ಪಶ್ಚಿಮ ಬಂಗಾಳ ಹಿಂಸಾಚಾರ ಬಾಂಗ್ಲಾ ಅಕ್ರಮ ನಿವಾಸಿಗಳ ಕೃತ್ಯ: ಬಿಜೆಪಿ ಆರೋಪ

Team Udayavani, Dec 15, 2019, 6:45 AM IST

ಗುವಾಹಟಿ/ಕೋಲ್ಕತ್ತಾ: ಪೌರತ್ವ ಕಾಯ್ದೆಯನ್ನು ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವ್ಯಾಪಕ ಹಿಂಸಾಚಾರದ ಹಿಂದೆ ಬಾಂಗ್ಲಾದೇಶದ ಮುಸ್ಲಿಂ ನುಸುಳುಕೋರರ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ.

ಹಲವು ವಾಹನಗಳು, ರೈಲುಗಳು, ರೈಲ್ವೆ ನಿಲ್ದಾಣಗಳಿಗೆ ಬೆಂಕಿ ಹಚ್ಚಲಾಗಿದ್ದು, ರಾಜ್ಯಾದ್ಯಂತ ಹಿಂಸಾಚಾರ ಭುಗಿಲೆದ್ದಿದೆ. ಇದರ ಹಿಂದೆ ಬಾಂಗ್ಲಾ ನುಸುಳುಕೋರರ ಕೈವಾಡವಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯಿಸುತ್ತೇವೆ ಎಂಬ ಎಚ್ಚರಿಕೆ ಸಂದೇಶವನ್ನು ಬಿಜೆಪಿ ಶನಿವಾರ ರವಾನಿಸಿದೆ.

ಈ ಕುರಿತು ಮಾತನಾಡಿದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್‌ ಸಿನ್ಹಾ, “ಪಶ್ಚಿಮ ಬಂಗಾಳದಲ್ಲಿ ಇಂಥ ಸ್ಥಿತಿ ಬರಲು ಸಿಎಂ ಮಮತಾ ಬ್ಯಾನರ್ಜಿ ಅವರ ಓಲೈಕೆಯ ರಾಜಕೀಯವೇ ಕಾರಣ. ಕಳೆದ 2 ದಿನಗಳಿಂದ ರಾಜ್ಯ ಹೊತ್ತಿ ಉರಿಯುತ್ತಿದ್ದರೂ ಮುಖ್ಯಮಂತ್ರಿಯಾದವರು ಹಿಂಸೆಯನ್ನು ನಿಯಂತ್ರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿ ಯಾವತ್ತೂ ರಾಷ್ಟ್ರಪತಿ ಆಳ್ವಿಕೆಯನ್ನು ಬೆಂಬಲಿಸುವುದಿಲ್ಲ. ಆದರೆ, ರಾಜ್ಯದಲ್ಲಿ ಇಂಥ ನಿರಂಕುಶ ಪ್ರಭುತ್ವ ಮುಂದುವರಿದರೆ, ರಾಷ್ಟ್ರಪತಿ ಆಳ್ವಿಕೆ ಬಿಟ್ಟು ಬೇರೆ ದಾರಿ ಉಳಿಯುವುದಿಲ್ಲ’ ಎಂದಿದ್ದಾರೆ.

ಜತೆಗೆ, ಪ.ಬಂಗಾಳದಲ್ಲಿ ಬಾಂಗ್ಲಾದ ಅಕ್ರಮ ನುಸುಳುಕೋರ ಮುಸ್ಲಿಮರು ಹಿಂಸಾಚಾರದಲ್ಲಿ ತೊಡಗಿದ್ದಾರೆಯೇ ಹೊರತು, ಬಂಗಾಳದ ಶಾಂತಿಪ್ರಿಯ ಮುಸ್ಲಿಮರಲ್ಲ. ಹಾಗಾಗಿ, ಗಲಭೆಕೋರರಿಂದಾಗಿ ಮೂಲ ನಿವಾಸಿಗಳಾದ ಮುಸ್ಲಿಮರ ಹೆಸರು ಕೆಡುತ್ತಿದೆ ಎಂಬುದನ್ನು ಆ ಸಮುದಾಯ ಅರ್ಥ ಮಾಡಿಕೊಳ್ಳಬೇಕು ಎಂದೂ ಸಿನ್ಹಾ ಹೇಳಿದ್ದಾರೆ.

ಮೋದಿ-ಶಾ ಭೇಟಿಯಾಗಲಿರುವ ಸಿಎಂ; ಇನ್ನೊಂದೆಡೆ, ಪೌರತ್ವ ಕಾಯ್ದೆಗೆ ವ್ಯಾಪಕ ವಿರೋಧದಿಂದಾಗಿ ಅಸ್ಸಾಂನಲ್ಲಿ ಭಾರೀ ಹಿಂಸಾಚಾರ ಮುಂದುವರಿದಿರುವ ಕಾರಣ, ಪ್ರಧಾನಿ ಮೋದಿ ಹಾಗೂ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲು ಅಸ್ಸಾಂ ಸಿಎಂ ಸರ್ಬಾನಂದ ಸೊನೊವಾಲ್‌ ನಿರ್ಧರಿಸಿದ್ದಾರೆ. ಸಿಎಂ ನೇತೃತ್ವದ ಸಚಿವರ ನಿಯೋಗವು ಸದ್ಯದಲ್ಲೇ ಮೋದಿ ಮತ್ತು ಶಾರನ್ನು ಭೇಟಿಯಾಗಿ ರಾಜ್ಯದ ಸ್ಥಿತಿಗತಿ ಬಗ್ಗೆ ವಿವರಣೆ ನೀಡಲಿದೆ ಎಂದು ಸಚಿವ ಚಂದ್ರಮೋಹನ್‌ ತಿಳಿಸಿದ್ದಾರೆ.

ಜಾಮಿಯಾ ವಿವಿಗೆ ರಜೆ: ಕಾಯ್ದೆ ವಿರೋಧಿಸಿ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಗುರುವಾರದಿಂದ ದೊಡ್ಡ ಮಟ್ಟದಲ್ಲಿ ಪ್ರತಿಭಟಿಸುತ್ತಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ವಿಶ್ವವಿದ್ಯಾಲಯಕ್ಕೆ 2020ರ ಜ. 5ರವರೆಗೆ ರಜೆ ಘೋಷಿಸಿದೆ.

ಒವೈಸಿ ಅರ್ಜಿ: ಪರಿಷ್ಕೃತ ಪೌರತ್ವ ಕಾಯ್ದೆ ವಿರೋಧಿಸಿ ಹೈದರಾಬಾದ್‌ನ ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ, ಸುಪ್ರೀಂ ಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಇನ್ನು ಕೇರಳದ ತ್ರಿಶೂರ್‌ನ ಕ್ಷೇತ್ರದ ಕಾಂಗ್ರೆಸ್‌ ಸಂಸದ ಟಿ.ಎನ್‌. ಪ್ರತಾಪನ್‌ ಅವರೂ ಶನಿವಾರ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಶುಕ್ರವಾರ, ಕಾಂಗ್ರೆಸ್‌ನ ಜೈರಾಂ ರಮೇಶ್‌ ಹಾಗೂ ವಿವಿಧ ಸಂಘಟನೆಗಳಿಂದ 12ಕ್ಕೂ ಹೆಚ್ಚು ಅರ್ಜಿಗಳು ಅರ್ಜಿಗಳು ಸಲ್ಲಿಕೆಯಾಗಿದ್ದವು.

ಕಾಂಗ್ರೆಸ್‌ಗೆ ಹೊಟ್ಟೆ ಉರಿ: ಶಾ
ದೇಶದಲ್ಲಿ ಪೌರತ್ವ ಕಾಯ್ದೆ ಹೆಸರಿನಲ್ಲಿ ಕಾಂಗ್ರೆಸ್‌ ಹಿಂಸೆಯನ್ನು ಪ್ರಚೋದಿಸುತ್ತಿದೆ. ಸಂಸತ್‌ನಲ್ಲಿ ಈ ಕಾಯ್ದೆ ಅಂಗೀಕಾರವಾಗಿದ್ದಕ್ಕೆ “ಹೊಟ್ಟೆ ಉರಿ’ ಬಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹರಿಹಾಯ್ದಿದ್ದಾರೆ. ಜಾರ್ಖಂಡ್‌ನ‌ಲ್ಲಿ ಶನಿವಾರ ಚುನಾವಣಾ ರ್ಯಾಲಿ ನಡೆಸಿದ ಅವರು, ಈ ಕಾಯ್ದೆಯಿಂದ ಈಶಾನ್ಯ ರಾಜ್ಯಗಳ ಸಂಸ್ಕೃತಿ, ಭಾಷೆ, ಸಾಮಾಜಿಕ ಅಸ್ತಿತ್ವ ಹಾಗೂ ರಾಜಕೀಯ ಹಕ್ಕುಗಳಿಗೆ ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ ಎಂದು ಅಸ್ಸಾಂ ಮತ್ತಿತರ ರಾಜ್ಯಗಳ ಜನತೆಗೆ ಅಭಯ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್‌ ಸಂಗ್ಮಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಅವರು ಈ ಕಾಯ್ದೆಗೆ ತಿದ್ದುಪಡಿ ತರುವಂತೆ ಕೋರಿದ್ದಾರೆ. ಆದರೆ, ಈ ಕಾಯ್ದೆ ಯಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ನಾನು ಅವರ ಮನವೊಲಿಸಿದ್ದೇನೆ. ನೀವು ಕ್ರಿಸ್‌ಮಸ್‌ ಬಳಿಕ ಬಿಡುವಾದಾಗ ನಮ್ಮನ್ನು ಭೇಟಿ ಮಾಡಿ ರಚನಾತ್ಮಕ ಚರ್ಚೆ ನಡೆಸಿ, ಪರಿಹಾರ ಕಂಡು ಕೊಳ್ಳೋಣ ಎಂದ್ದಿದ್ದೇನೆ ಎಂದು ಶಾ ತಿಳಿಸಿದ್ದಾರೆ.

ರಾಹುಲ್‌ ಗಾಂಧಿ ಇಟಲಿಯನ್‌ ಕನ್ನಡಕ ಧರಿಸಿರುವುದರಿಂದ‌ ದೇಶದ ಇತಿಹಾಸದ ಬಗ್ಗೆ ಅವರಿಗೆ ಅರಿವಿಲ್ಲ. ಹೀಗಾಗಿ ಗದ್ದಲ ಎಬ್ಬಿಸುತ್ತಿದ್ದಾರೆ ಎಂದಿದ್ದಾರೆ.

ರೈಲ್ವೆ ಇಲಾಖೆ ಕ್ರಮ
ಪ್ರತಿಭಟನೆಗಳಿಂದಾಗಿ ಅಸ್ಸಾಂನ ವಿವಿಧ ಪ್ರಾಂತ್ಯಗಳಲ್ಲಿ ಸಿಲುಕಿಕೊಂಡಿರುವ ಪರ ಊರುಗಳ ಪ್ರಯಾಣಿಕರ ನೆರವಾಗಿ ಡಿಮಾಪುರ್‌, ಫ‌ರ್ಕೇಟಿಂಗ್‌, ಗೋಲಘಾಟ್‌, ದಿಬ್ರುಗಡ ಪ್ರಾಂತ್ಯಗಳಲ್ಲಿನ ರೈಲ್ವೆ ಜಂಕ್ಷನ್‌ಗಳಿಗೆ ವಿಶೇಷ ರೈಲುಗಳನ್ನು ಗುವಾಹಟಿಯಿಂದ ಕಳುಹಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ
ಪೌರತ್ವ ಕಾಯ್ದೆ ವಿರೋಧಿಸಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನತೆ ಪ್ರತಿಭಟನೆ ನಡೆಸಿತು. ಮುನ್ನೆಚ್ಚರಿಕೆ ಕ್ರಮವಾಗಿ, ದೆಹಲಿ ಮೆಟ್ರೋ ಸಂಸ್ಥೆ ಜಂತರ್‌ ಮಂತರ್‌ ರೈಲು ನಿಲ್ದಾಣವನ್ನು ಮುಚ್ಚಲಾಗಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ