಹೆಚ್ಚು ಶಕ್ತಿ ಕಾರ್ಯಕರ್ತರ ನೋಂದಣಿ ಮಾಡಿದ ಸಾಧನೆ ಮಾಡಿವೆ. ಯಶವಂತಪುರ ಕ್ಷೇತ್ರದಲ್ಲಿ ಅತಿಹೆಚ್ಚು ಶಕ್ತಿ ಕಾರ್ಯಕರ್ತರ ನೋಂದಣಿ ಮಾಡಿಸಲಾಗಿದೆ.
-ಶಂಕರ ಪಾಗೋಜಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ