ಸಿಪಿಇಸಿ ಭಾರತದ ಆಕ್ಷೇಪಕ್ಕೆ ಇವೆ ಹಲವು ಕಾರಣ

Team Udayavani, Sep 16, 2019, 5:06 AM IST

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಸಿಪಿಇಸಿ (ಚೀನ-ಪಾಕಿಸ್ಥಾನ
ಎಕನಾಮಿಕ್‌ ಕಾರಿಡಾರ್‌)ಗೆ ಸಂಬಂಧಿಸಿದ ಚಟುವಟಿಕೆಗಳನ್ನು
ನಿಲ್ಲಿಸಬೇಕೆಂದು ಚೀನ ಮತ್ತು ಪಾಕಿಸ್ಥಾನಕ್ಕೆ ಗಟ್ಟಿಯಾಗಿಯೇ ಎಚ್ಚರಿಸಿದೆ ಭಾರತ. ಅಚ್ಚರಿಯ ವಿಷಯವೆಂದರೆ ಪ್ರತಿ ಬಾರಿಯೂ ಭಾರತದ ಆಕ್ಷೇಪವನ್ನು ಅಷ್ಟೇ ಗಟ್ಟಿ ಧ್ವನಿಯಲ್ಲಿ ಅಲ್ಲಗಳೆಯುತ್ತಿದ್ದ ಚೀನ, ಈ ಬಾರಿ ಧ್ವನಿ ತಗ್ಗಿಸಿದೆ. ಹಾಗೆಂದು ಚೀನ ಪಿಓಕೆಯಿಂದ ದೂರ ಸರಿಯುತ್ತದೆ ಎನ್ನುವಂತೆಯೂ ಇಲ್ಲ…

ಚೀನ-ಪಾಕಿಸ್ಥಾನದ ಮಹತ್ವಾಕಾಂಕ್ಷಿ ಯೋಜನೆ ಸಿಪಿಇಸಿಯು ಚೀನಾದ ಮಹತ್ವಾಕಾಂಕ್ಷಿ ಒನ್‌ ಬೆಲ್ಟ್ ಒನ್‌ ರೋಡ್‌ ಭಾಗವಾಗಿ ರೂಪುಗೊಳ್ಳುತ್ತಿರುವ ಯೋಜನೆ. ಇದು ಚೀನಾವನ್ನು ಆಗ್ನೇಯ ಮತ್ತು ಮಧ್ಯ ಏಷ್ಯಾದ ಆರ್ಥಿಕತೆಗಳೊಂದಿಗೆ ಜೋಡಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿಯಲ್ಲಿ ಹೆದ್ದಾರಿಗಳು, ರೈಲ್ವೆ„ ಮತ್ತು ಪೈಪ್‌ಲೈನುಗಳು ಸಹಿತ ಬೃಹತ್‌ ಮೂಲ ಸೌಕರ್ಯಾಭಿವೃದ್ಧಿ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ.

ಸರಳವಾಗಿ ಹೇಳಬೇಕೆಂದರೆ, ಪಾಕಿಸ್ತಾನದ ಗ್ವಾದಾರ್‌ ಬಂದರಿಗೆ ಚೀನಾದ ಪಶ್ಚಿಮ ಭಾಗವನ್ನು ಸಂಪರ್ಕಿಸುವ ಯೋಜನೆ ಇದಾಗಿದ್ದು ಪಾಕಿಸ್ತಾನದಲ್ಲಿ ಬೃಹತ್‌ ಮತ್ತು ಸಂಕೀರ್ಣ ರಸ್ತೆಯ ಜಾಲಗಳು, ವಾಣಿಜ್ಯ ವಲಯಗಳು, ಇಂಧನ ಯೋಜನೆಗಳು ಮತ್ತು ಪೈಪ್‌ಲೈನ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ ಚೀನಾ.

ಸುಮಾರು 62 ಶತಕೋಟಿ ಡಾಲರ್‌ ಮೊತ್ತದ ಯೋಜನೆ ಇದಾಗಿದ್ದು, ಈ ಯೋಜನೆಯ ಯಶಸ್ಸು ತಮ್ಮಲ್ಲಿ ಆರ್ಥಿಕ, ಸಾಮಾಜಿಕ ಕ್ರಾಂತಿಯನ್ನೇ ತರಲಿದೆ ಎಂದು ಪಾಕಿಸ್ತಾನ ಹೇಳುತ್ತದೆ. ತೀವ್ರ ಆರ್ಥಿಕ ಕುಸಿತದಿಂದ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ಈಗ ಆಶಾಕಿರಣವಾಗಿ ಉಳಿದಿರುವುದು ಸಿಪಿಇಸಿ( ಚೀನಾ ಪಾಕಿಸ್ತಾನ ಎಕನಾಮಿಕ್‌ ಕಾರಿಡಾರ್‌) ಒಂದೇ. ಅತ್ತ ಪಾಕಿಸ್ತಾನಕ್ಕೆ ಈ ಯೋಜನೆ ಮೂಲ ಸೌಕರ್ಯಾಭಿವೃದ್ಧಿಗೆ, ಆರ್ಥಿಕ ಸ್ಥಿರತೆಯ ಪ್ರಾಪ್ತಿಗೆ ಅನಿವಾರ್ಯವಾದರೆ. ಇತ್ತ ಚೀನಾಕ್ಕೆ ಸಿಪಿಇಸಿ ಎನ್ನುವುದು ವ್ಯಾವಹಾರಿಕ ದೃಷ್ಟಿಯಿಂದ ಬಹುಮುಖ್ಯ ಯೋಜನೆ. ಆದರೆ ಈ ಯೋಜನೆ ಪಾಕ್‌ ಆಕ್ರ ಮಿತ ಕಾಶ್ಮೀರದಿಂದ ಹಾದು ಹೋಗುವುದನ್ನು ಮೊದಲಿನಿಂದಲೂ ವಿರೋಸುತ್ತಾ ಬಂದಿದೆ ಭಾರತ.

ಪಿಓಕೆಯಲ್ಲಿ ಈಗೇನಾಗುತ್ತಿದೆ?
ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ಮತ್ತು ಪಾಕಿಸ್ತಾನವು ಸಿಪಿಇಸಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಭಾರತ ಖಡಕ್ಕಾಗಿ ಎಚ್ಚರಿಸಿದೆ. ದಶಕಗಳಿಂದ ಏಷ್ಯಾದ ಚಿಕ್ಕಪುಟ್ಟ ರಾಷ್ಟ್ರಗಳನ್ನೆಲ್ಲ ಕಾಡುತ್ತಾ ಬಂದಿರುವ ಚೀನಾಕ್ಕೆ, ಸದ್ಯಕ್ಕೆ ಭಾರತವನ್ನು ಎದುರು ಹಾಕಿಕೊಳ್ಳಲು ಆಗುತ್ತಿಲ್ಲ. ಅತ್ತ ಅಮೆರಿಕದೊಂದಿಗೆ ವ್ಯಾಪಾರ ಯುದ್ಧದಲ್ಲಿ ತೊಡಗಿರುವ ಚೀನಾ ಈ ಸಮಯದಲ್ಲಿ ಇತ್ತ ಭಾರತವನ್ನೂ ಎದುರುಹಾಕಿ ಕೊಳ್ಳಲು ಸಿದ್ಧವಿಲ್ಲ. ಈ ಕಾರಣದಿಂದಲೇ ಕೆಲ ಸಮಯದಿಂದ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಸಿಪಿಇಸಿ ಯೋಜನೆ ತೀವ್ರ ನಿಧಾನವಾಗಿವೆ ಎನ್ನಲಾಗುತ್ತಿದೆ. “ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ 1960ರ ದಶಕದಲ್ಲಿ ನಿರ್ಮಾಣವಾದ ಕರಕೋರಂ ಹೆದ್ದಾರಿಯ ನವೀಕರಣ ಮತ್ತು ದುರಸ್ತಿಗೆ ಮಾತ್ರ ಸದ್ಯಕ್ಕೆ ಸಿಪಿಇಸಿ ಯೋಜನೆ ಸೀಮಿತವಾಗಿದೆ. ಈ ಸ್ಥಿತಿ ಇನ್ನೂ ಎಷ್ಟು ದಿನ ಮುಂದುವರಿಯಲಿದೆಯೋ ತಿಳಿಯದು’ ಎನ್ನುತ್ತಾರೆ ಖ್ಯಾತ ವಿತ್ತ ಸಂಸ್ಥೆ ಬಾನ್ಶಾನ್‌ ಹಿಲ್‌ನ ಹಿರಿಯ ಸಂಶೋಧಕ ಟೆಡ್‌ ಬಾ ಮನ್‌. ಚೀನಾಕ್ಕೆ ಪಾಕಿಸ್ತಾನವನ್ನು ಮತ್ತು ಅದರ ಬಂದರನ್ನು ರೈಲು, ರಸ್ತೆ ಮತ್ತು ಪೈಪ್‌ ಲೈನ್‌ ಮೂಲಕ ತಲುಪಲು ಪಿಓಕೆ ಬಿಟ್ಟರೆ ಮತ್ತೂಂದು ಮಾರ್ಗವೂ ಇದೆ-ಅದೇ ಆಫಾYನಿಸ್ತಾನದ ಬಡಾಖÏನ್‌ ಮಾರ್ಗ. ಆದರೆ ಭಾರತ ಮತ್ತು ಅಮೆರಿಕದ ಮಿತ್ರ ರಾಷ್ಟ್ರವಾಗಿರುವ ಆಫ್ಘಾನಿಸ್ತಾನ ಈ ವಿಚಾರದಲ್ಲಿ ಚೀನಾಕ್ಕಂತೂ ಸಹಾಯ ಮಾಡುವುದಿಲ್ಲ. ಹೀಗಾಗಿ, ಚೀನಾ ತುಂಬಾ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.

ಮೌನಕ್ಕೆ ಆರ್ಥಿಕ ಆಯಾಮ
1990ರ ದಶಕದಿಂದ ಭಾರತ ಮತ್ತು ಚೀನಾದ ಆರ್ಥಿಕ ಬಾಂಧವ್ಯ ಬೆಳೆಯುತ್ತಾ ಬಂದಿದೆ. 2019ರ ಅಂತ್ಯದ ವೇಳೆಗೆ ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಪ್ರಮಾಣವು 100 ಶತಕೋಟಿ ಡಾಲರ್‌ ತಲುಪುವ ಸಾಧ್ಯತೆ ಇದೆ. ಇದಕ್ಕೆ ಹೋಲಿಸಿದರೆ ಚೀನಾ-ಪಾಕಿಸ್ತಾನದ ನಡುವಿನ ವ್ಯಾಪಾರ ಪ್ರಮಾಣವು 15 ಶತಕೋಟಿ ಡಾಲರ್‌ಗಳಷ್ಟಿದ್ದು, ಆರ್ಥಿಕ ಹಿತದೃಷ್ಟಿಯಿಂದ ನೋಡಿದಾಗ, ಚೀನಾಕ್ಕೆ ಪಾಕಿಸ್ತಾನಕ್ಕಿಂತ ಭಾರತವೇ ಮುಖ್ಯವಾಗುತ್ತದೆ. ಈಗ ಅಮೆರಿಕದೊಂದಿಗಿನ ವ್ಯಾಪಾರ ಯುದ್ಧವು ಚೀನಾದ ಆರ್ಥಿಕತೆಗೆ ಅಡ್ಡಗಾಲು ಹಾಕಲಿರುವುದಂತೂ ನಿಶ್ಚಿತ, ಈ ಕಾರಣದಿಂದಲೇ ಈ ಸಮಯದಲ್ಲಿ ಭಾರತವನ್ನು ಎದುರುಹಾಕಿಕೊಳ್ಳುವುದೂ ಚೀನಾಕ್ಕೆ ದುಬಾರಿಯಾಗಿ ಪರಿಣಮಿಸೀತು.

ಪಿಒಕೆಯಲ್ಲಿ ಚೀನ
ಮೊದಲಿನಿಂದಲೂ ಸಿಪಿಇಸಿ ಯೋಜನೆಗೆ ಬಲೂಚಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಪ್ರತ್ಯೇಕತಾವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ ಬಲೂಚಿಸ್ತಾನದ ಪ್ರತ್ಯೇಕತಾದಿ ಪಡೆ ( ಬಲೂಚ್‌ ಲಿಬರೇಷನ್‌ ಆರ್ಮಿ) ತಮ್ಮ ನೆಲದಲ್ಲಿ ಚೀನಿಯರ ಇರುವಿಕೆಯನ್ನು ಇಷ್ಟಪಡುತ್ತಿಲ್ಲ. ಈ ಪಡೆ ಚೀನಿ ಇಂಜಿನಿಯರ್‌ಗಳನ್ನು, ಕಾರ್ಮಿಕರನ್ನು ಗುರಿಯಾಗಿಸಿ ಹಲವು ಬಾರಿ ದಾಳಿ ನಡೆಸಿದೆ. ಪಾಕ್‌ನಲ್ಲಿ ಕೆಲಸ ಮಾಡುತ್ತಿರುವ ತನ್ನ ಸಾವಿರಾರು ಕಾರ್ಮಿಕರು, ಇಂಜಿನಿಯರ್‌ಗಳಿಗೆ ರಕ್ಷಣೆ ಒದಗಿಸಿ ಎಂದು ಪಾಕ್‌ಗೆ ಎಚ್ಚರಿಸಿತ್ತು. ಇದರ ಅಂಗವಾಗಿ ಪಾಕ್‌ 20 ಸಾವಿರ ಸೈನಿಕರನ್ನು ಚೀನಿ ಕೆಲಸಗಾರರ ಭದ್ರತೆಗೆ ಒದಗಿಸಿದೆ. ಆದರೆ ಚೀನಾಗೆ ಸಮಾಧಾನವಾಗಿಲ್ಲ. ಇದನ್ನೇ ನೆಪವಾಗಿಟ್ಟುಕೊಂಡ ಅದು ತನ್ನದೇ ಸೈನಿಕರನ್ನು ಬಲೂಚಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ನಿಯೋಜಿಸಿದೆ ಎನ್ನಲಾಗುತ್ತಿದ್ದು. ಇದೂ ಕೂಡ ಭಾರತದ ಆಕ್ರೋಶ-ಆತಂಕಕ್ಕೆ ಕಾರಣವಾಗಿದೆ. ಸಿಪಿಇಸಿ ಕೆಲಸಗಾರರಿಗೆ ಭದ್ರತೆ ಒದಗಿಸುವುದಕ್ಕಿಂತಲೂ ಹೆಚ್ಚಾಗಿ ಈ ಸೈನಿಕರನ್ನು ಬಲೂಚಿಸ್ತಾನ ಮತ್ತು ಪಿಓಕೆಯ ಸ್ವತಂತ್ರ ಧ್ವನಿಗಳನ್ನು ಹತ್ತಿಕ್ಕಲು ಬಳಸಲಾಗುತ್ತಿದೆ ಎಂದೂ ಮಾನವ ಸಂಘಟನೆಗಳು ಹೇಳುತ್ತಿವೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ