ಮಹಾ ತಿರುವು ; ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಟ್ಟ ಬಿಜೆಪಿ
ಬಂಡಾಯ ಸಾರಿ ಮಹಾನಾಯಕನಾದ ಏಕನಾಥ ; ಬಾಳಾಸಾಹೇಬ್ ಸ್ಮರಣೆ ನಿರಂತರ
Team Udayavani, Jun 30, 2022, 4:47 PM IST
ಮುಂಬಯಿ : ಶಿವಸೇನೆಯ ಬಹುಪಾಲು ಶಾಸಕರನ್ನು ಸೆಳೆದು ಗುವಾಹಟಿಗೆ ತೆರಳಿ ಉದ್ಧವ್ ಠಾಕ್ರೆ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಂಡಾಯ ಶಿವಸೇನಾ ಪ್ರಬಲ ನಾಯಕ ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇಂದು , ಗುರುವಾರ ಸಂಜೆ 7.30 ಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ಅವರೊಬ್ಬರೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ನಾವು ತೆಗೆದುಕೊಂಡಿರುವ ನಿರ್ಧಾರವು ಬಾಳಾಸಾಹೇಬರ ಹಿಂದುತ್ವಕ್ಕೆ ಮತ್ತು ನಮ್ಮ ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಿಗೆ ಬದ್ಧವಾಗಿದೆ. ನಮ್ಮೊಂದಿಗೆ 50 ಶಾಸಕರಿದ್ದಾರೆ ಎಂದು ಫಡ್ನವಿಸ್ ಅವರೊಂದಿಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಏಕನಾಥ್ ಶಿಂಧೆ ಹೇಳಿಕೆ ನೀಡಿದ್ದಾರೆ.
ಹಿಂದುತ್ವ ಮತ್ತು ಸಾವರ್ಕರ್ ವಿರುದ್ಧ ಇರುವವರೊಂದಿಗೆ ಶಿವಸೇನೆ ಮೈತ್ರಿ ಮಾಡಿಕೊಂಡಿತು. ಶಿವಸೇನೆ ಜನರ ಆದೇಶವನ್ನು ಅವಮಾನಿಸಿತ್ತು ಎಂದು ಫಡ್ನವಿಸ್ ಹೇಳಿದರು.
ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗಿನ ಮೈತ್ರಿಯನ್ನು ಕೊನೆಗೊಳಿಸಬೇಕೆಂದು ಶಿವಸೇನಾ ಶಾಸಕರು ಒತ್ತಾಯಿಸುತ್ತಿದ್ದರು ಆದರೆ ಉದ್ಧವ್ ಠಾಕ್ರೆ ಈ ಶಾಸಕರನ್ನು ನಿರ್ಲಕ್ಷಿಸಿದರು ಮತ್ತು ಎಂವಿಎ ಮೈತ್ರಿ ಪಾಲುದಾರರಿಗೆ ಆದ್ಯತೆ ನೀಡಿದರು, ಅದಕ್ಕಾಗಿಯೇ ಈ ಶಾಸಕರು ತಮ್ಮ ಧ್ವನಿಯನ್ನು ತೀವ್ರಗೊಳಿಸಿದರು ಎಂದು ಫಡ್ನವಿಸ್ ಹೇಳಿದರು.
ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಮತ್ತು ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.
ಎಲ್ಲಾ ರಾಜಕೀಯ ಲೆಕ್ಕಾಚಾರಗಳು ತಲೆ ಕೆಳಗಾಗಿದ್ದು ಶಿಂಧೆ ಬಂಡಾಯ ಸಾರಿ ಸಫಲತೆಯನ್ನು ಪಡೆದು ಮುಖ್ಯಮಂತ್ರಿ ಹುದ್ದೆಯನ್ನೇ ಪಡೆದಿದ್ದಾರೆ.