ದಾಳಿ ಎದುರಿಸಲು ಸರ್ವ ಸನ್ನದ್ಧ

Team Udayavani, Mar 6, 2019, 12:30 AM IST

ಹೊಸದಿಲ್ಲಿ: ಮತ್ತೂಂದು ಭಯೋತ್ಪಾದನಾ ದಾಳಿಯಾದರೂ, ಅದನ್ನು ಸಮರ್ಥವಾಗಿ ಎದುರಿಸಲು ಭಾರತ ಸರ್ವ ಸನ್ನದ್ಧವಾಗಿದ್ದು, ಎಲ್ಲ ಆಯ್ಕೆಗಳನ್ನೂ ನಾವು ಮುಕ್ತವಾಗಿರಿಸಿಕೊಂಡಿದ್ದೇವೆ ಎಂದು ಸರಕಾರದ ಅಧಿಕೃತ ಮೂಲಗಳು ತಿಳಿಸಿವೆ. ಪುಲ್ವಾಮಾ ಉಗ್ರರ ದಾಳಿ, ಆ ನಂತರ ನಡೆದ ಬೆಳವಣಿಗೆಗಳ ಬೆನ್ನಲ್ಲೇ ಸರಕಾರದಿಂದ ಈ ಮಾಹಿತಿ ಹೊರಬಿದ್ದಿರುವುದು ಮಹತ್ವ ಪಡೆದಿದೆ.

ಬಾಲಕೋಟ್‌ ವೈಮಾನಿಕ ದಾಳಿಯ ಬಳಿಕವಂತೂ ಭಯೋತ್ಪಾದನೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ಥಾನದ ಮೇಲೆ ಗರಿಷ್ಠ ಒತ್ತಡ ಹೇರಲಾಗುತ್ತಿದೆ. ಜತೆಗೆ, ಪಾಕಿಸ್ಥಾನವು ಎಫ್16 ಯುದ್ಧ ವಿಮಾನವನ್ನು ಬಳಸಿದ್ದಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನೂ ಅಮೆರಿಕಕ್ಕೆ ಒದಗಿಸಲಾಗಿದೆ. ಒಟ್ಟಿನಲ್ಲಿ ಪಾಕ್‌ನಲ್ಲಿ ಉಗ್ರರ ಮೂಲಸೌಕರ್ಯವನ್ನು ನಾಶ ಮಾಡುವ ನಿಟ್ಟಿನಲ್ಲಿ ಹಲವು ಪ್ರಮುಖ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದೂ ಮೂಲಗಳು ಹೇಳಿವೆ. ಉದ್ವಿಗ್ನ ವಾತಾವರಣ ಸೃಷ್ಟಿಯಾದ ಬಳಿಕ ಪಾಕಿಸ್ಥಾನವು ವಿವಿಧ ದೇಶಗಳ ಮೊರೆ ಹೋಗಿ ಸಂಧಾನ ನಡೆಸುವಂತೆ ಬೇಡುತ್ತಿತ್ತು. ಆದರೆ, ಎಲ್ಲ ದೇಶಗಳಿಗೂ ಭಾರತದ ಸ್ಥಾನಮಾನವೇನೆಂದು ಗೊತ್ತಿದ್ದ ಕಾರಣ ಯಾರೂ ಪಾಕ್‌ಗೆ ಬೆಂಬಲ ನೀಡಲಿಲ್ಲ. ಅಲ್ಲದೆ, ಇದು ಭಾರತ-ಪಾಕಿಸ್ಥಾನದ ವಿಚಾರವಲ್ಲ, ಬದಲಿಗೆ ಉಗ್ರವಾದಕ್ಕೆ ಸಂಬಂಧಿಸಿದ ವಿಚಾರ ಎಂಬುದನ್ನು ಅಂತಾರಾಷ್ಟ್ರೀಯ ಸಮುದಾಯ ಅರ್ಥಮಾಡಿಕೊಂಡಿತ್ತು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಹೈಅಲರ್ಟ್‌: ಮತ್ತೂಂದು ಉಗ್ರ ದಾಳಿ ನಡೆದರೂ, ಅದನ್ನು ನಾವು ಎದುರಿಸುತ್ತೇವೆ. ಎಲ್ಲದಕ್ಕೂ ನಾವು ಸಿದ್ಧರಾಗಿದ್ದೇವೆ‌. ಅಲ್ಲದೆ, ಭಾರತೀಯ ವಾಯುಪಡೆಯು ಪಶ್ಚಿಮ ವಲಯದಲ್ಲಿನ ತನ್ನ ಎಲ್ಲ ನೆಲೆಗಳಲ್ಲೂ ಹೈಅಲರ್ಟ್‌ ಘೋಷಿಸಿದೆ ಎಂದೂ ಮೂಲಗಳು ಹೇಳಿವೆ.

ವರದಿಯೂ ರೆಡಿ: ಇದೇ ವೇಳೆ, ಪಾಕಿಸ್ಥಾನದ ಸೇನಾ ಶಿಬಿರಗಳ ಸಮೀಪದಲ್ಲೇ ಉಗ್ರರ ತಾಣಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗಿದೆ. ಈ ಬಗ್ಗೆ ಗುಪ್ತಚರ ಸಂಸ್ಥೆಗಳು ವಿಸ್ತೃತ ವರದಿ ಸಿದ್ಧಪಡಿಸಿದ್ದು, ಸದ್ಯದಲ್ಲೇ ಅದನ್ನು ಅಂತಾರಾಷ್ಟ್ರೀಯ ಸಮುದಾಯದ ಮುಂದಿಡಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಬ್ಬರು ಹಿಜ್ಬುಲ್‌ ಉಗ್ರರ ಹತ್ಯೆ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸೋಮವಾರ ತಡರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್‌ ಮುಜಾಹಿದೀನ್‌ಗೆ ಸೇರಿರುವ ಇಬ್ಬರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ತ್ರಾಲ್‌ ಪ್ರದೇಶದಲ್ಲಿ ಸುಮಾರು 12 ಗಂಟೆಗಳ ಕಾಲ ಈ ಕಾರ್ಯಾಚರಣೆ ನಡೆದಿದ್ದು, ಕೊನೆಗೆ ಸ್ಥಳೀಯರೇ ಆದ ಅದಾರ್‌ ಫ‌ಯಾ ಮತ್ತು ಇರ್ಫಾನ್‌ ಅಹ್ಮದ್‌ ರಾಥೆರ್‌ ಎಂಬಿಬ್ಬರು ಉಗ್ರರನ್ನು ಹತ್ಯೆಗೈಯ್ಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. 

ಪಾಕ್‌ನಿಂದ ದಾಳಿ: ರಜೌರಿ ಜಿಲ್ಲೆಯ ಗ್ರಾಮಗಳು ಮತ್ತು ಮುಂಚೂಣಿ ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕ್‌ ಸೇನೆ ಯು ಶೆಲ್‌ ದಾಳಿಯನ್ನು ಮುಂದುವರಿಸಿದೆ. ಮಂಗಳವಾರವೂ ಕದನ ವಿರಾಮ ಉಲ್ಲಂಘನೆ ನಡೆದಿದ್ದು, ಭಾರತೀಯ ಸೇನೆಯೂ ಪ್ರತಿದಾಳಿ ನಡೆಸಿದೆ. ಯಾವುದೇ ಸಾವು-ನೋವು ವರದಿಯಾಗಿಲ್ಲ.

ದಿಗ್ವಿಜಯ್‌ ಸಿಂಗ್‌ ವಿವಾದ
ಪುಲ್ವಾಮಾ ದಾಳಿಯನ್ನು “ದುರ್ಘ‌ಟನೆ’ ಎಂದು ಉಲ್ಲೇಖೀಸುವ ಮೂಲಕ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ವಿವಾದಕ್ಕೀಡಾಗಿ ದ್ದಾರೆ. ಉಗ್ರರ ದಾಳಿಯನ್ನು ದುರ್ಘ‌ಟನೆ ಎಂದು ಬಿಂಬಿಸಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಟ್ರೋಲ್‌ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅವರು, ನಂತರ ತಮ್ಮ ಟ್ವೀಟ್‌ನಲ್ಲಿ “ದುರ್ಘ‌ಟನೆ’ ಪದದ ಬದಲಾಗಿ “ಭಯೋ ತ್ಪಾದಕ ಕೃತ್ಯ’ ಎಂದು ಬದಲಿಸಿಕೊಂಡಿದ್ದಾರೆ. ಇದೇ ವೇಳೆ, ವಾಯು ಪಡೆ ದಾಳಿಗೆ ಸಾಕ್ಷ್ಯ ಕೇಳುವ ಮೂಲಕ ಕಾಂಗ್ರೆಸ್‌ ನಮ್ಮ ಸಶಸ್ತ್ರ ಪಡೆಗಳ ನೈತಿಕ ಸ್ಥೈರ್ಯವನ್ನು ಕುಂದಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್‌ ನಾಯಕರು ಪಾಕಿಸ್ಥಾನದ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.

ಶಾ ಹೇಳಿಕೆಗೆ ವಿ.ಕೆ.ಸಿಂಗ್‌ ಬೆಂಬಲ
ಬಾಲಕೋಟ್‌ ದಾಳಿಯಲ್ಲಿ 250 ಉಗ್ರರು ಮೃತಪಟ್ಟಿದ್ದಾರೆ ಎಂಬ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿಕೆಯನ್ನು ಕೇಂದ್ರ ಸಚಿವ ಜ.ವಿ.ಕೆ.ಸಿಂಗ್‌ ಸಮರ್ಥಿಸಿಕೊಂಡಿದ್ದಾರೆ. ಜತೆಗೆ, ಸಶಸ್ತ್ರ ಪಡೆಗಳ ದಾಳಿಗೆಲ್ಲ ಸಾಕ್ಷ್ಯ ಕೊಡಲಾಗುವುದಿಲ್ಲ. 1947ರಿಂದ ನಡೆದ ಯುದ್ಧಗಳಿಗೆಲ್ಲ ಸಾಕ್ಷ್ಯ ನೀಡ ಲಾಗಿದೆಯೇ ಎಂದೂ ಪ್ರಶ್ನಿಸಿದ್ದಾರೆ. ಒಂದೋ, ನೀವು ಅಲ್ಲಿಗೆ ಹೋಗಿ ಸತ್ತವರನ್ನು ಎಣಿಸಬೇಕು, ಇಲ್ಲವೇ ಅಲ್ಲಿದ್ದವರ ಬಗೆಗಿನ ಮಾಹಿತಿ ಆಧರಿಸಿ ಒಂದು ಸಂಖ್ಯೆಯನ್ನು ಜನರ ಮುಂದಿಡಬೇಕು. ನಿಖರ ಸಂಖ್ಯೆಯನ್ನು ನೀಡಲು ಹೇಗೆ ಸಾಧ್ಯ ಎಂದೂ ಸಿಂಗ್‌ ಕೇಳಿದ್ದಾರೆ. ಇದೇ ವೇಳೆ, ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ “ದುರ್ಘ‌ಟನೆ’ ಹೇಳಿಕೆಗೆ ಪ್ರತಿಕ್ರಿಯಿಸಿದ ವಿ.ಕೆ.ಸಿಂಗ್‌, “ಹಾಗಿದ್ದರೆ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಕೂಡ ದುರ್ಘ‌ಟನೆಯೇ’ ಎಂದು ಪ್ರಶ್ನಿಸಿದ್ದಾರೆ.

ಪಾಕಿಸ್ಥಾನಕ್ಕೆ ಹೋಗಿ ಎಣಿಸಿಕೊಂಡು ಬನ್ನಿ
ಬಾಲಕೋಟ್‌ನ ದಾಳಿಯಲ್ಲಿ ಎಷ್ಟು ಉಗ್ರರು ಸತ್ತಿದ್ದಾರೆ ಎಂಬುದು ಒಂದೆರಡು ದಿನಗಳಲ್ಲೇ ಗೊತ್ತಾಗಲಿದೆ ಎಂದು ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ದಾಳಿಗೆ ಮುನ್ನ ಅಲ್ಲಿ 300 ಮೊಬೈಲ್‌ ಸಂಪರ್ಕಗಳು ಸಕ್ರಿಯವಾಗಿದ್ದವು ಎಂದು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ. ಆ ಮೊಬೈಲ್‌ಗಳನ್ನು ಮರಗಳು ಬಳಸುತ್ತಿದ್ದವೋ ಎಂದು ಸಿಂಗ್‌ ಪ್ರಶ್ನಿಸಿದ್ದಾರೆ. ಜತೆಗೆ, ದಾಳಿಯಲ್ಲಿ ಸುಮಾರು 300 ಉಗ್ರರು ಮೃತ ಪಟ್ಟಿರಬಹುದು ಎಂದಿದ್ದಾರೆ. ಇದೇ ವೇಳೆ, “ಸಾಕ್ಷ್ಯ ಕೇಳುತ್ತಿರುವ ಪ್ರತಿಪಕ್ಷಗಳು ಅಷ್ಟೊಂದು ಅಗತ್ಯವಿದ್ದರೆ ಪಾಕಿಸ್ಥಾನಕ್ಕೆ ಹೋಗಿ, ಉಗ್ರರ ಹೆಣಗಳನ್ನು ಎಣಿಸಿಕೊಂಡು ಬರಲಿ’ ಎಂದಿದ್ದಾರೆ.

ಸ್ಮಾರ್ಟ್‌ ಬೇಲಿಗೆ ಚಾಲನೆ
ಭಾರತ-ಬಾಂಗ್ಲಾ ಗಡಿಯ 61 ಕಿ.ಮೀ. ನುದ್ದಕ್ಕೂ ಸುಧಾರಿತ ಎಲೆಕ್ಟ್ರಾನಿಕ್‌ ನಿಗಾ ವ್ಯವಸ್ಥೆಗೆ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಧುಬ್ರಿ ಜಿಲ್ಲೆಯಲ್ಲಿ ಮಂಗಳವಾರ ಚಾಲನೆ ನೀಡಿದ್ದಾರೆ. ಅಕ್ರಮ ನುಸುಳುವಿಕೆ, ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ತಡೆಯಲು ಈ ಸ್ಮಾರ್ಟ್‌ ಬೇಲಿ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ. ಈ ವ್ಯವಸ್ಥೆಯಿಂದಾಗಿ ಗಡಿ ಪ್ರದೇಶದ ಅಪರಾಧ ಚಟುವಟಿಕೆ ನಿಯಂತ್ರಣಕ್ಕೆ ತರಲು ಬಿಎಸ್‌ಎಫ್ಗೆ ಸಹಾ  ಯವಾಗುತ್ತದೆ ಮಾತ್ರವಲ್ಲ, ಸಿಬ್ಬಂದಿಯಿಲ್ಲದೇ ದಿನದ 24 ಗಂಟೆಯೂ ಕಣ್ಗಾವಲು ಸಾಧ್ಯವಾಗುತ್ತದೆ ಎಂದಿದ್ದಾರೆ ಸಿಂಗ್‌.

ರಾಜಸ್ಥಾನ ಶಾಲಾ ಪಠ್ಯದಲ್ಲಿ ಅಭಿನಂದನ್‌?
ಪಾಕಿಸ್ಥಾನದ ಸೆರೆಯಲ್ಲಿದ್ದು ಬಿಡುಗಡೆಯಾಗಿ ಭಾರತಕ್ಕೆ ಮರಳಿದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ರ ಶೌರ್ಯ ಇನ್ನು ಮುಂದೆ ರಾಜಸ್ಥಾನದ ಶಾಲಾ ಪಠ್ಯ ಸೇರಲಿದೆ. ಈ ಕುರಿತ ಪ್ರಸ್ತಾವನೆಯನ್ನು ರಾಜ್ಯ ಶಿಕ್ಷಣ ಸಚಿವ ಗೋವಿಂದ್‌ ಸಿಂಗ್‌ ದೊಸ್ತಾರ ಮುಂದಿಟ್ಟಿ ದ್ದಾರೆ. ಅಭಿನಂದನ್‌ ತಮ್ಮ ಶಾಲಾ ಶಿಕ್ಷಣವನ್ನು ಜೋದ್‌ಪುರದಲ್ಲಿ ಪಡೆದಿದ್ದಾರೆ ಎಂಬ ಅಂಶವೂ ನನ್ನ ಈ ಒತ್ತಾಸೆಗೆ ಕಾರಣ ಎಂದು ಅವರು ಹೇಳಿದ್ದಾರೆ. ಅಭಿನಂದನ್‌ ಅವರ ಶೌರ್ಯ ಗಾಥೆಯನ್ನು ಶಾಲಾ ಪಠ್ಯಕ್ಕೆ ಸೇರಿಸುವುದರಿಂದ ಅವರಿಗೆ ಸೂಕ್ತ ಗೌರವ ನೀಡಿದಂತಾ ಗುತ್ತದೆ ಮತ್ತು ಮಕ್ಕಳಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಪಾಕ್‌ ಸಚಿವ ಫ‌ಯಾಜುಲ್‌ ವಜಾ
ಹಿಂದೂ ವಿರೋಧಿ ಹೇಳಿಕೆ ನೀಡಿ ವ್ಯಾಪಕ ಟೀಕಿಗೆ ಗುರಿಯಾದ ಪಾಕಿಸ್ಥಾನದ ಪಂಜಾಬ್‌ ಪ್ರಾಂತ್ಯ ಸರಕಾರದ ಮಾಹಿತಿ ಮತ್ತು ಸಂಸ್ಕೃತಿ ಸಚಿವ ಫ‌ಯಾಜುಲ್‌ ಹಸನ್‌ರನ್ನು ಸಚಿವ ಸ್ಥಾನ ದಿಂದ ವಜಾ ಮಾಡಲಾಗಿದೆ. ಹೇಳಿಕೆಗೆ ಅವರದ್ದೇ ಪಕ್ಷದ ಹಿರಿಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣಗಳಲೂ, ಪಾಕಿಸ್ಥಾನದ ಟ್ವಿಟರ್‌ನಲ್ಲಿ ಹಸನ್‌ರನ್ನು ವಜಾ ಮಾಡುವಂತೆ ಹ್ಯಾಷ್‌ಟ್ಯಾಗ್‌ ಟ್ರೆಂಡಿಂಗ್‌ ಆಗಿತ್ತು. ಕೊನೆಗೆ ಅವರು ಸಾರ್ವಜನಿಕವಾಗಿ ಕ್ಷಮೆಯನ್ನೂ ಯಾಚಿಸಿದ್ದರು. ಆದರೂ, ಅವರನ್ನು ಸಂಪುಟದಿಂದ ಕೈಬಿಡಲು ಪ್ರಧಾನಿ ಖಾನ್‌ ನಿರ್ಧರಿಸಿದ್ದರಿಂದ ಫ‌ಯಾಜುಲ್‌ ರಾಜಿನಾಮೆ ಸಲ್ಲಿಸಿದರು ಎಂದು ಮೂಲಗಳು ಹೇಳಿವೆ. 

ಫೆ.26ರಂದು ನಡೆದ ವೈಮಾನಿಕ ದಾಳಿಯಲ್ಲಿ ಎಷ್ಟು ಮಂದಿ ಸತ್ತರೆಂಬ ಪ್ರಶ್ನೆಯನ್ನು ಪ್ರತಿಪಕ್ಷಗಳು ಮಾತ್ರ ಕೇಳುತ್ತಿಲ್ಲ. ಇಂಗ್ಲೆಂಡ್‌, ಅಮೆರಿಕದ ಮಾಧ್ಯಮಗಳೂ ಇದೇ ಪ್ರಶ್ನೆ ಕೇಳುತ್ತಿವೆ. ದೇಶದ ನಾಗರಿಕರೂ ಶತ್ರುಗಳ ಸಂಹಾರ ಯಾವ ಪ್ರಮಾಣದಲ್ಲಾಗಿದೆ ಎಂಬುದನ್ನು ನಿರೀಕ್ಷಿಸುತ್ತಿದ್ದಾರೆ.
ಶಿವಸೇನೆ (ಮುಖವಾಣಿ “ಸಾಮ್ನಾ’ ಸಂಪಾದಕೀಯದಲ್ಲಿ)

ಹಿಂದೆಲ್ಲ ಪಾಕಿಸ್ಥಾನವು ಭಾರತೀಯ ಯೋಧರ ಶಿರಚ್ಛೇದವಾಗಿರುವ ದೇಹಗಳನ್ನು ಮರಳಿಸುತ್ತಿತ್ತು. ಆದರೆ, ಈಗ ವಶಕ್ಕೆ ಪಡೆದ 48 ಗಂಟೆಗಳ ಒಳಗೆ ವಾಯುಪಡೆ ಪೈಲಟ್‌ನನ್ನು ಬಿಡುಗಡೆ ಮಾಡಿದೆ. ಬದಲಾವಣೆ ಹೇಗಾಗಿದೆ ನೋಡಿ?
ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ