ಜ. 6-8: ವಾರ್ಷಿಕ ಶ್ರೀ ಶನಿಮಹಾಪೂಜೆ, ಶ್ರೀ ಶನೀಶ್ವರ ಮಂದಿರದ ಜಾತ್ರಾ ಮಹೋತ್ಸವ
Team Udayavani, Feb 6, 2021, 6:42 PM IST
ಮುಂಬಯಿ: ನಲಸೊಪರದ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ ಫೋರ್ಟ್ ಇದರ 77ನೇ ವಾರ್ಷಿಕ ಶ್ರೀ ಶನಿಮಹಾಪೂಜೆ ಹಾಗೂ ಶ್ರೀ ಶನೀಶ್ವರ ಮಂದಿರದ ಜಾತ್ರಾ ಮಹೋತ್ಸವವು ಜ. 6ರಿಂದ 8ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬ್ರಹ್ಮಶ್ರೀ ಕೊಯ್ಯೂರು ನಂದ ಕುಮಾರ ತಂತ್ರಿಯವರ ನೇತೃತ್ವದಲ್ಲಿ ನಲಸೋಪರ ಪಶ್ಚಿಮದ ನಲಸೊಪರ- ವಿರಾರ್ ಲಿಂಕ್ ರೋಡ್, ಸೃಷ್ಟಿ ಹೈಟ್ಸ್ ಎದುರುಗಡೆಯಿರುವ ಶ್ರೀಪ್ರಸ್ಥ ಇಲ್ಲಿ ಫೆ. 2ರಂದು ನಡೆದ ವಿಶೇಷ ಸಭೆಯಲ್ಲಿ ಸರಕಾರದ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಕೊಂಡು ಸರಳವಾಗಿ 77ನೇ ವಾರ್ಷಿಕ ಶ್ರೀ ಶನಿಮಹಾಪೂಜೆ ಹಾಗೂ ಜಾತ್ರಾ ಮಹೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ.
ಫೆ. 6ರಂದು ಬೆಳಗ್ಗೆ 9ರಿಂದ ದೇವತಾ ಪ್ರಾರ್ಥನೆ, ತೋರಣ ಪ್ರತಿಷ್ಠೆ, ಗಣಪತಿ ಹೋಮ ಹಾಗೂ ಧ್ವಜಾರೋಹಣದ ಬಳಿಕ ಪೂರ್ವಾಹ್ನ 11ರಿಂದ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ ಫೋರ್ಟ್ ನಲಸೊಪರ ಸಮಿತಿಯ ಸದಸ್ಯರಿಂದ ಶನಿಗ್ರಂಥ ಪಾರಾಯಣ ನಡೆಯಲಿದೆ. ನಾಗದೇವರ ಸನ್ನಿಧಾನದಲ್ಲಿ ಅಭಿಷೇಕ, ಆಶ್ಲೇಷಾ ಬಲಿ, ಸಂಜೆ 6ರಿಂದ ಶನೈಶ್ಚರ ಕಲ್ಪೋಕ್ತ ಪೂಜಾ ಬಲಿ ಉತ್ಸವ, ದುರ್ಗಾ ಪೂಜೆ, ರಂಗಪೂಜೆ, ಪ್ರಸನ್ನಪೂಜೆ ಹಾಗೂ ನಿತ್ಯ ಬಲಿ ನಡೆಯಲಿದೆ.
ಇದನ್ನೂ ಓದಿ:40ಎಂ ಗಾತ್ರದ ಕ್ಯಾನ್ಸರ್ ಗಡ್ಡೆ ಹೊರತೆಗೆದ ವೈದ್ಯರು
ಫೆ. 7ರಂದು ಬೆಳಗ್ಗೆ 6ರಿಂದ ದೀಪ ಬಲಿ, ಮಧ್ಯಾಹ್ನ 12ರಿಂದ ಪ್ರಸನ್ನ ಪೂಜೆ, ನಿತ್ಯ ಬಲಿ ನಡೆಯಲಿದ್ದು ಸಂಜೆ 6ರಿಂದ ಬಲಿ ಉತ್ಸವ, ಪ್ರಸನ್ನ ಪೂಜೆ, ಭೂತ ಬಲಿ ಮತ್ತು ದೇವರ ಶಯನೋತ್ಸವ ಜರಗಲಿದೆ. ಫೆ. 8ರಂದು ಬೆಳಗ್ಗೆ 7ರಿಂದ ಕವಟ ಉದ್ಘಾಟನೆ, 9.30ರಿಂದ ನವಗ್ರಹ ಸಹಿತ ಶನಿ ಶಾಂತಿ ಹೋಮ, ಅಭಿಷೇಕ, ಪ್ರಸನ್ನ ಪೂಜೆ ಹಾಗೂ ಮಧ್ಯಾಹ್ನ 12ರಿಂದ ಮಹಾ ಪೂಜಾ ಬಲಿ ನಡೆಯಲಿದೆ. ಸಂಜೆ 6ರಿಂದ ಅವಭೃತ ಸ್ನಾನ, ಧ್ವಜಾವರೋಹಣ ಹಾಗೂ ಪ್ರಸನ್ನ ಪೂಜೆಯನ್ನು ಆಯೋಜಿಸಲಾಗಿದೆ.
ಸಾಮಾಜಿಕ ಅಂತರ, ಕೋವಿಡ್ ಮಾರ್ಗಸೂಚಿಗಳ ಅನ್ವಯ ಸನ್ನಿಧಾನಕ್ಕೆ ಭಕ್ತರ ಸಂದರ್ಶಕ್ಕೆ ಅವಕಾಶ ವಿರುವುದಿಲ್ಲ. ಭಕ್ತರು ಸಹಕರಿಸುವಂತೆ ಸಮಿತಿಯ ಪಾರುಪತ್ಯಗಾರರು, ಕಾರ್ಯ ಕಾರಿ ಸಮಿತಿ, ಪೂಜಾ ಸಮಿತಿ, ಮಹಿಳಾ ವಿಭಾಗ ಹಾಗೂ ಸರ್ವಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.