ತಾಳಮದ್ದಳೆ ಅಭಿಯಾನದಿಂದ ಸಾಂಸ್ಕೃತಿಕ ಜಾಗೃತಿ: ಶೇಖರ ಶೆಟ್ಟಿ

Team Udayavani, Sep 1, 2019, 1:56 PM IST

ಥಾಣೆ, ಆ. 31: ಮುಂಬಯಿ ಮಹಾನಗರದಲ್ಲಿ ಯಕ್ಷಗಾನಕ್ಕೆ ವಿಶೇಷವಾದ ಪ್ರೋತ್ಸಾಹವಿದೆ. ಅದರ ಇನ್ನೊಂದು ಪ್ರಕಾರವಾದ ತಾಳಮದ್ದಳೆಯನ್ನು ಒಂದು ಅಭಿಯಾನದ ರೂಪದಲ್ಲಿ ಅಜೆಕಾರು ಕಲಾಭಿಮಾನಿ ಬಳಗವು ಅಜೆಕಾರು ಬಾಲಕೃಷ್ಣ ಶೆಟ್ಟಿಯವರ ನೇತೃತ್ವದಲ್ಲಿ ಹೆಚ್ಚಿನ ಕಾಳಜಿ ವಹಿಸಿ ನಡೆಸುತ್ತಿದೆ. ಇದು ಮಹಾನಗರದ ವಿವಿಧ ಭಾಗಗಳಲ್ಲಿ ಸಾಂಸ್ಕೃತಿಕ ಜಾಗೃತಿಗೆ ಕಾರಣವಾಗಿದೆ. ಇದಕ್ಕಾಗಿ ಅಭಿನಂದನೆಗಳು ಎಂದು ಯಕ್ಷಮಾನಸ ಮುಂಬಯಿ ಅಧ್ಯಕ್ಷ ಶೇಖರ ಆರ್‌. ಶೆಟ್ಟಿ ಹೇಳಿದ್ದಾರೆ.

ಕಲ್ವಾ ಎನೆಕ್ಸ್‌ ಗಾರ್ಡನ್‌ನ ಹೊಟೇಲ್ ಸಾಯಿ ಸಾಗರ್‌ನಲ್ಲಿ ಆ. 25ರಂದು ಜರಗಿದ ಅಜೆಕಾರು ಕಲಾಭಿಮಾನಿ ಬಳಗದ 18ನೇ ವರ್ಷದ ತಾಳಮದ್ದಳೆ ಸರಣಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉದ್ಯಮಿ ಉದಯಕುಮಾರ್‌ ಶೆಟ್ಟಿ ದೊಡ್ಡೆರಂಗಡಿ ಜ್ಯೋತಿ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಯಕ್ಷಗಾನವು ನಮ್ಮ ಮಣ್ಣಿನ ಕಲೆ. ಅದನ್ನು ಪ್ರೋತ್ಸಾಹಿಸಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಗಾಣಿಗ ಸಮಾಜಮುಂಬಯಿ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಗಾಣಿಗ ಅವರು ಮಾತನಾಡಿ, ನಾಟಕ – ಯಕ್ಷಗಾನಗಳು ಕರಾವಳಿ ಕರ್ನಾಟಕದ ಜನಜೀವನದಲ್ಲಿ ಹಾಸುಹೊಕ್ಕಾಗಿ ಬಂದಿವೆ. ಆ ಭಾಗದ ಜನರು ಮುಂಬಯಿ ನಗರದಲ್ಲಿ ದೊಡ್ಡ ಸಂಖ್ಯೆಯಲ್ಲಿರುವುದರಿಂದ ಇಲ್ಲಿಯೂ ಈ ಕಲಾ ಪ್ರಕಾರಗಳು ಜನಪ್ರಿಯತೆ ಗಳಿಸಿವೆ. ಮುಂದಿನ ತಲೆಮಾರಿಗೂ ಅವುಗಳನ್ನು ತಲುಪಿಸುವ ಪ್ರಯತ್ನ ಆಗಬೇಕಿದೆ ಎಂದರು.

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಹಾಗೂ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಯಕ್ಷಗಾನ ಅರ್ಥಧಾರಿ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಅವರು ಮಾತನಾಡಿ, ಅಜೆಕಾರು ಕಲಾಭಿಮಾನಿ ಬಳಗ ಕಳೆದ ಎರಡು ದಶಕಗಳಿಂದ ಮುಂಬಯಿಯಲ್ಲಿ ಯಕ್ಷಗಾನೀಯವಾದ ಚಟುವಟಿಕೆಗಳಿಂದ ಎಲ್ಲ ಸ್ತರದ ಜನರ ಮನ ಗೆದ್ದಿದೆ. ಸರಣಿ ತಾಳಮದ್ದಳೆಯ ಮೂಲಕ ಆ ಕಲಾಪ್ರಕಾರಕ್ಕೆ ವಿಶೇಷ ಜನಾದರಣೆ ಲಭಿಸುವಂತೆ ಮಾಡಿದೆ. ತಾಳಮದ್ದಳೆ ಕ್ಷೇತ್ರದ ಘಟಾನುಘಟಿ ಕಲಾವಿದರನ್ನು ಮುಂಬಯಿಗರಿಗೆ ಪರಿಚಯಿಸಿದ ಕೀರ್ತಿ ಅಜೆಕಾರು ಬಾಲಕೃಷ್ಣ ಶೆಟ್ಟಿಯವರಿಗೆ ಸಲ್ಲುತ್ತದೆ. ಅದರಲ್ಲೂ ಈ ಬಾರಿಯ ಸರಣಿಯಲ್ಲಿ ಎಡೆಬಿಡದೆ 16 ತಾಳಮದ್ದಳೆಗಳನ್ನು ಏರ್ಪಡಿಸಿ ಅವರು ದಾಖಲೆ ನಿರ್ಮಿಸಿದ್ದಾರೆ ಎಂದು ನುಡಿದರು.

ಉದ್ಯಮಿ ಹಾಗೂ ಕಲಾ ಪೋಷಕ ಪೊಲ್ಯ ಉಮೇಶ್‌ ಶೆಟ್ಟಿ ಅವರು ಮಾತನಾಡಿ, ಬಳಗದ ಸಾಧನೆಯನ್ನು ಪ್ರಶಂಸಿಸಿ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಯಕ್ಷಗಾನ ಕಲಾವಿದರು ದೊಡ್ಡ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಮುಂಬಯಿಯಲ್ಲಿ ವೇದಿಕೆ ಕಲ್ಪಿಸಿಕೊಟ್ಟ ಸಂಘಟಕರು ಅಭಿನಂದನಾರ್ಹರು. ಯಕ್ಷಗಾನಕ್ಕಿದು ಸುಗ್ಗಿಯ ಕಾಲ ಎಂದರು.

ಮುಲುಂಡ್‌ ಬಂಟ್ಸ್‌ನ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದ ಚೌಟ ಅವರು ಮಾತನಾಡಿ, ನಗರದಲ್ಲಿ ಯಕ್ಷಗಾನವನ್ನು ಪ್ರೀತಿಸುವವರು ಬಹು ಸಂಖ್ಯೆಯಲ್ಲಿದ್ದಾರೆ. ಆದರೆ ಭಾಷಾ ಸಮಸ್ಯೆಯಿಂದಾಗಿ ಎಳೆಯರಿಗೆ ತಾಳಮದ್ದಳೆಯ ಮಹತ್ವ ತಿಳಿದಿಲ್ಲ. ಅಮೂಲ್ಯವಾದ ಜೀವನ ಸಂದೇಶ ನೀಡುವ ಈ ಕಲಾಪ್ರಕಾರ ತುಳು ಭಾಷೆಯಲ್ಲಿ ಪ್ರಸ್ತುತಗೊಂಡರೆ ಉತ್ತಮ ಎಂದರು.

ಉದ್ಯಮಿಗಳಾದ ಶೇಖರ ಶೆಟ್ಟಿ ನಲ್ಲೂರು, ಯೋಗೇಶ್‌ ಶೆಟ್ಟಿ ಬೆಳುವಾಯಿ, ಪದ್ಮನಾಭ ಶೆಟ್ಟಿ ಇರುವೈಲು, ಜಗದೀಶ ಇರಾ ಆಚೆಬೈಲು ಅತಿಥಿಗಳಾಗಿ ಉಪಸ್ಥಿತರಿದ್ದರು. ತಾಳಮದ್ದಳೆಯಲ್ಲಿ ಭಾಗವಹಿಸಿದ ಊರಿನ ಪ್ರಬುದ್ಧ ಕಲಾವಿದರನ್ನು ಸಭೆಯಲ್ಲಿ ಗೌರವಿಸಲಾಯಿತು. ಅಜೆಕಾರು ಕಲಾಭಿಮಾನಿ ಬಳಗದ ಮುಂಬಯಿ ಸಂಚಾಲಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಕಲಾಸಂಘಟಕ ಕರ್ನೂರು ಮೋಹನ ರೈ ಕಾರ್ಯಕ್ರಮ ನಿರೂಪಿಸಿದರು. ಕೆ. ಲಕ್ಷ್ಮೀನಾರಾಯಣ ರೈ ಹರೇಕಳ ವಂದಿಸಿದರು. ಸರಣಿಯ 16ನೇ ಕಾರ್ಯಕ್ರಮವಾಗಿ ಭೃಗು ಶಾಪ ಯಕ್ಷಗಾನ ತಾಳಮದ್ದಳೆ ಜರಗಿತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ