ತ.ನಾಡು ವಿರುದ್ಧ ರಾಜ್ಯಕ್ಕೆ ಜಯ

Team Udayavani, Nov 16, 2019, 3:05 AM IST

ನವದೆಹಲಿ: ಕೋಲಾರ ಜಿಲ್ಲೆಯ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಕರ್ನಾಟಕ ನಿರ್ಮಿಸುತ್ತಿರುವ ಕಿರು ಅಣೆಕಟ್ಟು ಕಾಮಗಾರಿಯನ್ನು ನಿಲ್ಲಿಸಬೇಕೆಂಬ, ತಮಿಳುನಾಡಿನ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾ ಮಾಡಿದೆ. ಇದು ರಾಜ್ಯಕ್ಕೆ ಸಿಕ್ಕಿರುವ ಮಹತ್ವದ ಜಯವಾಗಿದೆ.

ಕೋಲಾರ ಜಿಲ್ಲೆಯ ಯರಗೋಳು ಎಂಬ ಹಳ್ಳಿಯಲ್ಲಿ ಬಂಗಾರಪೇಟೆ, ಮಾಲೂರು, ಕೋಲಾರಕ್ಕೆ ಕುಡಿಯುವ ನೀರು ಪೂರೈಸಲು ರಾಜ್ಯ ಸರ್ಕಾರ ಕಿರು ಅಣೆಕಟ್ಟನ್ನು ನಿರ್ಮಿಸುತ್ತಿದೆ. 240 ಕೋಟಿ ರೂ. ವೆಚ್ಚದಲ್ಲಿ 50 ಕೋಟಿ ಕ್ಯೂಬಿಕ್‌ ಮೀ.ಗಳಷ್ಟು ನೀರು ಸಂಗ್ರಹಿಸುವ ಯೋಜನೆಯಿದು.

ತಮಿಳುನಾಡು ವಾದವೇನು?: ತಮಿಳುನಾಡಿನ ಪೆನ್ನೈಯರ್‌ ನದಿಯ ಉಪನದಿ ಮಾರ್ಕಂಡೇಯ. ಈ ನದಿಗೆ ಅಣೆಕಟ್ಟು ಕಟ್ಟಿದರೆ ತಮಿಳು ನಾಡಿನ ಕೃಷ್ಣಗಿರಿ, ಧರ್ಮಪುರಿ, ತಿರುವಣ್ಣಾಮಲೈ, ವಿಲ್ಲುಪುರಂ, ಕಡಲೂರು ಜಿಲ್ಲೆಯ ಲಕ್ಷಾಂತರ ರೈತರ ಕೃಷಿ ಚಟುವಟಿಕೆಗಳಿಗೆ ಸಂಕಷ್ಟವೊದಗುತ್ತದೆ. ಅಲ್ಲದೇ ಕರ್ನಾಟಕದ ಈ ಕ್ರಮ ಅಂತಾರಾಜ್ಯ ಜಲವಿವಾದ ಕಾಯ್ದೆಯ ಉಲ್ಲಂಘನೆಯೂ ಆಗುತ್ತದೆ ಎಂದು ತಮಿಳುನಾಡು ಸರ್ಕಾರ ವಾದಿಸಿತ್ತು.

ಕರ್ನಾಟಕ ಹೇಳಿದ್ದೇನು?: 2002ರ ರಾಷ್ಟ್ರೀಯ ಜಲನೀತಿ ಪ್ರಕಾರ ಕೃಷಿ ಚಟುವಟಿಕೆಗಳಿಗಿಂತ ಕುಡಿಯುವ ನೀರಿಗೆ ಮೊದಲಿನ ಆದ್ಯತೆ ಕೊಡಬೇಕು. ಕರ್ನಾಟಕ ಕುಡಿಯುವ ನೀರಿನ ಉದ್ದೇಶವಿಟ್ಟುಕೊಂಡು ಶೇ.80ರಷ್ಟು ಕಾಮಗಾರಿಯನ್ನು ಮುಗಿಸಿದೆ. ಅದನ್ನು ಪೂರ್ಣಗೊಳಿಸಲು ಅವಕಾಶ ಮಾಡಿಕೊಡಬೇಕೆಂದು ರಾಜ್ಯ ವಾದಿಸಿತು. ಅದನ್ನು ಸರ್ವೋಚ್ಚ ನ್ಯಾಯಾಲಯ ಮಾನ್ಯ ಮಾಡಿದೆ.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ