ಬಂಟರವಾಣಿ ಪ್ರತಿಭಾ ಸ್ಪರ್ಧೆ, ರಾತ್ರಿ ಶಾಲೆಗಳ ವಾರ್ಷಿಕೋತ್ಸವ

Team Udayavani, Feb 7, 2018, 4:15 PM IST

ಮುಂಬಯಿ: ಬಂಟರ ಸಂಘದ ಮುಖವಾಣಿ ಹಾಗೂ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಸಂಘದ ಸಮಿತಿಗಳಲ್ಲಿ ಪ್ರಮುಖ ಸ್ಥಾನದಲ್ಲಿದ್ದು, ಎರಡೂ ಸಮಿತಿಗಳ ಕೊಡುಗೆ ಅಪಾರವಾಗಿದೆ. ಬಂಟರವಾಣಿಯು ಸಂಘದ ಕಾರ್ಯಚಟುವಟಿಕೆಗಳ ಹಾಗೂ ಸಾಹಿತ್ಯ, ಕಲೆ-ಸಂಸ್ಕೃತಿಯ ಕೈಪಿಡಿಯಾಗಿದೆ ಎಂದು ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ನುಡಿದರು.

ಫೆ. 3 ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಬಂಟರವಾಣಿ ಹಾಗೂ ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಜಂಟಿ ಆಯೋಜನೆಯಲ್ಲಿ ಜರಗಿದ ಬಂಟರವಾಣಿ ಪ್ರತಿಭಾ ಸ್ಪರ್ಧೆ ಹಾಗೂ ರಾತ್ರಿಶಾಲೆಗಳ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಬಂಟರ ಸಂಘದ ಹೆಸರಿಂದು ವಿಶ್ವದೆತ್ತರಕ್ಕೆ ರಾರಾಜಿಸುತ್ತಿದ್ದರೆ ಅದರ  ಶ್ರೇಯಸ್ಸು ಬಂಟರವಾಣಿಗೆ ಸಲ್ಲುತ್ತದೆ. ಸುಮಾರು 41 ವರ್ಷಗಳಿಂದ ಬಂಟರವಾಣಿಯು ಸಂಘದ ಕಾರ್ಯಚಟುವಟಿಕೆಗಳನ್ನು ಬಂಟ ಸಮುದಾಯಕ್ಕೆ ತಲುಪಿಸುವಲ್ಲಿ ವಿಶೇಷ ಪಾತ್ರ ವಹಿಸುತ್ತಾ ಬಂದಿದೆ. ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಬಂಟ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಹಲವಾರು ವರ್ಷಗಳಿಂದ ಸಹಾಯಧನ ನೀಡುತ್ತಾ ಬಂದಿರುವ ಜೊತೆಗೆ ಬಂಟ ಸಮಾಜದಲ್ಲಿ ಆರ್ಥಿಕವಾಗಿ ತೊಂದರೆಯಲ್ಲಿರುವ ವಿಧವೆಯರಿಗೆ, ವಿಕಲ ಚೇತನರಿಗೆ, ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ಕೋಟ್ಯಾಂತರ ರೂ.ಗಳನ್ನು ವಿತರಿಸುವಲ್ಲಿ ಹೆಚ್ಚಿನ ಪರಿಶ್ರಮಪಟ್ಟಿದೆ. ಅದಕ್ಕಾಗಿ ಈ ಎರಡೂ ಸಮಿತಿಗಳು ಅಭಿನಂದನಾರ್ಹರು ಎಂದರು.

ಹಿಂದೆ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ಸದಸ್ಯತ್ವ ಸಂಗ್ರಹ ನೋಂದಣಿಯಲ್ಲಿ ಚಿನ್ನದ ಹುಡುಗನೆಂದೇ ಖ್ಯಾತಿ ಹೊಂದಿದ್ದರೆ, ಈಗ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮದ ಮೂಲಕ ಐತಿಹಾಸಿಕ ದಾಖಲೆಯನ್ನು ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ ಅವರು ಹೊಂದಿದ್ದಾರೆ. ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ನೂತನ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ ಅವರು ಸಂಘದ ಹಲವಾರು ಹುದ್ದೆಗಳನ್ನು ಅಲಂಕರಿಸಿ ಅನುಭವವನ್ನು ಹೊಂದಿದ್ದಾರೆ. ಸಂಘದ ಕೀರ್ತಿಯನ್ನು ಹೆಚ್ಚಿಸಿದ ಐಕಳ ಹರೀಶ್‌ ಶೆಟ್ಟಿ ಅವರು ಸಂಘದಲ್ಲಿ  ನೂತನ ಯೋಜನೆಗಳನ್ನು ತರುವಲ್ಲಿ ಬಹಳಷ್ಟು ಶ್ರಮಿಸಿದ್ದಾರೆ. ಬಂಟರವಾಣಿಯಲ್ಲಿ ಪ್ರಕಟವಾಗುವ ಸಂಘದ ಕಾರ್ಯಕ್ರಮಗಳನ್ನು ಪ್ರತಿಯೊಬ್ಬರು ಓದಲು ಕಾತರದಿಂದ ಕಾಯುತ್ತಿರುತ್ತಾರೆ. ಪತ್ರಿಕೆಯ ಸಂಪಾದಕ ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು, ಗೌರವ ಸಂಪಾದಕ ಅಶೋಕ್‌ ಪಕ್ಕಳ ಅವರ ಪರಿಶ್ರಮ ಅಭಿನಂದನೀಯವಾಗಿದೆ ಎಂದು ನುಡಿದು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಶುಭ ಹಾರೈಸಿದರು.

ಗೌರವ ಅತಿಥಿಯಾಗಿ ಪಾಲ್ಗೊಂಡ ರೇಡಿಯೆಂಟ್‌ ಮೆಟಲ್ಸ್‌ ಆ್ಯಂಡ್‌ ಅಬಾಯ್ಸ ಪ್ರೈವೇಟ್‌ ಲಿಮಿಟೆಡ್‌ ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ನ್ಯಾಯವಾದಿ ಬಿ. ಬಿ. ಶೆಟ್ಟಿ ಮಾತನಾಡಿ, ಬಂಟರವಾಣಿ ಪತ್ರಿಕೆ ವೈವಿಧ್ಯಮಯವಾಗಿ ಅತ್ಯಂತ ಸುಂದರವಾಗಿ ಹೊರಬರುತ್ತಿದ್ದು, ಪ್ರತಿ ತಿಂಗಳು ಅದನ್ನು ಓದಿ ಮೆಚ್ಚಿಕೊಂಡಿರುವೆ. ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ ಅವರಿಗೆ ನೀಡಿದ ಯಾವುದೇ ಕಾರ್ಯವನ್ನು ಅವರು ಉತ್ತಮವಾಗಿ ನಿರ್ವಹಿಸುತ್ತಾರೆ. ಅವರ ಕಾರ್ಯದಕ್ಷತೆ, ಕಾರ್ಯಕ್ಷಮತೆ ಮೆಚ್ಚುವಂಥದ್ದಾಗಿದೆ ಎಂದರು.

ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ ಮಾತನಾಡಿ, ಪ್ರತಿಭಾ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಉತ್ಸಾಹವನ್ನು ಕಂಡು ಸಂತಸವಾಯಿತು. ನನ್ನ ಹಿಂದಿನ ಶಾಲಾ ದಿನಗಳ ನೆನಪಾಗುತ್ತಿದೆ. ಇಂದು ಪ್ರಾದೇಶಿಕ ಸಮಿತಿಗಳ ಮಹಿಳಾ ವಿಭಾಗದವರು ಪ್ರಸ್ತುತಪಡಿಸಿದ ಸಮೂಹಗಾನ ಉತ್ತಮವಾಗಿ ಮೂಡಿ ಬಂದಿದೆ ಎಂದು ನುಡಿದು ಅಭಿನಂದನೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾ ರಾಮ ಬಿ. ಶೆಟ್ಟಿ ಅವರು ಪ್ರತೀ ವರ್ಷ ನೀಡುತ್ತಿರುವ ಶಾಂತಾರಾಮ ಬಿ. ಶೆಟ್ಟಿ ವಾರ್ಷಿಕ ಸಾಹಿತ್ಯ ಪ್ರಶಸ್ತಿ-2018 ನಗದು ಸಹಿತ ಸಾಹಿತಿ, ಕವಿ, ಬಂಟರವಾಣಿಯ ಮಾಜಿ ಗೌರವ ಪ್ರಧಾನ ಸಂಪಾದಕ ರತ್ನಾಕರ ಆರ್‌. ಶೆಟ್ಟಿ ಮತ್ತು ಶಾಂತಾ ಆರ್‌. ಶೆಟ್ಟಿ ದಂಪತಿಗೆ ಗಣ್ಯರು ಪ್ರದಾನಿಸಿದರು. ಬಂಟರವಾಣಿಯ ಸಂಪಾದಕ ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು ಅವರು ಸಮ್ಮಾನ ಪತ್ರ ವಾಚಿಸಿದರು. ಪ್ರತಿಭಾ ಸ್ಪರ್ಧೆಯನ್ನು ನಂದಳಿಕೆ ನಾರಾಯಣ ಶೆಟ್ಟಿ ನಿರ್ವಹಿಸಿದರು.

ಸಂಘದ ಸಂಚಾಲಕತ್ವದಲ್ಲಿರುವ ನಿತ್ಯಾನಂದ ಧರ್ಮಾರ್ಥ ರಾತ್ರಿಶಾಲೆಯ ಮುಖ್ಯ ಶಿಕ್ಷಕ ಅಮರೀಶ್‌ ಪಾಟೀಲ್‌ ಅವರನ್ನು ಸಮ್ಮಾನಿಸಲಾಯಿತು. ಬಂಟರವಾಣಿ ಸಂಪಾದಕ ಮಂಡಳಿಯ ಸದಸ್ಯ ಕರ್ನೂರು ಮೋಹನ್‌ ರೈ ಸಭಾ ಕಾರ್ಯಕ್ರಮ ನಿರ್ವಹಿಸಿದರು.  ವೇದಿಕೆಯಲ್ಲಿ ಬಂಟರವಾಣಿ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ  ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್‌ ಭೋಜ ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್‌ ಎಸ್‌. ಶೆಟ್ಟಿ, ಬಂಟರವಾಣಿಯ ಗೌರವ ಸಂಪಾದಕ ಅಶೋಕ್‌ ಪಕ್ಕಳ, ಸಂಪಾದಕ ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಉಪ ಕಾರ್ಯಾಧ್ಯಕ್ಷ ಸುಬ್ಬಯ್ಯ ಎ. ಶೆಟ್ಟಿ, ಕಾರ್ಯದರ್ಶಿ ಖಾಂದೇಶ್‌ ಭಾಸ್ಕರ್‌ ವೈ. ಶೆಟ್ಟಿ, ಕೋಶಾಧಿಕಾರಿ ಸುರೇಶ್‌ ಬಿ. ಶೆಟ್ಟಿ ಮರಾಠಾ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್‌ ವಿ. ಶೆಟ್ಟಿ, ಶಾಲಾ ಮೇಲ್ವಿಚಾರಕ ಸಂಜೀವ ಎಂ. ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕ ಅಮರೀಶ್‌ ಪಾಟೀಲ್‌ ಅವರು ವೇದಿಕೆಯಲ್ಲಿ ಉಪಸ್ಥಿತಿದ್ದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿ ಶುಭಹಾರೈಸಿದರು. 

ಬಂಟರವಾಣಿ ಪತ್ರಿಕೆ ವಿಶ್ವಮಟ್ಟದಲ್ಲಿ ಬಂಟರು ಮೆಚ್ಚಿದ ಪತ್ರಿಕೆಯಾಗಿದೆ. ಸಂಘದ ಕಾರ್ಯಚಟುವಟಿಕೆಗಳನ್ನು  ಬಂಟರ ಮನೆ-ಮನಗಳಿಗೆ ಮುಟ್ಟಿಸುವ ಪ್ರಯತ್ನವನ್ನು ಪತ್ರಿಕೆ ಮಾಡುತ್ತಿದೆ. ಮಿತ್ರರಾಗಿರುವ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ ಅವರು ಒಂದುಗೂಡಿ ಆಯೋಜಿಸಿರುವ ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಂತೋಷವಾಗುತ್ತಿದೆ.
-ಐಕಳ ಹರೀಶ್‌ ಶೆಟ್ಟಿ, ಅಧ್ಯಕ್ಷರು, ವಿಶ್ವ ಬಂಟರ ಸಂಘಗಳ ಒಕ್ಕೂಟ

ರಾತ್ರಿ-ಶಾಲೆಗಳಲ್ಲಿ ಕಲಿತು ಭವಿಷ್ಯದಲ್ಲಿ ಉನ್ನತಿಗೇರಿದ ಬಂಟರು  ಹಲವರಿದ್ದಾರೆ. ಹೆಸರಾಂತ ಉದ್ಯಮಿಯಾಗಿರುವ ಕೆ. ಡಿ. ಶೆಟ್ಟಿ ಅವರಂತಹ ಮಹಾನ್‌ ವ್ಯಕ್ತಿ ರಾತ್ರಿಶಾಲೆಯಲ್ಲಿ ಕಲಿತು ಮುಂದೆ ಬಂದವರು. ಅವರ ಪ್ರೇರಣೆ ನಮ್ಮ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ಮಕ್ಕಳು ಹೆತ್ತವರು, ಗುರುಗಳ ಆಶೀರ್ವಾದ, ಪರಿಶ್ರಮದಿಂದ ಆದರ್ಶ ಪ್ರಜೆಗಳಾಗಿ ಬಾಳಲು ಸಾಧ್ಯವಿದೆ.
-ಕರುಣಾಕರ ಎಂ. ಶೆಟ್ಟಿ, ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕರು, ವಿ. ಕೆ. ಗ್ರೂಪ್‌ ಆಫ್‌ ಕಂಪೆನೀಸ್‌

ಬಂಟರವಾಣಿಯ ಅಭಿವೃದ್ಧಿಯಲ್ಲಿ ಕಾರ್ಯಾಧ್ಯಕ್ಷ ಶಾಂತಾರಾಮ ಶೆಟ್ಟಿ ಅವರ ಯೋಗದಾನ ಮಹತ್ವದ್ದಾಗಿದೆ. ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಸೇವೆ ಅಭಿನಂದನೀಯ. ಮಕ್ಕಳು ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತಿ ಹೊಂದಲು ಹಾಗೂ ದೇಶದ ಉತ್ತಮ ಪ್ರಜೆಗಳಾಗಿ ಮೂಡಿ ಬರಲಿ.
 -ಕರ್ನಿರೆ ವಿಶ್ವನಾಥ ಶೆಟ್ಟಿ, ವಿಶ್ವಸ್ತರು, ಬಂಟರ ಸಂಘ ಮುಂಬಯಿ

ಚಿತ್ರ-ವರದಿ:ಪ್ರೇಮನಾಥ್‌ ಶೆಟ್ಟಿ  ಮುಂಡ್ಕೂರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ