ಫೆ. 28: ಕರ್ನಾಟಕ ಸಂಘ ಡೊಂಬಿವಲಿ ಆಡಳಿತ ಮಂಡಳಿ ಚುನಾವಣೆ
Team Udayavani, Feb 26, 2021, 8:31 PM IST
ಡೊಂಬಿವಲಿ: ನಗರದ ಪ್ರತಿಷ್ಠಿತ ಸಂಘ-ಸಂಸ್ಥೆಗಳಲ್ಲೊಂದಾದ ಡೊಂಬಿವಲಿ ಕರ್ನಾಟಕ ಸಂಘದ 2021-23ನೇ ಸಾಲಿಗಾಗಿ ನೂತನ ಆಡಳಿತ ಮಂಡಳಿಯ ಚುನಾವಣೆಯು ಫೆ. 28ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 3ರ ವರೆಗೆ ಡೊಂಬಿವಲಿ ಪೂರ್ವದ ಮಂಜುನಾಧ ವಿದ್ಯಾಲಯದ ಸಭಾಗೃಹದಲ್ಲಿ ನಡೆಯಲಿದೆ.
ಕೋವಿಡ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಮತದಾನವು ನಡೆಯಲಿದ್ದು, ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂದು ಚುನಾವಣಾಧಿಕಾರಿ ಡಾ| ರಾಜಶೇಖರ್ ಪಾಟೀಲ್ ಅವರು ವಿನಂತಿಸಿದ್ದಾರೆ. ಆಡಳಿತ ಮಂಡಳಿಯ 17 ಸ್ಥಾನಗಳಿಗಾಗಿ 27 ಅಭ್ಯರ್ಥಿಗಳು ಕಣದಲ್ಲಿದ್ದು, ಅಧ್ಯಕ್ಷ ಸ್ಥಾನಕ್ಕಾಗಿ ಇಬ್ಬರು ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.
ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ತಮ್ಮ ಭಾವಚಿತ್ರವನ್ನು ಹೊಂದಿರುವ ಗುರುತಿನ ಪತ್ರ ಅಥವಾ ಆಧಾರ್ ಕಾರ್ಡ್, ಪಾನ್ ಕಾರ್ಡ್ ಇತ್ಯಾದಿ ಗಳನ್ನು ಕಡ್ಡಾಯವಾಗಿ ತರುವುದರ ಜತೆಗೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಡಾ| ರಾಜಶೇಖರ್ ಪಾಟೀಲ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.