ಕನ್ನಡ ವಿಭಾಗ ಮುಂಬಯಿ ವಿವಿ: ಎರಡು ಕೃತಿಗಳ ಲೋಕಾರ್ಪಣೆ

Team Udayavani, May 9, 2019, 2:34 PM IST

ಮುಂಬಯಿ: ಸಮಾಜದ ತಲ್ಲಣಗಳಿಗೆ ಸ್ಪಂದಿಸುವ ಮನೋಧರ್ಮ ಶಿಕ್ಷಕರಲ್ಲಿ ಇರಬೇಕು. ಅಂತಹ ಮಾನವೀಯ ಕಾಳಜಿಯುಳ್ಳ, ನಿಜವಾದ ಅರ್ಥದಲ್ಲಿ ಆದರ್ಶ ಶಿಕ್ಷಕಿ ಮೇರಿ ಪಿಂಟೊ. ಅವರ ಸಾಹಸ ಸಾಧನೆಗಳನ್ನು, ಬಡ ಮಕ್ಕಳ ಬಗ್ಗೆ ಅವರಿಗಿರುವ ಪ್ರೀತಿ, ಕಳಕಳಿಯನ್ನು ದಿನಕರ ನಂದಿ ಚಂದನ್‌ ಅವರು ಬರೆದ ಪುಸ್ತಕದಲ್ಲಿ ಸೊಗಸಾಗಿ ವಿವರಿಸಿದ್ದಾರೆ. ಶಾಂತಿಪ್ರಿಯರು, ಪರೋಪಕಾರಿಗಳು ಆದ ಪಿಂಟೊ ಅವರ ಕುರಿತಾದ ಕೃತಿಯನ್ನು ಲೋಕಾರ್ಪಣೆಗೊಳಿಸುವ ಅವಕಾಶ ದೊರೆತಿರುವುದಕ್ಕೆ ಸಂತೋಷವಾಗಿದೆ. ಇಂತಹ ಅಪರೂಪದ ವ್ಯಕ್ತಿತ್ವದ ಅನಾವರಣ ಕನ್ನಡ ವಿಭಾಗದ ವಿದ್ಯಾರ್ಥಿಗಳಿಂದ ಆಗುತ್ತಿರುವುದು ಅಭಿಮಾನದ ವಿಷಯ. ಸಾಧಕರನ್ನು ಲೋಕಮುಖಕ್ಕೆ ಪರಿಚಯಿಸಿದಾಗ ಅವರ ಸಾಧನೆಗಳು ಅನುಗಾಲ ನೆನಪುಳಿಯುವಂತೆ ಮಾಡುತ್ತದೆ ಎಂದು ನಗರದ ಡಾ| ವ್ಯಾಸರಾವ್‌ ನಿಂಜೂರು ಅವರು ನುಡಿದರು.

ಇತ್ತೀಚೆಗೆ ಕಲಿನಾ ಕ್ಯಾಂಪಸ್‌ನ ಮುಂಬಯಿ ವಿಶ್ವವಿದ್ಯಾಲಯದ ಜೆ. ಪಿ. ನಾಯಕ್‌ ಸಭಾ ಭವನದಲ್ಲಿ ಜರಗಿದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ದಿನಕರ ಚಂದನ್‌ ಅವರು ರಚಿಸಿದ ಆದರ್ಶ ಶಿಕ್ಷಕಿ ಮೇರಿ ಪಿಂಟೊ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮುಂಬಯಿ ವಿವಿ ಕನ್ನಡ ವಿಭಾಗದ ಕಾರ್ಯವೈಖರಿ ಅಭಿನಂದನೀಯವಾಗಿದೆ ಎಂದು ನುಡಿದು ಶುಭ ಹಾರೈಸಿದರು.

ಕವಿ ಎಚ್‌. ಆರ್‌. ಚಲವಾದಿ ಅವರ ಆರದ ಕೆಂಡಗಳು ಕವನ ಸಂಕಲನವನ್ನು ರಾಯಚೂರಿನ ಸಾಹಿತಿ ವೀರ ಹನುಮಾನ್‌ ರಾಯಚೂರು ಅವರು ಬಿಡುಗಡೆಗೊಳಿಸಿ ಮಾತನಾಡಿ, ಕವಿಯ ಕಾವ್ಯವು ಸಾಮಾಜಿಕ ಪರಿಸರದಲ್ಲಿ ಘಟಿಸುವ ಒಂದು ಕ್ರಿಯೆ. ಶಿಕ್ಷಕರಾದವರು ಸಮಾಜಕ್ಕೆ ಪಾಠ ಮಾಡಬೇಕು. ಕೇವಲ ವಿದ್ಯಾರ್ಥಿಗಳಿಗಲ್ಲ. ಆದ್ದರಿಂದಲೇ ಶಿಕ್ಷಕ ವೃತ್ತಿ ಮಹತ್ವದ್ದು. ಇಂದು ಲೋಕಾರ್ಪಣೆಗೊಂಡ ಕವನ ಸಂಕಲನದಲ್ಲಿ ಮಾನವೀಯ ಸಂವೇದನೆಯ ಬಂಡಾಯಗಾರ ಕವಿ ಚಲವಾದಿ ಅವರು ಸಮಾನತೆಯ ತುಡಿತದಿಂದ ಬರೆದ ಕವಿತೆಗಳು ಈ ಸಂಕಲನದಲ್ಲಿ ಚೆನ್ನಾಗಿ ಮೂಡಿಬಂದಿವೆ. ಅದೇ ರೀತಿ ಮೇರಿ ಪಿಂಟೊ ಅವರ ಸಾಹಸಗಾಥೆಗಳಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಇಂತಹವರು ನಮಗೆ ಯಾವತ್ತಿಗೂ ಪ್ರೇರಣೆಯಾಗುತ್ತಾರೆ ಎಂದು ಕೃತಿಕಾರರನ್ನು ಅಭಿನಂದಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥರಾದ ಡಾ| ಜಿ. ಎನ್‌ ಉಪಾಧ್ಯ ಅವರು ಮಾತನಾಡಿ, ಒಬ್ಬ ಮಹಿಳೆ ಶಿಕ್ಷಕಿಯಾಗಿ ತಾನು ಏನು ಮಾಡಬಹುದು ಎನ್ನುವುದಕ್ಕೆ ಉತ್ತಮ ನಿದರ್ಶನ ಮೇರಿ ಪಿಂಟೊ ಅವರು. ಸದ್ದಿಲ್ಲದೆ ಕನ್ನಡವನ್ನು ಕಟ್ಟಿ ಬೆಳೆಸಿದವರಲ್ಲಿ ಮೇರಿ ಬಿ.ಪಿಂಟೊ ಅವರು ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ಶಿಕ್ಷಣದ ಮುಖಾಂತರ ಸಮಾಜಸೇವೆಯನ್ನು ಮಾಡಿದವರು. ಅದೇ ರೀತಿ ಎಚ್‌.ಆರ್‌ ಚಲವಾದಿ ಅವರು ತಮ್ಮ ನಿವೃತ್ತಿಯ ಜೀವನದಲ್ಲಿ ಚೊಚ್ಚಲ ಕವನ ಸಂಕಲನವನ್ನು ಹೊರತಂದಿರುವುದು ಖುಷಿ ತಂದಿದೆ. ಅವರ ಆರದ ಕೆಂಡಗಳು ಕವನ ಸಂಕಲನದಲ್ಲಿ ಬಂಡಾಯ ಮನೋಧರ್ಮವಿದೆ. ಅವರದು ಜನಪರ ನಿಲುವು ಎಂದು ಕೃತಿಕಾರರಿಗೆ ಶುಭ ಹಾರೈಸಿದರು.

ಹಿರಿಯ ಸಾಹಿತಿ ಡಾ| ಸುನೀತಾ ಶೆಟ್ಟಿ ಅವರು, ಮೇರಿ ಪಿಂಟೊ ಅವರ ಪತ್ರಗಳಿಗೆ ಶಿಕ್ಷಣ ಅಧಿಕಾರಿಗಳು ಸಕಾರಾತ್ಮಕಾವಾಗಿ ಬರೆದ ಪತ್ರಗಳನ್ನು ತಮ್ಮ ಹಳೆಯ ಕಡತಗಳಿಂದ ತಂದು ಸಭಿಕರಿಗೆ ತೋರಿಸುತ್ತಾ ಮೇರಿ ಪಿಂಟೊ ಅವರ ನಿರ್ಭಯ ಪ್ರವೃತ್ತಿಯನ್ನು ನೆನೆದು ಶುಭ ಹಾರೈಸಿದರು. ವಿಶ್ವವಿದ್ಯಾಲಯದ ಎಂ. ಫಿಲ್‌ ಸಂಶೋಧನ ವಿದ್ಯಾರ್ಥಿಯಾದ ದಿನಕರ ನಂದಿ ಚಂದನ್‌ ಅವರ ಆದರ್ಶ ಶಿಕ್ಷಕಿ ಮೇರಿ ಬಿ. ಪಿಂಟೊ ಕೃತಿಯನ್ನು ಅಣುಶಕ್ತಿ ನಗರ ಕನ್ನಡ ಕಲಿಕಾ ಕೇಂದ್ರದ ಶಿಕ್ಷಕರಾದ ಗೀತಾ ಮಂಜುನಾಥ್‌ ಮತ್ತು ಆರದ ಕೆಂಡಗಳು ಕೃತಿಯ ಕುರಿತು ನಿವೃತ್ತ ಶಿಕ್ಷಕರಾದ ಮಲ್ಲಿನಾಥ ಜಲದೆಯವರು ಮಾತನಾಡಿದರು.

ಕೃತಿಕಾರರಾದ ಚಲವಾದಿ ಹಾಗೂ ದಿನಕರ ನಂದಿ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡು ಸಹಕರಿಸಿದವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮವು ಗೀತಾ ಮಂಜುನಾಥ್‌ ಮತು ಜಯಶ್ರೀ ದಿನಕರ ಚಂದನ್‌ ಸ್ವಾಗತ ಗೀತೆಯೊಂದಿಗೆ ಆರಂಭವಾಯಿತು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ್‌ ಶೆಟ್ಟಿ ಅವರು ಕಾರ್ಯಕ್ರಮವನ್ನು ಸಂಯೋಜಿಸಿ ನಿರೂಪಿಸಿದರು. ಸಂಶೋಧನ ವಿದ್ಯಾರ್ಥಿ ಕುಮುದಾ ಆಳ್ವ ಅವರು ವಂದಿಸಿದರು. ಪಿಂಟೊ ಅವರ ಕುಟುಂಬವರ್ಗದವರು ಮತ್ತು ಅಭಿಮಾನಿಗಳು, ಚಲವಾದಿ ಅವರ ಬಂಧು ಮಿತ್ರರು ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ