ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡ ‘ದಂಗಲ್’ನ ರಿಯಲ್ ಹೀರೋಗಳು
ಕುಸ್ತಿಪಟು ಬಬಿತಾ ಪೋಗಟ್ ಮತ್ತು ತಂದೆ ಮಹಾವೀರ್ ಸಿಂಗ್ ಬಿಜೆಪಿ ಸೇರ್ಪಡೆ
Team Udayavani, Aug 12, 2019, 2:37 PM IST
ನವದೆಹಲಿ: ಖ್ಯಾತ ಮಹಿಳಾ ಕುಸ್ತಿಪಟು ಬಬಿತಾ ಪೋಗಟ್ ಮತ್ತು ಕುಸ್ತಿ ತರಬೇತುದಾರರಾಗಿರುವ ಆಕೆಯ ತಂದೆ ಮಹಾವೀರ್ ಸಿಂಗ್ ಪೋಗಟ್ ಅವರು ಸೋಮವಾರದಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಕ್ರೀಡೆ ಮತ್ತು ಯುವಜನ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ಸಮ್ಮುಖದಲ್ಲಿ ಇವರಿಬ್ಬರೂ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು. ಹರ್ಯಾಣದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಭಾರಿಯಾಗಿರುವ ಅನಿಲ್ ಜೈನ್ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸುಭಾಶ್ ಬಡಾಲಾ ಅವರು ಬಬಿತಾ ಹಾಗೂ ಮಹಾವೀರ್ ಸಿಂಗ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಅಂತಾರಾಷ್ಟ್ರೀಯ ಖ್ಯಾತಿಯ ಕುಸ್ತಿಪಟುವಾಗಿರುವ ಬಬಿತಾ ಅವರ ಸೇರ್ಪಡೆಯಿಂದ ಭಾರತೀಯ ಜನತಾ ಪಕ್ಷಕ್ಕೆ ಹರ್ಯಾಣದಲ್ಲಿ ಇನ್ನಷ್ಟು ಬಲ ಬರಲಿದೆ ಎಂಬುದು ಪಕ್ಷದ ಪ್ರಮುಖರ ಅಭಿಪ್ರಾಯವಾಗಿದೆ. ಹರ್ಯಾಣದಲ್ಲಿ ಈ ವರ್ಷದ ಅಂತ್ಯದಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದೆ.
ಅಮೀರ್ ಖಾನ್ ಅಭಿನಯದ ‘ದಂಗಲ್’ ಚಿತ್ರದ ಬಳಿಕ ಪೋಗಟ್ ಅವರ ಹೆಸರು ಮತ್ತು ಸಾಹಸ ದೇಶಾದ್ಯಂತ ಪ್ರಚಾರಕ್ಕೆ ಬಂದಿತ್ತು. ಬಬಿತಾ ಅವರ ತಂದೆ ಮಹಾವೀರ್ ಸಿಂಗ್ ಎಲ್ಲ ಅಡೆತಡೆಗಳನ್ನು ಮೆಟ್ಟಿನಿಂತು ತನ್ನಿಬ್ಬರು ಹೆಣ್ಣುಮಕ್ಕಳನ್ನು ಕುಸ್ತಿಪಟುಗಳನ್ನಾಗಿಸಿದರು ಎಂಬ ಹಿನ್ನಲೆಯನ್ನು ಈ ಚಿತ್ರದಲ್ಲಿ ತೋರಿಸಿಕೊಡಲಾಗಿದೆ.