ಗೋವಾಕ್ಕೆ ಪ್ರವಾಸಿಗರ ಸಂಖ್ಯೆ ತೀವ್ರ ಇಳಿಮುಖ
ಕೋವಿಡ್ ಸೋಂಕು ಹೆಚ್ಚಳ ಹಿನ್ನೆಲೆ | ಪ್ರವಾಸೋದ್ಯಮ ಅವಲಂಬಿತ ಉದ್ಯೋಗಿಗಳಿಗೆ ಸಂಕಷ್ಟ
Team Udayavani, Apr 26, 2021, 9:48 PM IST
ಪಣಜಿ: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ನೆರೆಯ ರಾಜ್ಯಗಳಲ್ಲಿ ಲಾಕ್ಡೌನ್ ಮಾದರಿಯ ಕಠಿಣ ನಿಯಮ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಗೋವಾಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಇಳಿಕೆಯಾಗಿದೆ.
ಪ್ರವಾಸೋದ್ಯಮ ಅವಲಂಬಿತ ಉದ್ಯೋಗಿಗಳಿಗೆ ಹೆಚ್ಚಿನ ತೊಂದರೆ ಉಂಟಾಗಿದೆ. ಕಳೆದ ಕೆಲ ದಿನಗಳ ಹಿಂದೆ ರಾಜ್ಯಕ್ಕೆ ದೇಶಿಯ ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಇದರಿಂದಾಗಿ ರಾಜ್ಯದ ಎಲ್ಲ ಪ್ರಮುಖ ಹೋಟೆಲ್ ರೂಂಗಳು ಅಡ್ವಾನ್ಸ್ ಬುಕ್ ಆಗಿರುತ್ತಿತ್ತು. ಆದರೆ ಇದೀಗ ಗೋವಾಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆಯಿಂದಾಗಿ ಪ್ರವಾಸೋದ್ಯಮ ಅವಲಂಬಿತ ಉದ್ಯೋಗಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ರಾಜ್ಯದಲ್ಲಿ ಸದ್ಯ ಲಾಕ್ಡೌನ್ ಜಾರಿಯಾಗದಿದ್ದರೂ ಪ್ರವಾಸೋದ್ಯಮ ಅವಲಂಬಿತ ಉದ್ಯೋಗಗಳಿಗೆ ಲಾಕ್ ಡೌನ್ನ ಅನುಭವ ಉಂಟಾಗುವಂತಾಗಿದೆ. ಪ್ರಮುಖ ಬೀಚ್ಗಳಾದ ಕಾಂದೋಳಿ, ಕಲಂಗುಟ್, ಬಾಗಾ, ಶಿಕೇರಿ, ವಾಗಾತೋರ್, ಮೀರಾಮಾರ್ ಬೀಚ್ಗಳು ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿವೆ.