ಆದಿತ್ಯ ಠಾಕ್ರೆಗೆ Z ಕೆಟಗರಿ ಭದ್ರತೆ, ಸಚಿನ್ ತೆಂಡೂಲ್ಕರ್ ಭದ್ರತೆ ಕಡಿತ: ವರದಿ
ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಗೆ ಝಡ್ ಪ್ಲಸ್ ಭದ್ರತೆ ಮುಂದುವರಿಸಲಾಗಿದೆ
Team Udayavani, Dec 25, 2019, 4:03 PM IST
ಮುಂಬೈ:ಶಿವಸೇನಾ ಶಾಸಕ ಆದಿತ್ಯ ಠಾಕ್ರೆಯ ಭದ್ರತೆಯನ್ನು “ಝ” ಶ್ರೇಣಿಗೆ ಏರಿಸಿದ್ದು, ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಭದ್ರತೆಯನ್ನು ಕಡಿತಗೊಳಿಸಿ ಎಕ್ಸ್ ಶ್ರೇಣಿಯನ್ನು ತೆಗೆದು ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯಸಭಾ ಮಾಜಿ ಸದಸ್ಯ ಸಚಿನ್ ತೆಂಡೂಲ್ಕರ್ ಅವರು ನಿವಾಸದಿಂದ ಹೊರ ಹೋಗುವ ಸಂದರ್ಭದಲ್ಲಿ ಪೊಲೀಸ್ ಎಸ್ಕಾರ್ಟ್ ನೀಡಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ತೆಂಡೂಲ್ಕರ್ ಗೆ ನೀಡಿದ್ದ ಎಕ್ಸ್ ಕೆಟಗರಿಯ ಪೊಲೀಸರು ರೌಂಡ್ ಕ್ಲಾಕ್ ಭದ್ರತೆ ನೀಡಲಾಗುತ್ತಿತ್ತು.
ಇದೀಗ ಮಹಾರಾಷ್ಟ್ರ ಸರ್ಕಾರದ ಸಮಿತಿ ಬೆದರಿಕೆಯ ಪುನರ್ ಪರಿಶೀಲನೆಯ ನಂತರ ಭದ್ರತೆಯಲ್ಲಿ ಬದಲಾವಣೆ ಮಾಡುವ ಬಗ್ಗೆ ಶಿಫಾರಸು ಮಾಡಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಭದ್ರತಾ ಪುನರ್ ಪರಿಶೀಲನಾ ಸಭೆಯಲ್ಲಿ ತೆಂಡೂಲ್ಕರ್, ಠಾಕ್ರೆ ಸೇರಿದಂತೆ ಸುಮಾರು 90 ಮಂದಿ ಭದ್ರತೆ ಬಗ್ಗೆ ವಿಮರ್ಶೆ ನಡೆಸಲಾಗಿತ್ತು ಎಂದು ವರದಿ ವಿವರಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪುತ್ರ, ಶಾಸಕ ಆದಿತ್ಯ ಠಾಕ್ರೆಗೆ ಝಡ್ ಭದ್ರತೆ ನೀಡಲಾಗಿದೆ. ಈ ಮೊದಲು 29 ವರ್ಷದ ಠಾಕ್ರೆಗೆ ವೈ ಪ್ಲಸ್ ಭದ್ರತೆ ನೀಡಲಾಗಿತ್ತು ಎಂದು ಅಧಿಕಾರಿ ವಿವರಿಸಿದ್ದಾರೆ. ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಗೆ ಝಡ್ ಪ್ಲಸ್ ಭದ್ರತೆ ಮುಂದುವರಿಸಲಾಗಿದೆ. ಸಂಬಂಧಿ ಅಜಿತ್ ಪವಾರ್ ಗೆ ಝಡ್ ಕೆಟಗರಿ ಭದ್ರತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.