ಗಡ್ಕರಿ, ಸಿಬಲ್ ಕ್ಷಮೆ ಕೇಳಿದ ದಿಲ್ಲಿ ಸಿಎಂ
Team Udayavani, Mar 20, 2018, 7:30 AM IST
ನವದೆಹಲಿ: ತಮ್ಮ ಹಾಗೂ ತಮ್ಮ ಪಕ್ಷದ ನಾಯಕ ಮೇಲಿರುವ ಮಾನನಷ್ಟ ಮೊಕದ್ದಮೆಗಳ ಹೊರೆಯನ್ನು ಇಳಿಸಿಕೊಳ್ಳಲು ನಿರ್ಧರಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಈ ನಿಟ್ಟಿನಲ್ಲಿ ಮತ್ತೆರಡು ಹೆಜ್ಜೆಗಳನ್ನಿಟ್ಟಿದ್ದಾರೆ.
ಇತ್ತೀಚೆಗಷ್ಟೇ, ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದ ಪಂಜಾಬ್‌ನ ಅಕಾಲಿದಳದ ನಾಯಕ ಬಿಕ್ರಮ್ ಸಿಂಗ್ ಮಜಿತಿಯಾ ಅವರ ಕ್ಷಮೆ ಕೋರಿದ್ದ ಕೇಜ್ರಿವಾಲ್, ಸೋಮವಾರ, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರ ಕ್ಷಮೆಯನ್ನೂ ಕೋರಿದ್ದು, ತಮ್ಮ ವಿರುದ್ಧದ ಪ್ರಕರಣಗಳನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ. ಈ ಮಧ್ಯೆ ಕ್ಷಮಾಪಣೆಯನ್ನು ಸಮ್ಮತಿಸಿರುವುದಾಗಿ ಕಪಿಲ್ ಸಿಬಲ್ ಹೇಳಿದ್ದು, ಗಡ್ಕರಿಯ ವಕೀಲರು ಕ್ಷಮೆಯನ್ನು ಅಂಗೀಕರಿಸಿ ದ್ದಾರೆ. ಇದರಿಂದ ಎಎಪಿ ಮುಖಂಡರ ವಿರುದ್ಧ ದಾಖಲಾಗಿರುವ 30 ಮಾನಹಾನಿ ಪ್ರಕರಣಗಳು ಪ್ರಕರಣಗಳ ಪೈಕಿ ಮೂರು ಖುಲಾಸೆ ಆದಂತಾಗಿದೆ.
ವೊಡಾಫೋನ್ ತೆರಿಗೆ ವಂಚನೆ ಪ್ರಕರಣದಲ್ಲಿ ಅಮಿತ್ ಸಿಬಲ್ ಹಾಗೂ ಕಪಿಲ್ ಸಿಬಲ್ ಲಾಭ ಮಾಡಿಕೊಂಡಿದ್ದಾರೆ ಎಂದು 2013ರಲ್ಲಿ ಕೇಜ್ರಿವಾಲ್ ಹಾಗೂ ಎಎಪಿ ಮುಖಂಡರು ಆರೋಪಿಸಿದ್ದರು. ಇದೇ ಪ್ರಕರಣದಲ್ಲಿ ಸಹ ಆರೋಪಿ ಡಿಸಿಎಂ ಮನೀಶ್ ಸಿಸೊಡಿಯಾ ಕ್ಷಮೆ ಕೇಳಿದ್ದರಿಂದ ಅವರ ವಿರುದ್ಧದ ಪ್ರಕರಣ ಕೈಬಿಡಲಾಗಿದೆ. ಆದರೆ ಪ್ರಶಾಂತ್ ಭೂಷಣ್, ಬಿಜೆಪಿ ನಾಯಕಿ ಶಾಜಿಯಾ ಇಲ್ಮಿಯನ್ನೂ ಕೂಡ ಈ ಪ್ರಕರಣದಲ್ಲಿ ಹೆಸರಿಸಲಾಗಿದ್ದು, ಅವರ ವಿಚಾರಣೆ ಮುಂದುವರಿಯಲಿದೆ.