ಮೊದಲ ಬಾರಿಗೆ ಹಿಂದೂ ಸಂಪ್ರದಾಯ ಮೂಲಕ ದಾಂಪತ್ಯ ಜೀವನಕ್ಕೆ ಗೇ ಕಪಲ್ಸ್!
ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾದ ಪುರುಷರು
Team Udayavani, Jul 6, 2022, 12:03 PM IST
ಕೊಲ್ಕತ್ತಾ: ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಯುವಕ-ಯುವತಿ ಸಂಪ್ರದಾಯ ಬದ್ದವಾಗಿ ಮದುವೆಯಾಗುವುದು ಸಾಮಾನ್ಯ. ಆದರೆ ಕೊಲ್ಕತ್ತಾದಲ್ಲಿ ನಡೆದ ಮದುವೆಯೊಂದು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಕಾರಣ ಸಲಿಂಗಕಾಮಿ ಜೋಡಿ ಮದುವೆ.
ಕೋಲ್ಕತ್ತಾದ ಸಲಿಂಗಕಾಮಿ ದಂಪತಿಗಳಾದ ಚೈತನ್ ಶರ್ಮಾ ಮತ್ತು ಅಭಿಷೇಕ್ ರೇ ಅವರು ಜುಲೈ 3 ರಂದು ಹಿಂದೂ ಸಾಂಪ್ರದಾಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಅದ್ದೂರಿ ಮದುವೆಯಲ್ಲಿ ಅವರ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದು, ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣ ವೈರಲ್ ಆಗಿವೆ.
ಕೋಲ್ಕತ್ತಾದ ಮೂಲದ ನಿವಾಸಿ ಅಭಿಷೇಕ್ ರೇ ವೃತ್ತಿಯಲ್ಲಿ ಫ್ಯಾಶನ್ ಡಿಸೈನರ್ ಆಗಿದ್ದು, ಗುರ್ಗಾಂವ್ ಮೂಲದ ಚೈತನ್ ಶರ್ಮಾ ಡಿಜಿಟಲ್ ಮಾರ್ಕೆಟಿಂಗ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪುರೋಹಿತರು ಮಂತ್ರ ಹೇಳಿ ದಂಪತಿಗಳು ಪರಸ್ಪರ ಹಾರ ಹಾಕಿಕೊಂಡರು. ಇದರೊಂದಿಗೆ, ದಂಪತಿಗಳು ಪವಿತ್ರ ಅಗ್ನಿಯ ಮುಂದೆ ಏಳು ಹೆಜ್ಜೆ ಪ್ರದಕ್ಷಿಣೆಯನ್ನು ಮಾಡಿದರು. ಕೋಲ್ಕತ್ತಾ ನಗರದಲ್ಲಿ ಸಲಿಂಗ ವಿವಾಹಗಳು ನಡೆಯುತ್ತಿರುವುದು ಇದೇ ಮೊದಲಲ್ಲವಾದರೂ, ಮದುವೆಯಲ್ಲಿ ಹಿಂದೂ ಸಂಪ್ರದಾಯಗಳನ್ನು ಪಾಲಿಸುತ್ತಿರುವುದು ಇದೇ ಮೊದಲು.
ಇದನ್ನೂ ಓದಿ: ಚಂದ್ರಶೇಖರ್ ಗುರೂಜಿ ಹತ್ಯೆ: ವಿಚಾರಣೆಯಲ್ಲಿ ಹಂತಕರು ಹೇಳಿದ್ದೇನು!
ಸುದ್ದಿಗಾರರೊಂದಿಗೆ ಮಾತನಾಡಿದ ಚೈತನ್, “ಕಳೆದ ವರ್ಷ ಡಿಸೆಂಬರ್‌ನಲ್ಲಿ ಮದುವೆಯಾಗಲು ನಿರ್ಧರಿಸಲಾಗಿತ್ತು ಆದರೆ ಕೋವಿಡ್ -19 ಪರಿಸ್ಥಿತಿಯಿಂದಾಗಿ ನಮ್ಮ ಕುಟುಂಬಸ್ಥರು ಬರಲು ಸಾಧ್ಯವಾಗಲಿಲ್ಲ. ಆದ್ದರಿಂದ ಮದುವೆಯನ್ನು ಜುಲೈಗೆ ಮುಂದೂಡಲಾಗಿತ್ತು. ಅಭಿಷೇಕ್ ನನ್ನ ಪತಿ, ಜೀವನ ಸಂಗಾತಿ ಮತ್ತು ಉತ್ತಮ ಸ್ನೇಹಿತ. ಈತ ನನ್ನ ಪತಿಯಾಗಿರುವುದಕ್ಕೆ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ” ಎಂದು ಸಂತಸ ವ್ಯಕ್ತಪಡಿಸಿದರು.