ಸಂಸ್ಥೆಯ ಯಶಸ್ಸಿನ ಹಿಂದೆ ಸಮರ್ಥ ನಾಯಕತ್ವ ಅಗತ್ಯ: ಸಂತೋಷ್‌ ಶೆಟ್ಟಿ

ಪುಣೆ ತುಳುಕೂಟದ 22ನೇ ವಾರ್ಷಿಕೋತ್ಸವ ಸಮಾರಂಭ

Team Udayavani, Aug 18, 2019, 1:58 PM IST

ಪುಣೆ, ಅ. 17: ಪುಣೆ ಬಂಟರ ಭವನದಲ್ಲಿ ಇಂದು ಪುಣೆ ತುಳು ಕೂಟದ ಜಾತ್ರೆಯನ್ನು ಕಂಡಾಗ ಈ ಭವನ ನಿರ್ಮಾಣಗೊಂಡ ಆಶಯ ಸಾರ್ಥಕವಾದ ಭಾವನೆಯನ್ನು ತರುತ್ತಿದೆ. ಈ ಭವನ ಕೇವಲ ಬಂಟರ ಭವನವಲ್ಲ ತುಳುನಾಡ ಭವನವಾಗಿದೆ. ಜಯ ಶೆಟ್ಟಿಯವರಿಂದ ಸ್ಥಾಪಿತಗೊಂಡ ಸಣ್ಣ ಸಂಸ್ಥೆಯೊಂದು ಇಂದು ಹೆಮ್ಮರವಾಗಿ ಬೆಳೆದಿದ್ದರೆ ಅದರ ನಂತರದ ಅಧ್ಯಕ್ಷರ ಸಮರ್ಥ ನಾಯಕತ್ವ ಹಾಗೂ ನಿಸ್ವಾರ್ಥ ಕಾರ್ಯಕರ್ತರ ಶ್ರಮವೇ ಕಾರಣ. ಇಂದು ದೇಶಕ್ಕೊಬ್ಬ ಸದೃಢ ನಾಯಕತ್ವ ನೀಡುವ ಸಮರ್ಥ ಪ್ರಧಾನಿಯಿದ್ದಂತೆ ಯಾವುದೇ ಸಂಘ ಸಂಸ್ಥೆಗಳಿಗೂ ಸಮರ್ಥ ನಾಯಕತ್ವವಿದ್ದರೆ ಮಾತ್ರ ಸಂಸ್ಥೆ ಯಶಸ್ಸಿನ ಹಾದಿಯಲ್ಲಿ ಸಾಗಲು ಸಾಧ್ಯವಿದೆ. ನನಗೆ ಪುಣೆ ತುಳುಕೂಟದಿಂದ ಇಂದು ಸಂದ ಸಮ್ಮಾನವನ್ನು ಈ ದೇಶವನ್ನು ವೀರ ಯೋಧರಿಗೆ, ಪುಣೆಯ ತುಳು-ಕನ್ನಡಿಗರಿಗೆ, ಮುಖ್ಯವಾಗಿ ಭವನದ ದಾನಿಗಳಿಗೆ ಅರ್ಪಿಸುತ್ತೇನೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಕುರ್ಕಿಲ್ ಬೆಟ್ಟು ನುಡಿದರು.

ಅವರು ಆ. 15ರಂದು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದ ಲತಾ ಸುಧೀರ್‌ ಶೆಟ್ಟಿ ವೇದಿಕೆಯಲ್ಲಿ ನಡೆದ ಪುಣೆ ತುಳುಕೂಟದ 22 ನೇ ವಾರ್ಷಿಕೋತ್ಸವದಲ್ಲಿ ವರ್ಷದ ಶ್ರೇಷ್ಠ ಸಮಾಜಸೇವಕ ಗೌರವ ಸ್ವೀಕರಿಸಿ ಮಾತನಾಡಿ, ಅದೆಷ್ಟೋ ಸೈನಿಕರು ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಸಂಘದ ಸಮ್ಮಾನ ಸ್ವೀಕರಿಸಿ ಮಾತನಾಡಿದ ಚೆಫ್‌ಟಾಕ್‌ ಹಾಸ್ಪಿಟಾಲಿಟಿ ಸರ್ವಿಸಸ್‌ ಬೆಂಗಳೂರು ವ್ಯವಸ್ಥಾಪಕ ನಿರ್ದೇಶಕರಾದ ಗೋವಿಂದ ಬಾಬು ಪೂಜಾರಿ, ನಾನೊಬ್ಬ ಬಡ ಕುಟುಂಬದಿಂದ ಪರಿಶ್ರಮದಿಂದ ಯಶಸ್ಸನ್ನು ಪಡೆ ದವನು. ಯಾರೇ ಆದರೂ ಮನಸ್ಸು ಮಾಡಿ ಪ್ರಯತ್ನಪಟ್ಟರೆ ಯಾವುದೇ ಸಾಧನೆಯನ್ನು ಮಾಡಬಹುದಾಗಿದೆ ಎಂಬುದಕ್ಕೆ ನಾನು ಸಾಕ್ಷಿಯಾಗಿದ್ದೇನೆ. ಎಂದು ನುಡಿದು ಶುಭಹಾರೈಸಿದರು.

ಅತಿಥಿಗಳಾಗಿ ಉಪಸ್ಥಿತರಿದ್ದ ಬಂಟ್ಸ್‌ ಅಸೋಸಿ ಯೇಶನ್‌ ಪುಣೆ ಇದರ ಅಧ್ಯಕ್ಷರಾದ ಆನಂದ್‌ ಶೆಟ್ಟಿ ಮಿಯ್ನಾರು ಮಾತನಾಡಿ, ಪುಣೆ ತುಳುಕೂಟ ಹಲವಾರು ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪುಣೆಯಲ್ಲಿರುವ ತುಳುವರನ್ನು ಸಂಘಟಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾ ಬಂದಿದೆ. ಇಂದು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿ ಎಲ್ಲರ ಗಮನಸೆಳೆದಿದೆ. ಭವಿಷ್ಯದಲ್ಲಿ ಈ ಸಂಘ ಮಹತ್ತರವಾದ ಪ್ರಗತಿಯನ್ನು ಕಾಣಲಿ ಎಂದು ಶುಭ ಹಾರೈಸಿದರು.

ಸಂಘದ ಸ್ಥಾಪಕಾಧ್ಯಕ್ಷ ಜಯ ಕೆ. ಶೆಟ್ಟಿ ಮಾತನಾಡಿ ತುಳು ಕೂಟ ಪುಣೆ ತುಳುವರೆಲ್ಲರ ಪ್ರೋತ್ಸಾಹದಿಂದ 22ನೇ ವರ್ಷವನ್ನು ಸಂಭ್ರಮದಿಂದ ಆಚರಿಸುವಂತಾಗಿದೆ. ಆದರೂ ಸಂಘಕ್ಕೊಂದು ಸ್ವಂತ ಕಚೇರಿಯನ್ನು ಹೊಂದದಿರುವುದು ದೌರ್ಭಾಗ್ಯವಾಗಿದೆ. ಸಂಘಕ್ಕೊಂದು ಸೂರು ಕಲ್ಪಿಸುವಲ್ಲಿ ಪುಣೆ ತುಳುವರೆಲ್ಲರ ಸಹಕಾರ ಅಗತ್ಯ ವಾಗಿದೆ ಎಂದು ಹೇಳಿದರು.

ಅತಿಥಿಗಳಾಗಿ ಪಿಂಪ್ರಿ-ಚಿಂಚ್ವಾಡ್‌ ತುಳುಸಂಘದ ಅಧ್ಯಕ್ಷ ಹರೀಶ್‌ ಶೆಟ್ಟಿ ಕುರ್ಕಾಲ್, ಪುಣೆ ತುಳುಕೂಟದ ಗೌರವಾಧ್ಯಕ್ಷ ತಾರಾನಾಥ ಕೆ. ರೈ ಮೇಗಿನಗುತ್ತು, ಪ್ರಧಾನ ಕಾರ್ಯ ದರ್ಶಿ ಸಂತೋಷ್‌ ಶೆಟ್ಟಿ ಎಣ್ಣೆಹೊಳೆ, ಕೋಶಾಧಿಕಾರಿ ದಿವಾಕರ ಶೆಟ್ಟಿ ಮಾಣಿಬೆಟ್ಟು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಾತಾ ಡಿ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾಯವಾದಿ ರೋಹನ್‌ ಪಿ. ಶೆಟ್ಟಿ ಉಪಸ್ಥಿತರಿದ್ದರು. ಖ್ಯಾತ ಉದ್ಯಮಿ, ಸಮಾಜಸೇವಕ, ಪುಣೆ ಬಂಟರ ಭವನವನ್ನು ತನ್ನ ಸಾರಥ್ಯದಲ್ಲಿ ನಿರ್ಮಿಸಿ ಮಹತ್ತರ ಸಾಧನೆಗೈದ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್‌ ವಿ. ಶೆಟ್ಟಿ ಹಾಗೂ ಗೋವಿಂದ ಬಾಬು ಪೂಜಾರಿ ಇವರುಗಳನ್ನು ಸಂಘದ ವತಿಯಿಂದ ವರ್ಷದ ಸಾಧಕರನ್ನಾಗಿ ವಿಶೇಷವಾಗಿ ಸಂಘದ ವತಿಯಿಂದ ಶಾಲು ಹೊದೆಸಿ, ಪೇಟ, ಸ್ಮರಣಿಕೆ, ಫಲಪುಷ್ಪ, ಸಮ್ಮಾನ ಪತ್ರವನ್ನಿತ್ತು ಸಮ್ಮಾನಿಸಲಾಯಿತು. ಎಸ್‌ಎಸ್‌ಸಿ ಹಾಗೂ ಎಚ್ಎಸ್‌ಸಿಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಪ್ರವೀಣ್‌ ಶೆಟ್ಟಿ ಪುತ್ತೂರು ಪ್ರಾಯೋಜಿತ ಬೆಳ್ಳಿಯ ಪದಕಗಳನ್ನು ನೀಡಿ ಸತ್ಕರಿಸಲಾಯಿತು.

ಪುಣೆಯಲ್ಲಿ ದೀರ್ಘ‌ಕಾಲ ಒಂದೇ ಹೊಟೇಲಿನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಕುಟ್ಟಿ ಶೆಟ್ಟಿ, ರಾಮಣ್ಣ ಶೆಟ್ಟಿ ಹಾಗೂ ಮೋನಪ್ಪ ಪೂಜಾರಿಯವರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ಉಪಸ್ಥಿತರಿದ್ದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳನ್ನು ಹಾಗೂ ಕಾರ್ಯಕ್ರಮಕ್ಕೆ ವಿಶೇಷ ಪ್ರಾಯೋಜಕತ್ವ ನೀಡಿದ ಶ್ರೀ ಗುರುದೇವಾ ಸೇವಾ ಬಳಗದ ಅಧ್ಯಕ್ಷರಾದ ಸದಾನಂದ ಕೆ. ಶೆಟ್ಟಿ, ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಪುತ್ತೂರು, ಹೊಟೇಲ್ ಉದ್ಯಮಿಗಳಾದ ಉದಯ್‌ ಶೆಟ್ಟಿ ಕಳತ್ತೂರು ಮತ್ತು ಯಶವಂತ್‌ ಶೆಟ್ಟಿ ಉಳಾಯಿಬೆಟ್ಟು, ಶರತ್‌ ಶೆಟ್ಟಿ ಉಳೆಪಾಡಿ ಪಡ್ದಣಗುತ್ತು ಇವರನ್ನು ಗೌರವಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಗೌರವಾಧ್ಯಕ್ಷ ತಾರಾನಾಥ ಕೆ. ರೈಮೇಗಿನಗುತ್ತು ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಶೆಟ್ಟಿ ಎಣ್ಣೆಹೊಳೆ ಸಂಘದ ಕಾರ್ಯಚಟುವಟಿಕೆಗಳ ವರದಿಯನ್ನು ವಾಚಿಸಿದರು. ಯುವ ವಿಭಾಗದ ಕಾರ್ಯಾಧ್ಯಕ್ಷ ರೋಹನ್‌ ಪಿ. ಶೆಟ್ಟಿ ಯುವ ವಿಭಾಗದ ವರದಿಯನ್ನು ವಾಚಿಸಿದರು. ಕಾಂತಿ ಸೀತಾರಾಮ ಶೆಟ್ಟಿ, ಅಕ್ಷತಾ ಎಸ್‌. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದಿವಾಕರ ಶೆಟ್ಟಿ ಮಾಣಿಬೆಟ್ಟು ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ವನ್ನು ನಡೆಸಿಕೊಟ್ಟರು. ಶಂಕರ ಪೂಜಾರಿ ಬಂಟಕಲ್ಲು ಪ್ರಾರ್ಥಿಸಿದರು. ಶರತ್‌ ಭಟ್ ಅತ್ರಿವನ, ವಿಕೇಶ್‌ ರೈ ಶೇಣಿ ಸಮ್ಮಾನ ಪತ್ರ ವಾಚಿಸಿದರು. ಪ್ರಿಯಾ ಎಚ್. ದೇವಾಡಿಗ ಅತಿಥಿಗಳನ್ನು ಪರಿಚಯಿಸಿದರು. ಮಹಿಳಾ ಸಾಂಸ್ಕೃತಿಕ ವಿಭಾಗದ ಸರಿತಾ ಟಿ. ಶೆಟ್ಟಿ ಹಾಗೂ ಸರಿತಾ ವೈ. ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಘಟಿಸುವಲ್ಲಿ ಶ್ರಮಿಸಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ತುಳು ಭಾಷೆ ಎಂಬುದು ಕೇವಲ ಭಾಷೆಯಲ್ಲ. ಇದೊಂದು ನಾಗರಿಕತೆಯ ವ್ಯಾಖ್ಯಾನ. ಆ ಶಕ್ತಿಯಿಂದಾಗಿಯೇ ನಾವು ತುಳುವರು ಸುಸಂಸ್ಕೃತರಾಗಿದ್ದೇವೆ. ನಮ್ಮ ದೈವ,ದೇವರ ಮೇಲಿರುವ ನಂಬಿಕೆ, ಗುರು ಹಿರಿಯರೊಂದಿಗಿರುವ ಗೌರವ, ನಮ್ಮ ಆಹಾರ, ಸಂಸ್ಕೃತಿ, ಆಚಾರ ವಿಚಾರಗಳೆಲ್ಲವೂ ವಿಶೇಷತೆಯಿಂದ ಕೂಡಿದೆ. ನಮ್ಮ ಮಕ್ಕಳಿಗೆ ನಮ್ಮ ಭವ್ಯವಾದ ಸಂಸ್ಕೃತಿ, ಧಾರ್ಮಿಕ ನಂಬಿಕೆಗಳ, ಹಬ್ಬ ಹರಿದಿನಗಳ ಆಚರಣೆಗಳ ಮಹತ್ವವನ್ನು ತಿಳಿಹೇಳಬೇಕಾಗಿದೆ. ಸಮಾಜದಲ್ಲಿ ಸಂಸ್ಕಾರವಂತರಾಗಿ ಬದುಕುವ ಕಲೆಯನ್ನು ಕಲಿಸುವ ಅಗತ್ಯವಿದೆ. – ಮಹೇಶ್‌ ಎಂ. ಶೆಟ್ಟಿ ಮಾಜಿ ಅಧ್ಯಕ್ಷರು, ಹುಬ್ಬಳ್ಳಿ ಧಾರವಾಡ ಬಂಟರ ಸಂಘ
ಸೈನ್ಯಕ್ಕೆ ಸೇರಿಸುವ ಬದ್ಧತೆ ತೋರಿ:

ದೇಶದಮೇಲೆ ಅಭಿನಮಾನವಿರಿಸಿಕೊಂಡು ನಮ್ಮ ಮಕ್ಕಳನ್ನು ಸೈನ್ಯಕ್ಕೆ ಸೇರಿಸುವ ಬದ್ಧತೆಯನ್ನು ನಾವು ಮಾಡಬೇಕಾಗಿದೆ. ಅದೇ ರೀತಿ ಕರ್ನಾಟಕ ಮಹಾರಾಷ್ಟ್ರಾದ್ಯಂತ ನೆರೆಯಿಂದಾಗಿ ಸಾವಿರಾರು ಕುಟುಂಬಗಳು ಇಂದು ದುಸ್ಥಿತಿಯಲ್ಲಿವೆ. ಅವರಿಗೆ ನಮ್ಮಿಂದಾದ ನೆರವನ್ನು ನೀಡುವ ಅಗತ್ಯವಿದೆ. ನಾನಾ ಪಾಟೇಕರ್‌ ಅವರ ನಾಮ್‌ ಸಂಸ್ಥೆಯು ಸುಮಾರು 500 ಮನೆಗಳನ್ನು ನಿರ್ಮಿಸಲು ತೊಡಗಿದ್ದು ಅವರೊಂದಿಗೆ ಕೈಜೋಡಿಸಿ ಐದಾರು ಮನೆಗಳನ್ನು ಪುಣೆ ಬಂಟರ ಸಂಘದಿಂದ ನಿರ್ಮಿಸಲು ನಿರ್ಧರಿಸಿದ್ದೇವೆ. ಇಂದೇ ನಾಮ್‌ ಸಂಸ್ಥೆಯ ಮೂಲಕ ನಿರಾಶ್ರಿತರಿಗೆ ಆಹಾರ ಸಾಮಗ್ರಿಗಳನ್ನು ಸಂಘದಿಂದ ರವಾನಿಸಿದ್ದೇವೆ. ಪುಣೆ ತುಳುಕೂಟ ಸುಂದರವಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದ್ದು ಕಾರ್ಯಕರ್ತರ ಶ್ರಮ ಎದ್ದು ತೋರುತ್ತಿದೆ. ಸಂಘದ ಗೌರವಕ್ಕೆ ವಂದನೆಗಳು. ನಾನು ಮಾಡಿದ ನಿಸ್ವಾರ್ಥ ಸೇವೆಗೆ ಸಂದ ಗೌರವವೆಂದು ಭಾವಿಸುತ್ತೇನೆ. ಭವಿಷ್ಯದಲ್ಲಿ ಸಂಸ್ಥೆ ಉತ್ತರೋತ್ತರ ಪ್ರಗತಿಯನ್ನು ಕಾಣಲಿ ಎಂದು ಸಂತೋಷ್‌ ಶೆಟ್ಟಿ ಹೇಳಿದರು.
ಅತಿಥಿಗಳು ನಮ್ಮ ಮೇಲಿನ ಪ್ರೀತಿಯಿಂದ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ನಮ್ಮ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುವುದು ಹಾಗೂ ಪುಣೆಯಲ್ಲಿರುವ ತುಳುನಾಡ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹ ನೀಡಿರುವುದಕ್ಕೆ ವಂದನೆಗಳು. ಪುಣೆಯ ತುಳು-ಕನ್ನಡಿಗರ ಪ್ರೋತ್ಸಾಹ, ಬೆಂಬಲದಿಂದ ಇಂದು ತುಳುಕೂಟ ಯಶಸ್ವಿಯಾಗಿ ಬೆಳೆಯಲು ಸಾಧ್ಯವಾಗಿದೆ. ಮುಂದೆಯೂ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಸಂಘದ ಮೇಲಿರಲಿ. – ಮೋಹನ್‌ ಶೆಟ್ಟಿ ಎಣ್ಣೆಹೊಳೆ ಅಧ್ಯಕ್ಷರು, ಪುಣೆ ತುಳುಕೂಟ.
ಚಿತ್ರ-ವರದಿ: ಕಿರಣ್‌ ಬಿ. ರೈ ಕರ್ನೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಜಿ.ಎಸ್‌. ಕಮತರ ವಿಜಯಪುರ: ತ್ಯಾಜ್ಯಗಳಿಂದಾಗಿ ಕೊಳಕು ನಾರುತ್ತಿರುವ ನಗರದ ಅರೆಕಿಲ್ಲಾ ಪ್ರದೇಶದಲ್ಲಿರುವ ಐತಿಹಾಸಿಕ ಗಗನ ಮಹಲ್ ಕಂದಕದಲ್ಲಿ ಬೋಟಿಂಗ್‌ ಆರಂಭಿಸಿ...

  • ಕನಕಗಿರಿ: ಪಟ್ಟಣದಲ್ಲಿ ಖಜಾನೆ ಮತ್ತು ಉಪ ನೋಂದಣಿ ಕಚೇರಿಯನ್ನು ಪ್ರಾರಂಭಿಸಲು ಈಗಾಗಲೇ ಬಾಡಿಗೆ ಕಟ್ಟಡ ಪಡೆಯಲಾಗಿದೆ. ಶೀಘ್ರವೇ ಕಚೇರಿ ಪ್ರಾರಂಭಿಸಲಾಗುವುದು...

  • ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ಕನಕಾಪೂರ ಗ್ರಾಮದ ವಿದ್ಯಾರ್ಥಿ ಯಲ್ಲಾಲಿಂಗ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿ ಯಲ್ಲಾಲಿಂಗನ...

  • •ರವೀಂದ್ರ ಮುಕ್ತೇದಾರ ಔರಾದ: ಔರಾದ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಮಾಡುವುದಕ್ಕಿಂತ ಸರ್ಕಾರ ಸಂತಪೂರ ಪಟ್ಟಣವನ್ನು ತಾಲೂಕು ಕೇಂದ್ರವಾಗಿಸಬೇಕು ಎಂದು ಜನಪ್ರತಿನಿಧಿಗಳು...

  • ಬಂಕಾಪುರ: ರಾಯಚೂರ ಗಲ್ಲಿಯಲ್ಲಿನ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೊಳಚೆ ನಿಂತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಪರಿಣಾಮ ಮಕ್ಕಳಲ್ಲಿ...