ಪೋಕ್ಸೋ ಬಲವರ್ಧನೆಗೆ ಅಸ್ತು

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ಅಪರಾಧಿಗಳಿಗೆ ಗಲ್ಲು ಖಾಯಂ

Team Udayavani, Jul 11, 2019, 6:00 AM IST

ಹೊಸದಿಲ್ಲಿ: ದೇಶದಲ್ಲಿ ಹೆಚ್ಚುತ್ತಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಅಪರಾಧಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸುವಂಥ ಪ್ರಸ್ತಾವವುಳ್ಳ ಮಕ್ಕಳ ಸಂರಕ್ಷಣೆ ಕಾಯ್ದೆಗೆ (ಪೋಕ್ಸೊ) ತಿದ್ದುಪಡಿ ತರುವ ಮಸೂದೆಗೆ, ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.

ಇದರ ಜತೆಗೆ ಕಾರ್ಮಿಕ ಕಾನೂನುಗಳ ವಿಲೀನ, ಅನಿಯಂತ್ರಿತ ಠೇವಣಿ ಯೋಜನೆಗಳಿಗೆ ನಿಷೇಧ ಹಾಗೂ ರೈಲ್ವೆ ಸುರಕ್ಷಾ ಪಡೆಗೆ ಗ್ರೂಪ್‌ ‘ಎ’ ಸೇವಾ ಸೌಲಭ್ಯಗಳನ್ನು ನೀಡುವ ಇತರ ಪ್ರಸ್ತಾವನೆಗಳಿಗೂ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಪೋಕ್ಸೊ ಕಾಯ್ದೆಗೆ ತಿದ್ದುಪಡಿ: ಮಕ್ಕಳ ಮೇಲಾಗುತ್ತಿರುವ ಲೈಂಗಿಕ ಅಪರಾಧಗಳನ್ನು ಬುಡಸಮೇತ ಕಿತ್ತುಹಾಕುವ ಸಂಕಲ್ಪ ತೊಟ್ಟಿರುವ ಕೇಂದ್ರ ಸರಕಾರ ಪೋಕ್ಸೊ ಕಾಯ್ದೆಯನ್ನು ಕಠಿಣಗೊಳಿಸುವ ದೃಢ ಸಂಕಲ್ಪ ಮಾಡಿದೆ. ಇಂಥ ಪ್ರಕರಣಗಳ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಕಾಯಂಗೊಳಿಸುವುದಷ್ಟೇ ಅಲ್ಲದೆ, ಮಕ್ಕಳ ಮೇಲಿನ ಲೈಂಗಿಕ ಚಟುವಟಿಕೆಗಳ ವಿಡಿಯೋಗಳ ವೀಕ್ಷಣೆಯಂಥ ಕೃತ್ಯಗಳಿಗೆ (ಚೈಲ್ಡ್ ಪೋರ್ನೋಗ್ರಫಿ) ದಂಡ ಹಾಗೂ ಜೈಲು ವಾಸದಂಥ ಶಿಕ್ಷೆ ವಿಧಿಸುವ ಮತ್ತೂಂದು ಮಹತ್ವದ ತಿದ್ದುಪಡಿಯನ್ನು ತರಲು ಸಂಪುಟ ಸಭೆಯಲ್ಲಿ ಸಮ್ಮತಿಸಲಾಗಿದೆ.

ಆರ್‌ಪಿಎಫ್ಗೆ ನೆರವು: ರೈಲ್ವೆ ರಕ್ಷಣಾ ಪಡೆಗೆ (ಆರ್‌ಪಿಎಫ್) ಸಂಘಟಿತ ಗ್ರೂಪ್‌ ಎ ಸೇವೆಯ ಸ್ಥಾನಮಾನ ಕಲ್ಪಿಸುವ ಮತ್ತೂಂದು ಪ್ರಸ್ತಾವನೆಗೂ ಸಂಪುಟ ಒಪ್ಪಿಗೆ ನೀಡಿದೆ. ನಾನ್‌ ಫ‌ಂಕ್ಷನಲ್ ಫಿನಾನ್ಶಿಯಲ್ ಅಪ್‌ಗ್ರೇಡೇಶನ್‌ (ಎನ್‌ಎಫ್ಎಫ್ಯು) ಹಾಗೂ ನಾನ್‌-ಫಿನಾನ್ಶಿಯಲ್ ಸೆಲೆಕ್ಷನ್‌ ಗ್ರೇಡ್‌ (ಎನ್‌ಎಫ್ಎಸ್‌ಜಿ) ಅಡಿಯಲ್ಲಿ ನೀಡಲಾಗಿರುವ ಈ ಹೊಸ ಸೌಕರ್ಯದಿಂದಾಗಿ, ಆರ್‌ಪಿಎಫ್ ಕೇಡರ್‌ ಅಧಿಕಾರಿಗಳು ಕೇಂದ್ರೀಯ ಸಿಬಂದಿ ಯೋಜನೆಯ ವ್ಯಾಪ್ತಿಗೊಳಪಡಲಿದ್ದು, ಉತ್ತಮ ಡೆಪ್ಯೂಟೇಶನ್‌ ಅವಕಾಶಗಳಿಗೆ, ಮನೆ ಬಾಡಿಗೆ ಭತ್ಯೆ, ಪ್ರಯಾಣ ಭತ್ಯೆ ಹಾಗೂ ತುಟ್ಟಿ ಭತ್ಯೆಯಂಥ ಅನುಕೂಲಗಳಿಗೆ ಭಾಜನರಾಗಲಿದ್ದಾರೆ. ಇದೇ ತಿಂಗಳ ಆರಂಭದಲ್ಲಿ, ಇದೇ ಸೌಲಭ್ಯವನ್ನು ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್), ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್), ಇಂಡೋ-ಟಿಬೆಟಿಯನ್‌ ಗಡಿ ಪೊಲೀಸ್‌ (ಐಟಿಬಿಪಿ) ಹಾಗೂ ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ) ಪಡೆಗಳಿಗೆ ವಿಸ್ತರಿಸಲಾಗಿತ್ತು. ಇದೀಗ, ರೈಲ್ವೇ ರಕ್ಷಣಾ ಪಡೆಗೂ ಅದರ ಲಾಭ ಸಿಗುವಂತೆ ಮಾಡಲಾಗಿದೆ. ಈ ನಿರ್ಧಾರದಿಂದ ಆರ್‌ಪಿಎಫ್ನಲ್ಲಿದ್ದ ಜಡತ್ವವನ್ನು ನಿವಾರಿಸಿದಂತಾಗುತ್ತದೆ. ಅಲ್ಲಿನ ಅಧಿಕಾರಿಗಳಿಗೆ ಉತ್ತಮ ಬಡ್ತಿ ಮುಂತಾದ ಸೌಲಭ್ಯಗಳು ಸಿಗಲಿದ್ದು ಅವರ ಸೇವಾವೃತ್ತಿಯ ಉನ್ನತಿಗೂ ಕಾರಣವಾಗುತ್ತದೆ ಎಂದು ಕೇಂದ್ರ ಸರಕಾರ ಹೇಳಿದೆ.

ತೃತೀಯ ಲಿಂಗಿಗಳ ಮಸೂದೆಗೆ ಅಸ್ತು: ತೃತೀಯ ಲಿಂಗಿಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಬಲೀಕರಣಕ್ಕೆ ಅವಕಾಶ ಕಲ್ಪಿಸುವ ತೃತೀಯ ಲಿಂಗಿಗಳ (ಹಕ್ಕುಗಳ ರಕ್ಷಣೆ) ವಿಧೇಯಕ 2019ಕ್ಕೂ ಸಂಪುಟದ ಮುದ್ರೆ ಬಿದ್ದಿದೆ.

ಕಾರ್ಮಿಕ ಕಾನೂನುಗಳ ವಿಲೀನ: ದೇಶದಲ್ಲಿ ಚಾಲ್ತಿಯಲ್ಲಿದ್ದ 13 ಕೇಂದ್ರೀಯ ಕಾರ್ಮಿಕ ಕಾನೂನುಗಳನ್ನು ಸಮ್ಮಿಳಿತಗೊಳಿಸಿ ಕೇವಲ ಒಂದೇ ಒಂದು ಕಾರ್ಮಿಕ ನೀತಿ ಸಂಹಿತೆ ರೂಪಿಸಲು ಅನುಕೂಲವಾಗುವ ಕರಡು ಮಸೂದೆಗೆ ಸಂಪುಟ ಸಮ್ಮತಿಸಿದೆ. ಹೊಸದಾಗಿ ರೂಪುಗೊಳ್ಳಲಿರುವ ಏಕಸ್ವರೂಪದ ಕಾರ್ಮಿಕ ನೀತಿಯು, 10 ನೌಕರರು ಹಾಗೂ ಅದಕ್ಕಿಂತ ಹೆಚ್ಚಾಗಿರುವ ಎಲ್ಲ ಸಂಸ್ಥೆಗಳಿಗೂ ಅನ್ವಯವಾಗಲಿದೆ. ವಿವಿಧ ಸಂಸ್ಥೆಗಳಲ್ಲಿ ದುಡಿಯುತ್ತಿರುವ ನೌಕರರ ಸುರಕ್ಷೆ, ಆರೋಗ್ಯ ಹಾಗೂ ಉತ್ತಮ ಸೇವಾ ವಾತಾವರಣ ಕಲ್ಪಿಸುವ 2019ರ ಮಸೂದೆಯ ಆಧಾರದ ಮೇಲೆ ಹೊಸ ಕಾರ್ಮಿಕ ನೀತಿ ರೂಪಿಸಲಾಗಿದೆ.

ಜಲವಿವಾದ ಬಗೆಹರಿಸಲು ಏಕೈಕ ನ್ಯಾಯಾಧಿಕರಣ
ಎಲ್ಲ ಅಂತಾರಾಜ್ಯ ಜಲ ವಿವಾದಗಳನ್ನು ಬಗೆಹರಿಸಲು ಏಕೈಕ ಶಾಶ್ವತ ನ್ಯಾಯಾಧಿಕರಣ ರಚಿಸಲು ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಪ್ರಸ್ತುತ ಇರುವ ಎಲ್ಲ 9 ನ್ಯಾಯಾಧಿಕರಣಗಳನ್ನು ವಿಲೀನಗೊಳಿಸಿ, ಈ ಏಕೈಕ ನ್ಯಾಯಾಧಿಕರಣದಲ್ಲಿ ಎಲ್ಲ ಅಂತಾರಾಜ್ಯ ಜಲವಿವಾದಗಳನ್ನು ತ್ವರಿತಗತಿ ಯಲ್ಲಿ ಪರಿಹರಿಸುವ ಉದ್ದೇಶವನ್ನು ಹೊಂದಲಾಗಿದೆ. ಈ ನ್ಯಾಯಾಧಿ ಕರಣ ಅಸ್ತಿತ್ವಕ್ಕೆ ಬಂದರೆ ಕರ್ನಾಟಕದ ಕಾವೇರಿ, ಮಹದಾಯಿ ಸಹಿತ ಎಲ್ಲ ನದಿ ನೀರು ವಿವಾದಗಳೂ ಇಲ್ಲೇ ಪರಿಹಾರ ಕಾಣಲಿವೆ. ಈಗ 9 ನ್ಯಾಯಾಧಿಕರಣಗಳಿದ್ದು, ಇವುಗಳು ವಿವಾದ ಪರಿಹರಿಸಲು 17ರಿಂದ 27 ವರ್ಷಗಳನ್ನು ತೆಗೆದುಕೊಂಡಿವೆ. ಆದರೆ, ಹೊಸ ನ್ಯಾಯಾಧಿಕರಣವು ಕಡ್ಡಾಯವಾಗಿ 2 ವರ್ಷಗಳೊಳಗೆ ವಿವಾದ ಬಗೆಹರಿಸಬೇಕಾಗುತ್ತದೆ. ಜತೆಗೆ, ಇಲ್ಲಿ ನೀಡಲಾಗುವ ಆದೇಶವು ಅಧಿಸೂಚನೆಯಾಗಿ ಪರಿವರ್ತಿತ ಗೊಳ್ಳಲಿದೆ ಎಂದು ಸಚಿವ ಪ್ರಕಾಶ್‌ ಜಾಬ್ಡೇಕರ್‌ ಹೇಳಿದ್ದಾರೆ.

ಆರ್ಥಿಕ ಅಕ್ರಮಕ್ಕೆ ಬೀಳಲಿದೆ ಲಗಾಮು

ಆರ್ಥಿಕ ಕ್ಷೇತ್ರದಲ್ಲಿ ಅನಿಯಂತ್ರಿತ ಠೇವಣಿ ಯೋಜನೆಗಳನ್ನು ರದ್ದುಗೊಳಿಸುವಂಥ ಮತ್ತೂಂದು ಮಹತ್ವದ ಮಸೂದೆಗೆ ಸಂಪುಟ ಅಸ್ತು ನೀಡಿದೆ. ಹೊಸ ಮಸೂದೆಯು 2019ರ ಅನಿಯಂತ್ರಿತ ಠೇವಣಿ ಯೋಜನೆ ಗಳ ನಿಗ್ರಹ ಅಧ್ಯಾದೇಶದ ಬದಲಿಗೆ ಕಾನೂನಾಗಿ ಜಾರಿಗೊಳ್ಳಲಿದೆ. ಸಂಪುಟ ಸಭೆಯ ಅನಂತರ ಈ ವಿಚಾರ ತಿಳಿಸಿದ ಕೇಂದ್ರ ಸಚಿವ ಪ್ರಕಾಶ್‌ ಜಾಬ್ಡೇಕರ್‌, ದೇಶದಲ್ಲಿ ನಡೆಯುವ ಕಾನೂನು ಬಾಹಿರ ಹಣ ವರ್ಗಾವಣೆ ತಡೆಯಲು ಹೊಸ ಮಸೂದೆ ನೆರವಾಗಲಿದೆ ಎಂದಿದ್ದಾರೆ.

•ಚೈಲ್ಡ್ ಪೋರ್ನೋಗ್ರಫಿಗೆ ದಂಡ, ಜೈಲು ವಾಸ ಪ್ರಸ್ತಾವನೆಗೆ ಕೇಂದ್ರ ಸಂಪುಟ ಒಪ್ಪಿಗೆ •ಕಾನೂನು ಬಾಹಿರ ಹಣಕಾಸು ಹೂಡಿಕೆಗಳ ನಿಯಂತ್ರಣಕ್ಕೆ ಹೆಜ್ಜೆ
•ರೈಲ್ವೆ ಸುರಕ್ಷಾ ಪಡೆಗೆ ಗ್ರೂಪ್‌ ‘ಎ’ ಸೇವಾ ಸೌಲಭ್ಯ ನೀಡಲು ಸಮ್ಮತಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ