ಬಂಟರ ಸಂಘ ಅಂಧೇರಿ-ಬಾಂದ್ರಾ : ಯೋಗ ದಿನಾಚರಣೆ

Team Udayavani, Jun 25, 2019, 3:10 PM IST

ಮುಂಬಯಿ: ದೈನಂದಿನ ಬದುಕಿನಲ್ಲಿ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಬೇಕು. ಯೋಗದಿಂದ ರೋಗ ದೂರವಾಗುವುದಲ್ಲದೆ, ಮಾನಸಿಕವಾಗಿ ಮತ್ತು ದೈಹಿಕವಾಗಿ ಬಲಾಡ್ಯರಾಗಲು ಸಾಧ್ಯವಿದೆ. ಯೋಗವನ್ನು ಮನೆಯಲ್ಲೇ ಕುಳಿತು ಯಾವಾಗ ಬೇಕಾದರೂ ಮಾಡಬಹುದು. ಯೋಗಭ್ಯಾಸಕ್ಕೆ ಲ ವಯಸ್ಸು, ಧರ್ಮ, ಜಾತೀಯ ಪರಿಧಿಯಿಲ್ಲ. ಯೋಗಭ್ಯಾಸವು ಒಂದು ದಿನಕ್ಕೆ ಮೀಸಲಾಗಲೇ ವರ್ಷ ಪೂರ್ತಿ ನಡೆಯಬೇಕು ಎಂದು ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಡಾ| ಆರ್‌. ಕೆ. ಶೆಟ್ಟಿ ನುಡಿದರು.

ಜೂ. 21ರಂದು ಅಂಧೇರಿಯ ಮರೋಲ್‌ನ ಭರತ್‌ವನ್‌ ಇಲ್ಲಿ ಬಂಟರ ಸಂಘ ಮುಂಬಯಿ ಅಂಧೇರಿ- ಬಾಂದ್ರಾ ಪ್ರಾದೇಶಿಕ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ವೃಕ್ಷಾ ರೋಹಣ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ಆರೋಗ್ಯ ಮತ್ತು ಪರಿಸರದ ಬಗ್ಗೆ ಕಾಳಜಿ ವಹಿಸುವ ಉ¨ಶ ದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆರೋಗ್ಯ ವಂತರಾಗಿದ್ದರೆ ಮಾತ್ರ ಸಮಾಜ ಸೇವೆಯಲ್ಲಿ ತೊಡಗಲು ಸಾಧ್ಯವಿದೆ. ಆದ್ದರಿಂದ ಆರೋಗ್ಯ ಭಾಗ್ಯದೆಡೆಗೆ ನಮ್ಮ ಚಿತ್ತ ಮೊದಲಾಗಿರಬೇಕು. ನಮ್ಮ ದೇಶದಿಂದಲೇ ಯೋಗ ಪ್ರಾರಂಭವಾಗಿದೆ ಎನ್ನಲು ನಮಗೆ ಹೆಮ್ಮೆಯಾಗಬೇಕು. ಗಿಡಗಳನ್ನು ಬೆಳೆಸಿದಾಗ ಪರಿಸರ ಸಂರಕ್ಷಣೆಯಾಗುತ್ತದೆ. ಇಂದಿನ ಯುವಪೀಳಿಗೆಗೆ ಇದರ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ನಾವೆಲ್ಲರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗೋಣ. ಇಂದಿನ ಎರಡೂ ಕಾರ್ಯಕ್ರಮಗಳಿಗೆ ಸಹಕರಿಸಿದ ಸಮಿತಿಯ ಸದಸ್ಯರಿಗೆ ಹಾಗೂ ಸಮಾಜ ಬಾಂಧವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಸಮಿತಿಯ ಎಲ್ಲಾ ಕಾರ್ಯಕ್ರಮಗಳಿಗೆ ನಿಮ್ಮೆಲ್ಲರ ಸಹಕಾರ ಸದಾಯಿರಲಿ ಎಂದು ಆಶೀಸಿ ವಿಶ್ವ ಯೋಗ ದಿನಾಚರಣೆಯ ಶುಭಹಾರೈಸಿದರು.

ಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ಚಂದ್ರಹಾಸ್‌ ಕೆ. ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದಿನನಿತ್ಯ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯ ಭಾಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ. ಬಂಟರ ಸಂಘದ ಪ್ರತಿಯೊಂದು ಪ್ರಾದೇಶಿಕ ಸಮಿತಿಗಳಿಂದ ಇಂತಹ ಕಾರ್ಯಕ್ರಮಗಳು ನಡೆದಾಗ ಸಮಾಜದ ಮನೆ-ಮನಗಳಿಗೆ ಅರಿವು ಮೂಡಲು ಸಾಧ್ಯವಾಗುತ್ತದೆ. ಸಂಘದ ಎಲ್ಲಾ ರೀತಿಯ ಕಾರ್ಯಕ್ರಮಗಳಿಗೆ ಪ್ರಾದೇಶಿಕ ಸಮಿತಿಗಳ ಸಹಕಾರ ಸದಾಯಿರಲಿ. ಸಮಿತಿಯಿಂದ ಇನ್ನಷ್ಟು ಅರ್ಥಪೂರ್ಣ ಕಾರ್ಯಕ್ರಮ ಗಳು ನಡೆಯುತ್ತಿರಲಿ ಎಂದು ಹಾರೈಸಿದರು.

ಬಂಟರ ಸಂಘದ ಜೊತೆ ಕಾರ್ಯ ದರ್ಶಿ ಮಹೇಶ್‌ ಎಸ್‌. ಶೆಟ್ಟಿ ಮಾತ ನಾಡಿ, ಸಮಿತಿಯಿಂದ ಇದು ಒಂದು ದಿನದ ಕಾರ್ಯಕ್ರಮವಾಗದೇ ದಿನಂಪ್ರತಿ ಯೋಗಭ್ಯಾಸ ಮಾಡುವಂತಾ ಗಬೇಕು. ನಿಮ್ಮ ಸಮಾಜಪರ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಸದಾಯಿರಲಿ ಎಂದರು.

ಬಂಟರ ಸಂಘದ ಕೋಶಾಧಿಕಾರಿ ಗುಣಪಾಲ್‌ ಶೆಟ್ಟಿ ಐಕಳ ಮಾತನಾಡಿ, ನಮ್ಮ ಎಲ್ಲಾ ಕಾಯಿಲೆಗಳಿಗೆ ಯೋಗ ಬಹು ಉತ್ತಮ ಔಷಧಿಯಾಗಿದೆ. ದಿನನಿತ್ಯ ಯೋಗ ಮಾಡುವವರಿಗೆ ರೋಗ ಬಾಧಿಸುವುದಿಲ್ಲ ಎಂದರು.

ಪ್ರಾದೇಶಿಕ ಸಮಿತಿಗಳ ಸಮನ್ವಯಕ ಡಾ| ಪ್ರಭಾಕರ ಶೆಟ್ಟಿ ಬೋಳ ಅವರು ಮಾತನಾಡಿ, ಪ್ರಥಮವಾಗಿ ಭಾರತದಿಂದಲೇ ಯೋಗ ಪ್ರಾರಂಭಗೊಂಡಿರುವುದು ನಮಗೆಲ್ಲರಿಗೂ ಹೆಮ್ಮೆಯಾಗಿದೆ. ಇದನ್ನು ಜಾಗತಿಕವಾಗಿ ಆಚರಿಸುವಂತೆ ಮಾಡಿದ ಶ್ರೇಯಸ್ಸು ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ ಎಂದು ನುಡಿದರು.
ವೇದಿಕೆಯಲ್ಲಿ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ನ್ಯಾಯವಾದಿ ಆರ್‌. ಜಿ. ಶೆಟ್ಟಿ, ಪ್ರಾದೇಶಿಕ ಸಮಿತಿಯ ಗೌರವ ಕಾರ್ಯದರ್ಶಿ ರವಿ ಆರ್‌. ಶೆಟ್ಟಿ, ಕೋಶಾಧಿಕಾರಿ ಕರುಣಾಕರ ಶೆಟ್ಟಿ, ಯಶವಂತ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವನಿತಾ ನೋಂಡಾ, ಡಿ. ಕೆ. ಶೆಟ್ಟಿ, ರಮೇಶ್‌ ರೈ, ಸುಜಾತಾ ಗುಣಪಾಲ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು ಸಂದಭೋìಚಿತವಾಗಿ ಮಾತನಾಡಿ ಶುಭಹಾರೈಸಿದರು. ಮೋನಾಲಿ ಭಟ್ಟಾಚಾರ್ಯ ಮತ್ತು ಪ್ರತಿಮಾ ಶೆಟ್ಟಿ ಅವರು ಯೋಗಭ್ಯಾಸದ ಮಹತ್ವ ಮತ್ತು ಉದ್ಧೇಶವನ್ನು ತಿಳಿಸಿದರು.

ಯೋಗ ಕಾರ್ಯಕ್ರಮದಲ್ಲಿ ಸುಮಾರು 100 ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಮೊನಾಲಿ ಭಟ್ಟಾಚಾರ್ಯ ತಂಡದವರು ಯೋಗ ತರಭೇತಿ ನೀಡಿದರು. ಅಂಧೇರಿ-ಬಾಂದದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಡಾ| ಆರ್‌. ಕೆ. ಶೆಟ್ಟಿ ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಯೋಗ ಮತ್ತು ವೃಕ್ಷಾರೋಪಣ ಕಾರ್ಯಕ್ರಮ ಜರಗಿತು. ರಮೇಶ್‌ ರೈ ಅವರು ಕಾರ್ಯಕ್ರಮ ನಿರ್ವಹಿಸಿದರು. ಸಮಿತಿಯ ಉಪಾಧ್ಯಕ್ಷ ನ್ಯಾಯವಾದಿ ಆರ್‌. ಜಿ. ಶೆಟ್ಟಿ ಅವರು ವಂದಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ