ಹೊಸ ಸಂಪುಟದಲ್ಲಿ ಯಾರಿಗೆ ಮಣೆ?

Team Udayavani, May 30, 2019, 6:00 AM IST

ಬಂಗಾಲದಲ್ಲಿ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತರ ಕುಟುಂಬ ಸದಸ್ಯರು ಪ್ರಧಾನಿ ಮೋದಿ ಪ್ರಮಾಣ ಸ್ವೀಕಾರ ಸಮಾರಂಭಕ್ಕೆ ತೆರಳಲೆಂದು ದಿಲ್ಲಿಗೆ ಹೋಗುವ ರೈಲನ್ನೇರಿದರು.

ಹೊಸದಿಲ್ಲಿ: ಪ್ರಧಾನಿ ಮೋದಿ ಅವರ ನೂತನ ಸಂಪುಟದಲ್ಲಿ ಯಾರ್ಯಾರು ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ ಎಂದು ಕುತೂಹಲ ದೇಶಾದ್ಯಂತ ಮನೆ ಮಾಡಿದೆ. ಆದರೆ, ಗುರುವಾರ ಸಂಜೆ 7 ಗಂಟೆಯವರೆಗೂ ಈ ಕುರಿತ ಮಾಹಿತಿ ಬಹಿರಂಗವಾಗುವುದಿಲ್ಲ.

ಬುಧವಾರ ಸಂಪುಟಕ್ಕೆ ಸಂಬಂಧಿಸಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮ್ಯಾರಥಾನ್‌ ಸಭೆ ನಡೆಸಿ, ಸಚಿವ ಸಂಪುಟಕ್ಕೆ ಅಂತಿಮ ಸ್ಪರ್ಶ ನೀಡಿದ್ದಾರೆ. ಸಚಿವ ಸ್ಥಾನ ಪಡೆಯುತ್ತಿರುವವರಿಗೆ ಈ ಇಬ್ಬರು ನಾಯಕರಲ್ಲಿ ಒಬ್ಬರು ಖುದ್ದಾಗಿ ದೂರವಾಣಿ ಕರೆ ಮಾಡಿ, ಮಾಹಿತಿ ತಿಳಿಸಿದ್ದಾರೆ. ಆದರೆ ಪ್ರಮಾಣ ಸ್ವೀಕಾರದವರೆಗೂ ಇದು ಗುಟ್ಟಾಗಿಯೇ ಇರಲಿದೆ.

ಅನಾರೋಗ್ಯ ಹಿನ್ನೆಲೆಯಲ್ಲಿ ಜೇಟ್ಲಿ ಹುದ್ದೆಯಿಂದ ಹಿಂದೆ ಸರಿದಿರುವ ಕಾರಣ, ವಿತ್ತ ಖಾತೆಗೆ ಯಾರಿಗೆ ಸಿಗಲಿದೆ ಎಂಬ ಕುತೂಹಲ ಮೂಡಿದೆ. ರೈಲ್ವೇ ಸಚಿವರಾಗಿದ್ದ ಪಿಯೂಷ್‌ ಗೋಯಲ್ಗೆ ಈ ಖಾತೆ ಸಿಗುವ ಸಾಧ್ಯತೆಯಿದೆ. ಜತೆಗೆ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೆಸರು ಕೂಡ ವಿತ್ತ ಖಾತೆಗೆ ಕೇಳಿಬರುತ್ತಿದೆ. ಅಲ್ಲದೆ, 4 ಪ್ರಮುಖ ಹುದ್ದೆಗಳಾದ ಹಣಕಾಸು, ಗೃಹ, ರಕ್ಷಣೆ ಅಥವಾ ವಿದೇಶಾಂಗ ಖಾತೆಯಲ್ಲಿ ಯಾವುದಾದರೂ ಒಂದನ್ನು ಅಮಿತ್‌ ಶಾಗೆ ನೀಡುವ ಸಾಧ್ಯತೆ ಅಧಿಕವಾಗಿದೆ.

2ನೇ ಅವಧಿಯ ಸಂಪುಟದಲ್ಲಿ ಹಿರಿಯ ನಾಯಕರಾದ ರಾಜನಾಥ್‌ ಸಿಂಗ್‌, ಗಡ್ಕರಿ, ನಿರ್ಮಲಾ ಸೀತಾರಾಮನ್‌, ನರೇಂದ್ರ ಸಿಂಗ್‌ ಥೋಮರ್‌, ಜಾವಡೇಕರ್‌, ರವಿಶಂಕರ್‌ ಪ್ರಸಾದ್‌, ಧರ್ಮೇಂದ್ರ ಪ್ರಧಾನ್‌, ಸ್ಮತಿ ಇರಾನಿ ಅವರಿಗೆ ಸಚಿವ ಸ್ಥಾನ ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ. ವಿದೇಶಾಂಗ ಸಚಿವೆ ಸುಷ್ಮಾ ಕೂಡ ಅನಾರೋಗ್ಯ ಹಿನ್ನೆಲೆಯಲ್ಲಿ ಈ ಬಾರಿ ಸ್ಪರ್ಧಿಸಿರಲಿಲ್ಲ. ಆದರೆ ಅವರೂ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸುಮಾರು 60 ಸಚಿವರು ಗುರುವಾರ ಪ್ರಮಾಣ ಸ್ವೀಕರಿಸಲಿದ್ದಾರೆ.

ರಾಧಾಮೋಹನ್‌ ಸಿಂಗ್‌ಗೆ ಮತ್ತೆ ಕೇಂದ್ರ ಕೃಷಿ ಸಚಿವ ಸ್ಥಾನ ನೀಡದೇ ಇರಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಜೆಡಿಯು ಹಾಗೂ ಶಿವಸೇನೆ ತಲಾ 2ಸಚಿವ ಸ್ಥಾನಗಳ ನಿರೀಕ್ಷೆಯಲ್ಲಿದ್ದರೆ, ಪಾಸ್ವಾನ್‌ ಅವರ ಎಲ್ಜೆಪಿ ಹಾಗೂ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆಗೆ ತಲಾ 1 ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ. ಒಡಿಶಾ ಮತ್ತು ಪ.ಬಂಗಾಲದಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚಿದ್ದರಿಂದ ಹೆಚ್ಚಿನ ಸ್ಥಾನ ಸಿಗುವ ಸಾಧ್ಯತೆ ಇದೆ.

ವರ್ಷದಲ್ಲಿ 80 ಕಾರ್ಯಕರ್ತರ ಹತ್ಯೆ: ಬಿಜೆಪಿ

ಕಳೆದ ಒಂದು ವರ್ಷದಲ್ಲಿ ಪಶ್ಚಿಮ ಬಂಗಾಳದಲ್ಲಿ 80 ಮಂದಿ ಬಿಜೆಪಿ ಕಾರ್ಯಕರ್ತರು ರಾಜಕೀಯ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಪೈಕಿ, 42 ಕಾರ್ಯಕರ್ತರ ಕುಟುಂಬ ಸದಸ್ಯರಿಗೆ ಇದೇ ಮೊದಲ ಬಾರಿಗೆ ಮೋದಿ ಪ್ರಮಾಣ ಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಪಕ್ಷವೇ ಅವರಿಗೆ ರೈಲ್ವೆ ಟಿಕೆಟ್ ಬುಕ್‌ ಮಾಡಿದ್ದು, ವೈಯಕ್ತಿಕವಾಗಿ ಆಹ್ವಾನ ನೀಡಿದ್ದೇವೆ ಎಂದು ಬಂಗಾಳದ ಬಿಜೆಪಿ ನಾಯಕ ಮುಕುಲ್ ರಾಯ್‌ ಹೇದ್ದಾರೆ. ಅಲ್ಲದೆ, ಇವರೂ ನಮ್ಮ ಆದ್ಯತೆಯ ಪಟ್ಟಿಯಲ್ಲಿದ್ದಾರೆ ಎಂಬ ಸಂದೇಶವನ್ನು ಮಮತಾ ಬ್ಯಾನರ್ಜಿಗೆ ಹಾಗೂ ತೃಣಮೂಲ ಕಾಂಗ್ರೆಸ್‌ಗೆ ಕಳುಹಿಸುವುದೂ ನಮ್ಮ ಉದ್ದೇಶ ಎಂದು ಅವರು ಹೇಳಿದ್ದಾರೆ.

ಮೋದಿ ಗೆದ್ದ ಅನಂತರ ಬದಲಾಯಿತೇ ನಿಲುವು?

ಲೋಕಸಭೆ ಚುನಾವಣೆ ಫ‌ಲಿತಾಂಶಕ್ಕೂ ಮುನ್ನ ಅಂದರೆ ಮೇ 10 ರಂದು ಪ್ರಕಟವಾದ ಅಂತಾರಾಷ್ಟ್ರೀಯ ನಿಯತಕಾಲಿಕೆ ಟೈಮ್‌ ಮುಖಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ‘ಡಿವೈಡರ್‌ ಇನ್‌ ಚೀಫ್’ ಎಂದು ಉಲ್ಲೇಖೀಸಿ, ತೀವ್ರವಾಗಿ ಟೀಕಿಸಲಾಗಿತ್ತು. ಆದರೆ ಫ‌ಲಿತಾಂಶ ಬಂದ ಅನಂತರ ತದ್ವಿರುದ್ಧ ಲೇಖನವನ್ನು ಇದೇ ನಿಯತಕಾಲಿಕೆ ಪ್ರಕಟಿಸಿದೆ. ಭಾರತವನ್ನು ಮೋದಿ ಒಂದಾಗಿಸಿದ್ದಾರೆ ಎಂಬ ಶೀರ್ಷಿಕೆಯ ಅಡಿ ಲೇಖನ ಪ್ರಕಟಿ ಸಲಾಗಿದೆ. ಮನೋಜ್‌ ಲಾಡ್ವಾ ಎಂಬವರು ಬರೆದ ಈ ಲೇಖನದ ಶೀರ್ಷಿಕೆಯೇ, ದಶಕಗಳಿಂದ ಯಾವ ಪ್ರಧಾನಿಯೂ ಮಾಡದಂತೆ ಭಾರತವನ್ನು ಮೋದಿ ಒಗ್ಗೂಡಿಸಿದ್ದಾರೆ. ಅವರು ಜಾತಿಯ ವಿಭಜನೆ ರೇಖೆಯನ್ನು ಮೀರಿ ಗೆಲುವು ಸಾಧಿಸಿದ್ದಾರೆ ಎಂದು ವಿವರಿಸಿದ್ದಾರೆ.

ಈ ಸಲದ ಪ್ರಥಮಗಳು

1 ಬಿಮ್‌ಸ್ಟೆಕ್‌(ಬೇ ಆಫ್ ಬೆಂಗಾಲ್ ಇನೀಷಿಯೇಟಿವ್‌ ಫಾರ್‌ ಮಲ್ಟಿ-ಸೆಕ್ಟೋರಲ್ ಟೆಕ್ನಿಕಲ್ ಆ್ಯಂಡ್‌ ಎಕನಾಮಿಕ್‌ ಕೋಆಪರೇಷನ್‌) ರಾಷ್ಟ್ರಗಳ ನಾಯಕರು ಭಾಗಿಯಾಗುತ್ತಿರುವುದು ಈ ಬಾರಿಯ ವಿಶೇಷ. ಬಿಮ್‌ಸ್ಟೆಕ್‌ನಲ್ಲಿ ಬಾಂಗ್ಲಾದೇಶ, ಮ್ಯಾನ್ಮಾರ್‌, ಭಾರತ, ಶ್ರೀಲಂಕಾ, ಥಾಯ್ಲೆಂಡ್‌, ನೇಪಾಲ ಮತ್ತು ಭೂತಾನ್‌ ಸದಸ್ಯ ರಾಷ್ಟ್ರಗಳಾಗಿವೆ.

2 ಇದೇ ಮೊದಲು ಎಂಬಂತೆ, ಪಶ್ಚಿಮ ಬಂಗಾಲದಲ್ಲಿ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತರ ಕುಟುಂಬ ಸದಸ್ಯರಿಗೆ ಆಹ್ವಾನ ನೀಡಲಾಗಿದೆ. ಮೋದಿಯವರು ಯಾವತ್ತೂ ಕಾರ್ಯಕರ್ತರ ಜತೆಗಿರುತ್ತಾರೆ ಎಂಬ ಸಂದೇ ಶವನ್ನೂ ಈ ಮೂಲಕ ರವಾನಿಸಲಾಗಿದೆ.

3 ಸುಮಾರು 6,500 ಅತಿಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದು, ಇದು ಹಿಂದೆಂದಿಗಿಂತಲೂ ಅತಿ ಹೆಚ್ಚು ಎಂದು ಹೇಳಲಾಗಿದೆ. 2014ರಲ್ಲಿ ಮೋದಿ ಪ್ರಮಾಣ ಸ್ವೀಕಾರ ಸಮಾರಂಭದಲ್ಲಿ ಸುಮಾರು ಐದು ಸಾವಿರ ಅತಿಥಿಗಳು ಇದ್ದರು.

ಅತಿಥಿಗಳಿಗೆ ಮೆನು?

1 ಕಾರ್ಯಕ್ರಮದ ಮೊದಲು ಅತಿಥಿಗಳಿಗೆ ಚಹಾ ಕೂಟ ಏರ್ಪಡಿಸಲಾಗಿದ್ದು, ರಾತ್ರಿ 9ಕ್ಕೆ 40 ಅತಿಥಿಗಳಿಗೆ ಔತಣವನ್ನೂ ಒದಗಿಸಲಾಗುತ್ತದೆ.

2 ಹೈ ಟೀ ಮೆನುವಿನಲ್ಲಿ ಲೆಮನ್‌ ಟಾರ್ಟ್‌(ಡೆಸರ್ಟ್‌), ಸ್ಯಾಂಡ್‌ವಿಚ್‌ಗಳು, ಸಮೋಸಾ, ಸಿಹಿ ರಾಜ್‌ಭೋಗ್‌, ಪನೀರ್‌ ಟಿಕ್ಕಾ ಇರುತ್ತದೆ. ಅತಿಥಿಗಳ ಆದ್ಯತೆಯ ಮೇರೆಗೆ ಸಸ್ಯಾಹಾರ, ಮಾಂಸಾಹಾರದ ಆಯ್ಕೆ ಇರುತ್ತವೆ.

3 ಬಿಮ್‌ಸ್ಟೆಕ್‌ ನಾಯಕರಿಗೆ ಔತಣಕೂಟದ ಸಕಲ ಏರ್ಪಾಟುಗಳನ್ನೂ ರಾಷ್ಟ್ರಪತಿ ಭವನದ ಬಾಣಸಿಗರೇ ಮಾಡಿದ್ದಾರೆ. ಔತಣಕೂಟದ ಪ್ರಮುಖ ಹೈಲೈಟ್ ಎಂದರೆ, ‘ದಾಲ್ ರೈಸಿನಾ’. ಇದನ್ನು ಸಿದ್ಧಪಡಿಸಲು ಬರೋಬ್ಬರಿ 48 ಗಂಟೆಗಳೇ ಬೇಕಾಗುತ್ತದೆ. ಶೆಫ್ ಮಚೀಂದ್ರಾ ಕಸ್ತೂರೆ ಅವರ ನೇತೃತ್ವದಲ್ಲಿ ದಾಲ್ ರೈಸಿನಾವನ್ನು ತಯಾರಿಸಲಾಗಿದೆ. ಇದರೊಂದಿಗೆ ಅವರು ರಾನ್‌-ಎ-ಅಲಿ-ಶಾನ್‌ ಎಂಬ ಖಾದ್ಯವನ್ನೂ ಸಿದ್ಧಪಡಿಸಿದ್ದಾರೆ. ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಭೇಟಿ ವೇಳೆಯೂ ಕಸ್ತೂರೆ ಅವರು ಇದನ್ನು ಸಿದ್ಧಪಡಿಸಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ