ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ : ವಾರ್ಷಿಕ ಶೈಕ್ಷಣಿಕ ನೆರವು ವಿತರಣೆ

Team Udayavani, Jul 26, 2017, 12:33 PM IST

ನವಿಮುಂಬಯಿ: ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ನವಿಮುಂಬಯಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಹೆಚ್ಚಿನ ಗಮನವನ್ನು ಹರಿಸಬೇಕು. ಇಂದು ನವಿಮುಂಬಯಿ ಅತಿ ವೇಗ ದಲ್ಲಿ ಬೆಳೆಯುತ್ತಿರುವ ನಗರವಾಗಿದೆ. ಇಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವುದರಿಂದ ಸಮಾಜಕ್ಕೆ ಹಾಗೂ ಸಂಸ್ಥೆಗೆ ಉತ್ತಮ ರೀತಿಯಲ್ಲಿ ಸಹಕಾರಿಯಾಗಲಿದೆ ಎಂದು ಉದ್ಯಮಿ, ವಿಶ್ವಾತ್‌ ಕೆಮಿಕಲ್ಸ್‌ನ ಮುಖ್ಯ ಆಡಳಿತ ನಿರ್ದೇಶಕ ಬಿ. ವಿವೇಕ್‌ ಶೆಟ್ಟಿ ಅವರು ಅಭಿಪ್ರಾಯಿಸಿದರು.

ಜು. 23ರಂದು ನವಿಮುಂಬಯಿ ಜೂಯಿ ನಗರದ ಬಂಟ್ಸ್‌ ಸೆಂಟರ್‌ನಲ್ಲಿ ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಇದರ ಶಿಕ್ಷಣ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಶೈಕ್ಷಣಿಕ ನೆರವು ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಸರಸ್ವತಿ ಇದ್ದಲ್ಲಿ ಲಕ್ಷ್ಮಿ ತಾನಾಗಿಯೇ ಒಲಿದು ಬರುತ್ತಾಳೆ. ಇಂದು ಮುಂಬಯಿಯಲ್ಲಿ ಬಂಟ್ಸ್‌ ಸಮಾಜದ ಅನೇಕ ಉದ್ಯಮಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿ ಸಮಾಜಕ್ಕೆ ಹೆಸರು ತಂದಿದ್ದಾರೆ. ಇವರು ನಿರಂತರ ಸಮಾಜಕ್ಕೆ ಸಹಾಯವನ್ನು ಮಾಡುವ ಉದ್ದೇಶವನ್ನು ಇಟ್ಟುಕೊಂಡಿದ್ದಾರೆ. ಅಂಥವರು ನೀಡುವ ಸಹಾಯವನ್ನು ಸರಿಯಾದ ರೀತಿಯಲ್ಲಿ ವಿನಿಯೋಗಿಸಿ ಬಂಟ್ಸ್‌ ಸಂಘ-ಸಂಸ್ಥೆಗಳು ಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಸಮಾಜದ ಮಕ್ಕಳು ಉತ್ತಮ ರೀತಿಯಲ್ಲಿ ಕಲಿತರೆ, ಅದುವೇ ಮುಂದೆ ಸಮಾಜಕ್ಕೆ ಒಂದು ದೊಡ್ಡ ಆಸ್ತಿಯಾಗಿರುತ್ತದೆ ಎಂದು ನುಡಿದು ಶುಭಹಾರೈಸಿದರು.

ಸಹಾಯ ತಲುಪುವಂತೆ ಮಾಡಬೇಕು 
ಇನ್ನೋರ್ವ ಅತಿಥಿ ಬಂಟ್ಸ್‌ ಅಸೋಸಿಯೇಶನ್‌ ಮಾಜಿ ಅಧ್ಯಕ್ಷ ನ್ಯಾಯವಾದಿ ಪ್ರಕಾಶ್‌ ಎಲ್‌. ಶೆಟ್ಟಿ ಅವರು ಮಾತನಾಡಿ, ನಾವು ಯಾರಿಗೆ ಸಹಾಯದ ಅಗತ್ಯವಿದೆಯೋ ಅವರಿಗೆ ಸಹಾಯ ತಲುಪುವಂತೆ ಮಾಡಬೇಕು. ಬಂಟ್ಸ್‌ ಅಸೋಸಿಯೇಶನ್‌ ಶಿಕ್ಷಣಕ್ಕೆ ನಿರಂತರವಾಗಿ ಸಹಾಯ ಮಾಡುತ್ತಾ ಬಂದಿರುವುದು ಅಭಿನಂದನೀಯ. ಉನ್ನತ ಶಿಕ್ಷಣದ ಕಡೆಗೂ ಹೆಚ್ಚಿನ ಗಮನವನ್ನು ಹರಿಸಬೇಕು ಎಂದರು.

ಸಾಧನೆಗಳ ಬಗ್ಗೆ ತಿಳಿಸಬೇಕು 
ಅತಿಥಿಯಾಗಿದ್ದ ಮುಲುಂಡ್‌ ಬಂಟ್ಸ್‌ನ ಮಾಜಿ ಅಧ್ಯಕ್ಷ ಡಾ| ಸತ್ಯಪ್ರಕಾಶ್‌ ಶೆಟ್ಟಿ ಅವರು ಮಾತನಾಡಿ, ಸಮಾಜದ ಮಕ್ಕಳಿಗೆ ನಮ್ಮ ಹಿರಿಯರು ಮಾಡಿದ ಸಾಧನೆಗಳ ಬಗ್ಗೆ ತಿಳಿಸಬೇಕು. ಮುಂಬಯಿಯಂತಹ ಮಹಾನಗರದಲ್ಲಿ ಅವರು ಯಾವ ರೀತಿಯಲ್ಲಿ ಸಂಘಟನೆಗಳನ್ನು ಕಟ್ಟಿ, ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅರಿತರೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬೆಳೆಯುವುದರೊಂದಿಗೆ ಇಂತಹ ಸಂಘಟನೆಗಳನ್ನು ಬೆಳೆಸುವುದರಲ್ಲಿಯೂ ಸಹಕಾರಿಯಾಗುತ್ತದೆ ಎಂದರು.

ಶಾಲೆ ಪ್ರಾರಂಭಿಸಿ
ಡಾ| ಭಾಸ್ಕರ್‌ ಶೆಟ್ಟಿ ಅವರು ಮಾತನಾಡಿ, ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಮುಂಬಯಿಯಲ್ಲಿ ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಅಸೋಸಿಯೇಶನ್‌ ಮುಖಾಂತರ ಲಕ್ಷಾಂತರ ರೂ. ಗಳನ್ನು ಶೈಕ್ಷಣಿಕ ನೆರವಿಗಾಗಿ ಹಂಚು ತ್ತಿರುವುದು ಅಭಿನಂದನೀಯವಾಗಿದೆ ಎಂದರು.

ಪುಣ್ಯದ ಕಾರ್ಯ
ಪನ್ವೆಲ್‌ ನಗರ ಸೇವಕ ಸಂತೋಷ್‌ ಜಿ. ಶೆಟ್ಟಿ ಅವರು ಮಾತನಾಡಿ, ಇಂದು ಶಿಕ್ಷಣ ಎಂಬುವುದು ವ್ಯಾಪಾರೀಕರಣವಾಗಿದೆ. ಇಂತಹ ಸಂದರ್ಭದಲ್ಲಿ ಬಡ ಮಕ್ಕಳಿಗೆ ಶಿಕ್ಷಣವನ್ನು ನೀಡುವುದು ಬಡವರ ಪಾಲಿಗೆ ಕಷ್ಟದ ಕೆಲಸವಾಗಿದೆ. ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಹಲವು ವರ್ಷಗಳಿಂದ ಇಂತಹ ಮಕ್ಕಳನ್ನು ಗುರುತಿಸಿ ಆರ್ಥಿಕ ಸಹಾಯ ನೀಡುತ್ತಿರುವುದು ಪುಣ್ಯದ ಕಾರ್ಯವಾಗಿದೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ  ಜಾಸ್ಮಿನ್‌ ಕೋ-ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಸಿಎಂಡಿ ಡಾ| ಸುರೇಂದ್ರ ವಿ. ಶೆಟ್ಟಿ, ಭಾಯಂದರ್‌ ಸಾಯಿಬಾಬಾ ಆಸ್ಪತ್ರೆಯ ಆಡಳಿತ ನಿರ್ದೇಶಕ  ಡಾ| ಅಂಬರೀಶ್‌ ಶೆಟ್ಟಿ ಅವರನ್ನು ಗೌರವಿಸಲಾಯಿತು. ಅಂತಾರಾಷ್ಟ್ರೀಯ ಕ್ರೀಡಾಪಟು ಶಿವಾನಂದ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.

ಶಿಕ್ಷಣಕ್ಕಾಗಿ ನಿರಂತರವಾಗಿ ಕೆಲಸ 
ಅಧ್ಯಕ್ಷತೆ ವಹಿಸಿ ಮಾತನಾಡಿದ ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ನ್ಯಾಯವಾದಿ ಉಪ್ಪೂರು ಶೇಖರ್‌ ಶೆಟ್ಟಿ ಅವರು, ನಾವು ಶಿಕ್ಷಣಕ್ಕಾಗಿ ನಿರಂತರವಾಗಿ ಕೆಲಸ ಮಾಡುತ್ತೇವೆ. ನಮ್ಮ ಮುಂದೆ ಅನೇಕ ಯೋಜನೆಗಳಿದ್ದು, ಇದರ ಯಶಸ್ಸಿಗೆ ಎಲ್ಲರ ಪ್ರೋತ್ಸಾಹ, ಸಹಕಾರ ಅಗತ್ಯವಾಗಿದೆ. ದಾನಿಗಳು ನಮಗೆ ನಿರಂತರ ಪ್ರೋತ್ಸಾಹವನ್ನು ನೀಡುತ್ತಾ ಬಂದಿ ದ್ದಾರೆ. ಇನ್ನು ಮುಂದೆಯೂ ಕೂಡಾ ಇದೇ ರೀತಿಯ ಸಹಕಾರವಿದೆ ಎಂದು ನಂಬುತ್ತೇವೆ. ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತಾಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದರು.

ಚಂದ್ರಾ ತಿಲಕ್‌ ಅವರು ಪ್ರಾರ್ಥನೆಗೈದರು. ಪತ್ರಕರ್ತ ದಯಾಸಾಗರ್‌ ಚೌಟ ಅವರು ಕಾರ್ಯಕ್ರಮ ನಿರ್ವಹಿಸಿದರು. ಶೈಕ್ಷಣಿಕ ಸಮಿತಿಯ ಕಾರ್ಯದರ್ಶಿ ಸರಳಾ ಬಿ. ಶೆಟ್ಟಿ ಅವರು ವಂದಿಸಿದರು. ವೇದಿಕೆಯಲ್ಲಿ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸುರೇಂದ್ರ ಕೆ. ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ವಿಶ್ವನಾಥ್‌ ಎಸ್‌. ಶೆಟ್ಟಿ, ಜತೆ ಕೋಶಾಧಿಕಾರಿ ಕರರುಣಾಕರ ಎಂ. ಶೆಟ್ಟಿ, ಜತೆ ಕೋಶಾಧಿಕಾರಿ ಶ್ಯಾಂ ಸುಂದರ್‌ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ  ಕಾರ್ಯಾಧ್ಯಕ್ಷ ವಿಶ್ವನಾಥ ವಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಜೆ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ವೈಶಾಲಿ ಕೆ. ಶೆಟ್ಟಿ, ಪತ್ರಕರ್ತ ದಯಾ ಸಾಗರ್‌ ಚೌಟ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಿಕ್ಷಣ ಸಮಿತಿಯ ಸದಸ್ಯರುಗಳಾದ ಕಾರ್ಯದರ್ಶಿ ಸರಳಾ ಬಿ. ಶೆಟ್ಟಿ, ಮಾಜಿ ಅಧ್ಯಕ್ಷ ಎನ್‌. ಸಿ. ಶೆಟ್ಟಿ, ಮಾಜಿ ಅಧ್ಯಕ್ಷ ಜಯಂತ್‌ ಕೆ. ಶೆಟ್ಟಿ, ಮುರಳಿ ಕೆ. ಶೆಟ್ಟಿ, ಶ್ರೀಧರ ಕೆ. ಶೆಟ್ಟಿ, ವಿನೋದಾ ಜೆ. ಶೆಟ್ಟಿ, , ಶೈಲಜಾ ಎ. ಶೆಟ್ಟಿ, ಸುಶೀಲಾ ಸಿ. ಶೆಟ್ಟಿ, ಆಶಾ ಎಸ್‌. ಶೆಟ್ಟಿ, ಶ್ಯಾಮಲಾ ಎಸ್‌. ಶೆಟ್ಟಿ, ಲತಾ ಜಿ. ಶೆಟ್ಟಿ, ಹಾಗೂ ಅಸೋಸಿಯೇಶನ್‌ನ ಪದಾಧಿಕಾರಿಗಳ ಮಾರ್ಗದರ್ಶನ, ಸಹಕಾರದೊಂದಿಗೆ  ಕಾರ್ಯಕ್ರಮವು ಜರಗಿತು.  

ಶಿಕ್ಷಣಕ್ಕಾಗಿ ಮಾಡುವ ಯಾವುದೇ ಕಾರ್ಯಗಳಿಗೂ ನಾನು ಸದಾ ಪ್ರೋತ್ಸಾಹನೀಡುತ್ತೇನೆ. ಬೋಂಬೇ ಬಂಟ್ಸ್‌ ಅಸೋಸಿಯೇಶನ್‌ ಮಾಡುತ್ತಿರುವ ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಂಡಾಗ ಸಂತೋಷವಾಗುತ್ತಿದೆ. ಸಮಾಜಪರ ಕಾರ್ಯಗಳಿಗೆ ನನ್ನ ಸಹಕಾರ ಸದಾಯಿದೆ. ನಿಮ್ಮ ಶೈಕ್ಷಣಿಕ ಸೇವೆ ಇದೇ ರೀತಿಯಲ್ಲಿ ಮುಂದುವರಿಯಲಿ 
– ಡಾ| ಸುರೇಂದ್ರ ವಿ. ಶೆಟ್ಟಿ (ಸಮ್ಮಾನಿತರು)

ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರಗಳನ್ನು ಕಲಿಯಬೇಕು. ನಮ್ಮ ಒಳ್ಳೆಯ ಗುಣದಿಂದ ದೊರೆತ ಹೆಸರೇ ನಮ್ಮಲ್ಲಿ ಕೊನೆಯವರೆಗೂ ಉಳಿಯುತ್ತದೆ. ಸಂಬಂಧ ಹಾಗೂ ಸಂಪತ್ತು ಕ್ಷಣಿಕವಾಗಿರುತ್ತದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶೈಕ್ಷಣಿಕ ನೆರವು ನೀಡುವುದು ಬಹಳ ಉಳ್ಳೆಯ ಸಂಸ್ಕೃತಿಯಾಗಿದೆ 
– ಡಾ| ಅಂಬರೀಶ್‌ ಶೆಟ್ಟಿ  (ಸಮ್ಮಾನಿತರು)

ಕಳೆದ 25 ವರ್ಷಗಳಿಂದ ನಿರಂತರವಾಗಿ ಆರ್ಥಿಕವಾಗಿ ಹಿಂದುಳಿದ ಸಮಾಜದ ಮಕ್ಕಳಿಗೆ ಶೈಕ್ಷಣಿಕ ನೆರವನ್ನು ನೀಡುತ್ತಿದ್ದೇವೆ. ನಮ್ಮ ಮಾಜಿ ಅಧ್ಯಕ್ಷರುಗಳು ಈ ನಿಟ್ಟಿನಲ್ಲಿ ಸಂಪೂರ್ಣವಾಗಿ ಸಹಕರಿಸುತ್ತಿದ್ದಾರೆ. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾ ದಾನಿಗಳಿಗೂ ಕೃತಜ್ಞತೆಗಳು 
-ನ್ಯಾಯವಾದಿ ಸುಭಾಶ್‌ ಬಿ. ಶೆಟ್ಟಿ  (ಕಾರ್ಯಾಧ್ಯಕ್ಷರು : ಸಂಸ್ಥೆಯ ಶಿಕ್ಷಣ ಸಮಿತಿ)

  ಚಿತ್ರ-ವರದಿ : ಸುಭಾಷ್‌ ಶಿರಿಯಾ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ