65ನೇ ಜಿಎಸ್‌ಬಿ ಗಣೇಶೋತ್ಸವ ದ್ವಿತೀಯ ಪೂರ್ವಭಾವಿ ಸಭೆ

Team Udayavani, Jul 6, 2019, 4:43 PM IST

ಮುಂಬಯಿ: ಜಿಎಸ್‌ಬಿ ಸೇವಾ ಮಂಡಲದ ಕಿಂಗ್‌ಸರ್ಕಲ್‌ನ ಸುಕೃತೀಂದ್ರ ನಗರದಲ್ಲಿ ಜರಗಲಿರುವ ವಿಶ್ವವಿಖ್ಯಾತ 65ನೇ ವಾರ್ಷಿಕ ಗಣೇಶೋತ್ಸವದ ಪೂರ್ವ ತಯಾರಿಗಾಗಿ ಆಯೋಜನಾ ಸಮಿತಿ, ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳು, ಸ್ವಯಂ ಸೇವಕರು, ಭಕ್ತರ ಜಂಟಿ ದ್ವಿತೀಯ ಪೂರ್ವಭಾವಿ ಸಭೆಯು ಜೂ. 29ರಂದು ಸಯಾನ್‌ ಪೂರ್ವದಲ್ಲಿರುವ ಸೇವಾ ಮಂಡಲದ ಶ್ರೀ ಗುರು ಗಣೇಶ ಪ್ರಸಾದ್‌ ಸಭಾಗೃಹದಲ್ಲಿ ನಡೆಯಿತು.

ಆಯೋಜನಾ ಸಮಿತಿಯ ಸಂಚಾಲಕರಾದ ಡಾ| ಭುಜಂಗ ಪೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಾರಂಭದಲ್ಲಿ ಗಣೇಶೋತ್ಸವದ ಪ್ರಧಾನ ವೈದಿಕರಾದ ವಿಜಯ ಭಟ್‌ ಅವರಿಂದ ಪ್ರಾರ್ಥನೆ ನಡೆಯಿತು. ಬಳಿಕ ಭುಜಂಗ ಪೈ ಅವರು ಕಳೆದ ಸಾಲಿನ ಹಾಗೂ ಪ್ರಸ್ತುತ ವರ್ಷದ ಗಣೇಶೋತ್ಸವ ಸಮಯದ ಗಳಿಕೆಯ ವಿವರ ನೀಡಿ, ವಿವಿಧ ಉಪಸಮಿತಿಗಳನ್ನು ವಾಚಿಸಿದರು. ಸರ್ವ ಸಮಿತಿಗಳ ಸದಸ್ಯರು ಆಯಾಯ ಕೆಲಸ ಕಾರ್ಯಗಳನ್ನು ಕ್ಲಪ್ತ ಸಮಯದಲ್ಲಿ ಮಾಡಬೇಕು ಎಂದು ವಿನಂತಿಸಿದರು.

ಟ್ರಸ್ಟಿ ಆರ್‌. ಜಿ. ಭಟ್‌ ಅವರು ಮಾತನಾಡಿ, ನಾವು ಗಣೇಶೋತ್ಸವದ ಪ್ರಾರಂಭದಲ್ಲಿ ವಾಲ್ಕೇಶ್ವರ ಶ್ರೀ ಕಾಶೀ ಮಠದ ವೃಂದಾವನದಲ್ಲಿ ಮಾಧವೇಂದ್ರ ತೀರ್ಥ ಸ್ವಾಮೀಜಿಯವರನ್ನು ಪ್ರಾರ್ಥಿಸಿ ಆ ಬಳಿಕ ಸಂಗ್ರಹ ಪ್ರಾರಂಭ ಮಾಡಲಾಗುತ್ತಿದೆ. ನಮ್ಮ ಗಣೇಶೋತ್ಸವ ಸಮಯದಲ್ಲಿ ತುಲಾಭಾರ ಸೇವೆಯು ಹೆಚ್ಚಿನ ಜನಪ್ರಿಯತೆಯನ್ನು ಪಡೆಯುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಭಕ್ತರು ಶ್ರೀ ಮಹಾಗಣಪತಿಯಲ್ಲಿ ಪ್ರಾರ್ಥಿಸಿದಂತೆ ಅವರ ಇಷ್ಟಾರ್ಥಗಳು ಸಿದ್ಧಿಸುತ್ತಿದ್ದು, ಆದ್ದರಿಂದ ಪ್ರತೀ ವರ್ಷ ಈ ತುಲಾಭಾರ ಸೇವೆಯು ವೃದ್ಧಿಸುತ್ತಿದೆ. ಜಿಎಸ್‌ಬಿ ಗಣಪತಿ ಖ್ಯಾತಿ ಪಡೆಯುವುದಕ್ಕೆ ಹಲವು ವಿಶೇಷತೆಗಳನ್ನು ವಿವರಿಸಿದರು. ಗಣೇಶೋತ್ಸವದಲ್ಲಿ ಭಾಗಿಯಾಗಿ ತಮ್ಮಿಷ್ಟದಂತೆ ಪೂಜೆ, ಸೇವೆ ಸಲ್ಲಿಸುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಇದರಲ್ಲಿ ಸ್ಥಳೀಯರಲ್ಲದೆ ವಿದೇಶದಿಂದಲೂ ಆಗಮಿಸುವವರು ಅನೇಕರಿದ್ದಾರೆ ಎಂದರು.

ರಘುನಂದನ್‌ ಕಾಮತ್‌ ಅವರು ಮಾತನಾಡಿ, ಸರಕಾರದ ಪರವಾನಿಗೆಗಳನ್ನು ಕ್ಲಪ್ತ ಸಮಯದಲ್ಲಿ ಪಡೆಯಬೇಕು ಎಂದರು. ಶ್ರೀನಿವಾಸ ಪ್ರಭು ಅವರು ವಿಕಲಚೇತನ ಭಕ್ತರಿಗೆ ವೇದಿಕೆಯವರೆಗೆ ತಲುಪಲು ಅಗತ್ಯವಿದ್ದಲ್ಲಿ ಸಹಾಯ ಮಾಡಬೇಕು ಎಂದರು. ಸೇವಾ ಮಂಡಲದ ಅಧ್ಯಕ್ಷ ರಮೇಶ್‌ ಭಂಡಾರ್ಕರ್‌ ಅವರು ಮಾತನಾಡಿ, ಸ್ವಯಂ ಸೇವಕರು ಕಲೆಕ್ಷನ್‌ ಪುಸ್ತಕಗಳನ್ನು ಕ್ಲಪ್ತ ಸಮಯದಲ್ಲಿ ಪಡೆದು ಸಹಕರಿಸಬೇಕು ಎಂದರು. ಜಿ. ಡಿ. ರಾವ್‌ ಅವರು ಮಾತನಾಡಿ, ಪ್ರಸಾದ ಚೀಲಗಳನ್ನು ಉತ್ತಮ ಗುಣಮಟ್ಟದಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ವಿನಂತಿಸಿದರು.

ಮಂಡಲದ ಕಾರ್ಯದರ್ಶಿ ಶಿವಾನಂದ ಭಟ್‌ ವಂದಿಸಿದರು. ಮುಂದಿನ ಪೂರ್ವಭಾವಿ ಸಭೆಯು ಜು. 13 ರಂದು ಸಂಜೆ 7.35ರಿಂದ ಸಯಾನ್‌ ಪೂರ್ವದ ಸೇವಾ ಮಂಡಲದ ಶ್ರೀ ಗುರುಗಣೇಶ ಪ್ರಸಾದ ಸಭಾಗೃಹದಲ್ಲಿ ನಡೆಯಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಲಾಯಿತು. ವಿವಿಧ ಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸ್ವಯಂ ಸೇವಕರು, ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ