ಅಮಾಯಕರಿಗೆ ಹಣ ಮರಳಿಸಿ ಕೊಟ್ಟ ನಗರ ಸೇವಕ ಶ್ರೀಧರ್ ಪೂಜಾರಿ
Team Udayavani, May 6, 2021, 12:52 PM IST
ಲೋನವಾಲ: ಕೋವಿಡ್ ಸಾಂಕ್ರಾಮಿಕ ಕಾಯಿಲೆಯಿಂದ ಸೋಂಕಿತ ರೋಗಿಗಳ ಸಿ.ಟಿ. ಸ್ಕ್ಯಾನ್ ಪರೀಕ್ಷೆಯನ್ನು ಲೋನವಾಲ ಮಹಾನಗರ ಪಾಲಿಕೆಯ ಕೌನ್ಸಿಲ್‌ನ ಅಧೀನದಲ್ಲಿರುವ ಲೋನಾವಾಲ ರೋಗನಿರ್ಣಯ ಕೇಂದ್ರದಲ್ಲಿ ನಡೆಸ ಲಾಗುತ್ತಿದ್ದು, ಸಿ.ಟಿ. ಸ್ಕ್ಯಾನ್‌ಗೆ ಸರಕಾರ ಕನಿಷ್ಠ ಮೊತ್ತವನ್ನು ನಿಗದಿಪಡಿಸಿ ಅದಕ್ಕೆ ಅನುಗುಣವಾಗಿ ಆದೇಶ ಹೊರಡಿಸಿತ್ತು.
ಆದರೆ ಈ ಆದೇಶ ದಿಕ್ಕರಿಸಿ ಲೋನವಾಲ ಡಯಾಗ್ನೊàಸ್ಟಿಕ್ ಸೆಂಟರ್ ಸಿ.ಟಿ. ಸ್ಕ್ಯಾನ್ ಪರೀಕ್ಷೆಯ ಸೋಗಿನಲ್ಲಿ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಸುಲಿಗೆ ಮಾಡುವ ಮೂಲಕ ರೋಗಿಗಗಳಿಗೆ ವಂಚನೆ ಮಾಡುತ್ತಿತ್ತು. ಅನೇಕ ರೋಗಿಗಳ ದೂರುಗಳನ್ನು ಪಡೆದ ಲೋನವಾಲ ಬಿಜೆಪಿ ಧುರೀಣ, ಲೋನವಾಲ ನಗರ ಪರಿಷತ್‌ನ ಉಪಾಧ್ಯಕ್ಷ ನಿಟ್ಟೆ ನಡಿಮನೆ ಶ್ರೀಧರ್ ಎಸ್. ಪೂಜಾರಿ ವಂಚನೆ ಮಾಡಿದವರನ್ನು ತರಾಟೆಗೆ ತೆಗೆದುಕೊಂಡ ಅಮಾಯಕರಿಗೆ ಹೆಚ್ಚುವರಿ ಮೊತ್ತ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೂರುಗಳನ್ನು ಸ್ವೀಕರಿಸಿದ ಶ್ರೀಧರ್ ಪೂಜಾರಿ ಅವರು ಲೋನವಾಲ ಡಯಾಗ್ನೊàಸ್ಟಿಕ್ ಸೆಂಟರ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸುಮಾರು 100 ಮಂದಿ ಅಮಾಯಕರ ಸುಮಾರು 3 ಲಕ್ಷ ರೂ. ಗಳ ಮೊತ್ತವನ್ನು ಹಿಂತಿರುಗಿಸುವಂತೆ ಮಾಡಿದ್ದಾರೆ.
ಕೋವಿಡ್ ಸಂಕಷ್ಟದ ಕಾಲದಲ್ಲಿ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿರುವ ಜನರಿಗೆ ಸಕಾಲದಲ್ಲಿ ಸೂಕ್ತ ನ್ಯಾಯ ಒದಗಿಸಿಕೊಟ್ಟ ಶ್ರೀಧರ್ ಪೂಜಾರಿ ಅವರಿಗೆ ಹಲವಾರು ಮಂದಿ ಕೃತಜ್ಞತೆ ಸಲ್ಲಿಸಿದ್ದಾರೆ.