ಸಾಹಿತ್ಯ ಬಳಗಕ್ಕೆ ಮಕ್ಕಳ ಧ್ವನಿ ಅರ್ಥವಾಗಿದೆ: ಶ್ರೀಕೃಷ್ಣ ಉಡುಪ

ಸಾಹಿತ್ಯ ಬಳಗ ಮುಂಬಯಿ: ವಾಶಿಯಲ್ಲಿ ಮಕ್ಕಳ ಪ್ರಥಮ ಸಮ್ಮೇಳನ

Team Udayavani, Aug 19, 2019, 5:12 PM IST

ಮುಂಬಯಿ, ಆ. 18: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಪ್ರಸ್ತುತ ರಜತ ಮಹೋತ್ಸವದ ಹೊಸ್ತಿಲಲ್ಲಿರುವ ಸಾಹಿತ್ಯ ಬಳಗ ಮುಂಬಯಿ ಸಂಸ್ಥೆಯ ವತಿಯಿಂದ ನವಿಮುಂಬಯಿ ಕನ್ನಡ ಸಂಘ ಇದರ ಸಂಯುಕ್ತ ಆಶ್ರಯದಲ್ಲಿ ಆ. 17ರಂದು ಅಪರಾಹ್ನ ವಾಶಿಯ ನವಿಮುಂಬಯಿ ಕನ್ನಡ ಸಂಘದ ಸಭಾಗೃಹದಲ್ಲಿ ಮಕ್ಕಳ ಪ್ರಥಮ ಸಮ್ಮೇಳನ ನಡೆಯಿತು.

ಜೀವಿಕಾ ವಿ. ಶೆಟ್ಟಿ ಪೇತ್ರಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಮ್ಮೆಳನವನ್ನು ಮಾ| ಶ್ರೀಕೃಷ್ಣ ಉಡುಪ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

‘ಕವಿತಾ ವಾಚನ ಹಿರಿಯರ ಕವಿತೆಗೆ ಕಿರಿಯರ ಸ್ಪಂದನ’ ವಿಚಾರಿತ ಮೊದಲ ಗೋಷ್ಠಿಯಲ್ಲಿ ವಿದಿಶ ರಾವ್‌, ಭುವಿ ಭಟ್, ಧನುಷ್‌ ಆರ್‌. ಶೆಟ್ಟಿ, ಪೃಥ್ವಿಕಾ ಆರ್‌. ಶೆಟ್ಟಿ ಭಾಗವಹಿಸಿ ತಮ್ಮ ವಿಚಾರ ಮಂಡಿಸಿದರು.

ಜ್ಞಾನವಿ ಪೋತಿ ಅವರು ಗೋಷ್ಠಿಯನ್ನು ನಿರ್ವಹಿಸಿದರು.

ಉದ್ಘಾಟಿಸಿ ಮಾತನಾಡಿದ ಶ್ರೀಕೃಷ್ಣ ಉಡುಪ ಅವರು, ಮಕ್ಕಳಿಂದ ಮಕ್ಕಳಿಗಾಗಿ ಜರಗುವ ಇಂದಿನ ಕಾರ್ಯಕ್ರಮ ಅರ್ಥಪೂರ್ಣವಾದದ್ದು. ನಾವೆಲ್ಲರೂ ಹೂವು ಮಾರುವವರಾಗಬೇಕು, ಕಟ್ಟಿಗೆ ಕಡಿಯುವವರಾಗಬಾರದು. ಪ್ರಾಯಶ: ಸಾಹಿತ್ಯ ಬಳಗಕ್ಕೆ ನಮ್ಮ ಅಂತರಂಗದ ಧ್ವನಿ ಅರ್ಥವಾಗಿದೆ ಎಂದರು.

ದ್ವಿತೀಯ ಗೋಷ್ಠಿಯಲ್ಲಿ ಸಾನ್ವಿ ಶೆಟ್ಟಿ ಅವರು ‘ಶಾಲಾ ಬ್ಯಾಗ್‌ ಹೊತ್ತು ಸೋತೆ’, ನಿಧಿ ಪೂಜಾರಿ ಅವರು ‘ಕಡಿಮೆ ಅಂಕ ಪಡೆದರೆ ಮನೆಯಲ್ಲಿ ಕಿರಿಕಿರಿ’, ಸುನಿಧಿ ಶೆಟ್ಟಿ ಅವರು ‘ಟ್ಯೂಶನ್‌ ಕ್ಲಾಸ್‌ನಿಂದ ದರೋಡೆ’, ಅಪ್ರಮೇಯ ಭಟ್ ಅವರು ‘ಶಾಲಾ ಕೆಲಸ ಮತ್ತು ಮನೆ ಕೆಲಸ ನಡುವೆ ಖಾಸಾಗಿ ಕೆಲಸಕ್ಕೆ ಎಡೆ ಇಲ್ಲ’, ಪ್ರತೀಕ್ಷಾ ಭಟ್ ಅವರು ‘ನಮಗೆ ತಿಳಿಯದ ಯೋಜನಾ ಕೆಲಸಗಳು ಯಾರು ಮಾಡಬೇಕು’ ವಿಷಯಗಳಲ್ಲಿ ತಮ್ಮ ವಿಚಾರ ಮಂಡಿಸಿದರು. ಅದ್ವಿತಾ ಸಾಗರ್‌ ಗೋಷ್ಠಿ ನಡೆಸಿದರು.

ಬಳಿಕ ನಡೆಸಲ್ಪಟ್ಟ ‘ಹಿರಿಯರೊಡನೆ ಸಂವಾದ’ದಲ್ಲಿ ರಂಗನಟ ಡಾ| ಸುರೇಂದ್ರ ಕುಮಾರ್‌ ಹೆಗ್ಡೆ, ಸಮಾಜ ಸೇವಕ ಆರ್‌. ಎಲ್. ಸುಧೀರ್‌ ಶೆಟ್ಟಿ, ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಜ್ಯೋತಿ ಪ್ರಸಾದ್‌, ಡಾ| ವಿಜಯಾ ಎಂ. ಶೆಟ್ಟಿ, ಎನ್‌.ಆರ್‌. ರಾವ್‌ ಅವರು ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಸಾತ್ವಿಕ್‌ ರೈ, ನೇಹಾ ಹೆಗ್ಡೆ, ರಾಘವೇಂದ್ರ ಸಾಲ್ಯಾನ್‌, ಶುಭಾಶ್ರೀ ಭಟ್, ನೇಹಾ ನಾಯಕ್‌, ಸಾನ್ವಿ ಶೆಟ್ಟಿ, ಚಿರಾಯು ಪ್ರಕಾಶ್‌ ಸಂವಾದದಲ್ಲಿ ಪಾಲ್ಗೊಂಡಿದ್ದು, ದೀಪ್ಯಾ ಶಿವತ್ತಾಯ ಸಂವಾದ ನಡೆಸಿದರು.

ಸಾಹಿತ್ಯ ಬಳಗದ ಅಧ್ಯಕ್ಷ ಎಚ್. ಬಿ. ಎಲ್. ರಾವ್‌, ಎಸ್‌. ಕೆ. ಸುಂದರ್‌, ಜಗದೀಶ್‌ ರೈ, ಸಹನಾ ಭಾರದ್ವಾಜ್‌, ಸಾ. ದಯಾ, ನವಿಮುಂಬಯಿ ಕನ್ನಡ ಸಂಘದ ಬಿ. ಎಚ್. ಕಟ್ಟಿ, ಸುಜಾತಾ ರಾವ್‌ ಮತ್ತಿತರರು ಉಪಸ್ಥಿತರಿದ್ದು ಸಮ್ಮೇಳನದ ಯಶಸ್ಸಿಗೆ ಸಹಕರಿಸಿದರು. ಸಾನ್ವಿ ರೈ ಮತ್ತು ಶೈಲಜಾ ಶೆಟ್ಟಿ ಯಕ್ಷಗಾನ ಶೈಲಿಯಲ್ಲಿ ಗಣಪತಿ ನಮನಗೈದರು. ಬಡಗುತಿಟ್ಟು ಮತ್ತು ತೆಂಕುತಿಟ್ಟು ಶೈಲಿಯಲ್ಲಿ ಯಕ್ಷಗಾನ ಪ್ರವೇಶ ಸಮ್ಮೇಳನಕ್ಕೆ ಚಾಲನೆ ನೀಡಿದರು. ಕೃತಿ ಚಡಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯಕ್ಷಗಾನ ಭಾಗವತಿಕೆ, ತಬಲಾ ವಾದನ, ಸುಗಮ ಸಂಗೀತ, ನೃತ್ಯ ವೈಭವ, ಏಕಪಾತ್ರಾಭಿನಯ, ಸಮೂಹ ಗೀತೆ, ಜಾನಪದ ನೃತ್ಯಗಳನ್ನು ಮಕ್ಕಳು ಪ್ರದರ್ಶಿಸಿದರು. ನಾನು ಏನು ಆಗಬೇಕು ಎಂದು ಬಯಸುತ್ತೇನೆ ಎಂದು ಸಭೆಯಲ್ಲಿದ್ದ ಮಕ್ಕಳು ಪ್ರತಿಕ್ರಿಯಿಸಿದರು. ನವ್ಯಶ್ರೀ ಭಟ್ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

ಚಿತ್ರ-ವರದಿ : ರೊನಿಡಾ ಮುಂಬಯಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ