ಮುಂಬೈಯನ್ನು POKಗೆ ಹೋಲಿಸಿದವರಿಗೆ BJP ಬೆಂಬಲ ನೀಡುತ್ತಿರುವುದು ದುರದೃಷ್ಟಕರ: ಸಂಜಯ್ ರಾವತ್
Team Udayavani, Sep 13, 2020, 2:55 PM IST
ಮುಂಬೈ: ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದವರಿಗೆ ಮಹಾರಾಷ್ಟ್ರದ ಪ್ರಧಾನ ವಿರೋಧ ಪಕ್ಷ ಬೆಂಬಲ ನೀಡುತ್ತಿರುವುದು ದುರದೃಷ್ಟಕರ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಭಾನುವಾರ ಭಾರತೀಯ ಜನತಾ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.
ಶಿನಸೇನಾ ಮುಖವಾಣಿ ‘ಸಾಮ್ನಾ’ದಲ್ಲಿ ತಮ್ಮ ಅಂಕಣ ರೋಖಾಟೋಕ್ ನಲ್ಲಿ ಈ ಕುರಿತು ಸಂಜಯ್ ರಾವತ್ ಬರೆದುಕೊಂಡಿದ್ದಾರೆ. ಆದರೇ ಎಲ್ಲಿಯೂ ಕೂಡ ಬಾಲಿವುಡ್ ನಟಿ ಕಂಗನಾ ರಣಾವತ್ ಹೆಸರು ಪ್ರಸ್ಥಾಪಿಸಲಿಲ್ಲ. ಮಾತ್ರವಲ್ಲದೆ ಬಿಜೆಪಿಯು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಸಂಜಯ್ ರಾವತ್ ತಿಳಿಸಿದ್ದಾರೆ.
ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ ಹಾಗೂ ಬಿಎಂಸಿ (ಬೃಹನ್ ಮಂಬೈ ಮಹಾನಗರ ಪಾಲಿಕೆ)ಯನ್ನು ಬಾಬರ್ ಆರ್ಮಿ ಎಂದು ಕರೆದವರಿಗೆ ಮಹಾರಾಷ್ಟ್ರದ ಪ್ರತಿಪಕ್ಷ ಬೆಂಬಲ ನೀಡುತ್ತಿದೆ. ಇದು ಬಿಹಾರ ಚುನಾವಣೆಯಲ್ಲಿ ರಜಪೂತ್ ಹಾಗೂ ಕ್ಷತ್ರಿಯಾ ಪಂಗಡದ ಮತ ಪಡೆಯಲು ಅನುಸರಿಸುತ್ತಿರುವ ತಂತ್ರ. ಮಹಾರಾಷ್ಟ್ರವನ್ನು ಅವಮಾನಿಸಿದರೂ ಬಿಜೆಪಿ ಕ್ಯಾರೇ ಅನ್ನುತ್ತಿಲ್ಲ. ಈ ನೀತಿಯು ತಮ್ಮನ್ನು ‘ರಾಷ್ಟ್ರೀಯ’ ಎಂದು ಕರೆದುಕೊಳ್ಳುವವರಿಗೆ ವಿರುದ್ಧವಾದುದು. ದೆಹಲಿಯಲ್ಲಿರುವ ಮಹಾರಾಷ್ಟ್ರದ ಯಾವುದೇ ಮುಖಂಡರೂ(ಬಿಜೆಪಿ) ರಾಜ್ಯವನ್ನು ಅವಮಾನಿಸಿದ ರೀತಿಗೆ ಬೇಸರ ವ್ಯಕ್ತಪಡಿಸಿಲ್ಲ ಎಂದು ಸಂಜಯ್ ರೌತ್ ಹೇಳಿದ್ದಾರೆ.
ಮುಂಬೈನ ಪ್ರಾಮುಖ್ಯತೆಯನ್ನು ಕಡಿಮೆ ಮಾಡಲು ನಡೆಸುತ್ತಿರುವ ವ್ಯವಸ್ಥಿತ ಪ್ರಯತ್ನವಿದು. ಮಹಾರಾಷ್ಟ್ರದ ಎಲ್ಲಾ ಮರಾಠಿ ಜನರು ಒಗ್ಗೂಡಬೇಕಾದ ಕಠಿಣ ಅವಧಿ ಇದು. ನಟಿಯೊಬ್ಬರು ರಾಜ್ಯದ ಮುಖ್ಯಮಂತ್ರಿಯನ್ನು ಅವಮಾನಿಸಿದರೇ ಯಾವೊಬ್ಬ ವ್ಯಕ್ತಿಯೂ ಕೂಡ ಇದರ ವಿರುದ್ಧ ಧ್ವನಿಯೆತ್ತುತಿಲ್ಲ. ಯಾವ ರೀತಿಯ ಸ್ವಾತಂತ್ರ್ಯವಿದು ? ಎಂದು ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.