ಸತ್ಕರ್ಮಗಳಿಂದ ಧಾರ್ಮಿಕ ಪರಂಪರೆ ಬೆಳೆಸೋಣ

Team Udayavani, Nov 16, 2019, 4:33 PM IST

ಮುಂಬಯಿ, ನ. 15: ದುರ್ಗುಣಗಳನ್ನುತೊರೆದು, ಸತ್ಕಾರ್ಯವನ್ನು ಮಾಡುವ ಜತೆಗೆ ಸತ್ಯ-ಧರ್ಮವನ್ನು ನಾವು ಕಾಪಾಡಿಕೊಂಡು ನಡೆದರೆ ಕಲಿಯುಗದಲ್ಲಿ ನಾವು ಶಾಂತಿ, ನೆಮ್ಮದಿಯಿಂದ ಬದುಕಲು ಸಾಧ್ಯವಿದೆ ಎಂಬುವುದನ್ನು ನಾಟಕಗಳಿಂದ ನಾವು ತಿಳಿಯಬಹುದು.

ಸಮಾಜವನ್ನು ತಿದ್ದುವ ಒಳ್ಳೆಯ ಸಂದೇಶವನ್ನು ಸಾರುವ ನಾಟಕಗಳನ್ನು ಕಿಶೋರ್‌ ಡಿ. ಶೆಟ್ಟಿ ಅವರ ನೇತೃತ್ವದಲ್ಲಿ ಲಕುಮಿ ತಂಡವು ಪ್ರದರ್ಶನವನ್ನು ನೀಡಿ ಜನಪ್ರಿಯತೆಯನ್ನು ಪಡೆದಿದೆ ಎಂದು ಅಸಲ್ಫಾ ಶ್ರೀ ಕ್ಷೇತ್ರ ಗೀತಾಂಬಿಕಾ ಮಂದಿರದ ಅಧ್ಯಕ್ಷ ಕಡಂದಲೆ ಸುರೇಶ್‌ ಭಂಡಾರಿ ನುಡಿದರು. ನ. 11ರಂದು ಘಾಟ್‌ಕೋಪರ್‌ ಪಶ್ಚಿಮದ ಅಸಲ್ಪಾದ ಶ್ರೀ ಕ್ಷೇತ್ರ ಗೀತಾಂಬಿಕಾ ಮಂದಿರದಲ್ಲಿ ಕಲಾ ಸಾರಥಿ ಕರ್ನೂರು ಮೋಹನ್‌ ರೈ ಅವರ ಆಯೋಜನೆಯಲ್ಲಿ ಲಯನ್‌ ಕಿಶೋರ್‌ ಡಿ. ಶೆಟ್ಟಿ ಅವರ ನಿರ್ದೇಶನದ ಲಕುಮಿ ತಂಡದ ಕುಸಲ್ದ ಕಲಾವಿದೆರ್‌ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್‌ ಅಭಿನಯಿಸಿದ ಒವುಲ ಒಂತೆ ದಿನನೆ ನಾಟಕ ಪ್ರದರ್ಶದ ಮಧ್ಯೆ ಜರಗಿದ ಸಮ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂಬಯಿ ಮಹಾನಗರದಲ್ಲಿ ಅವಿಭಜಿತ ದಕ್ಷಿಣ ಕನ್ನಡಿಗರಿಂದ ತುಳುನಾಡ ವೈಭವ ನಡೆಯುತ್ತಿದೆ. ಊರಿಗಿಂತಲೂ ಹೆಚ್ಚಾಗಿ ಇಲ್ಲಿ ತುಳು ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳು, ಧಾರ್ಮಿಕ ಆಚರಣೆಗಳು ನಡೆಯುತ್ತಿವೆ. ಇದರಿಂದ ಯುವ ಪೀಳಿಗೆಯವರು ಊರಿನ ಸಂಸ್ಕೃತಿ, ಭಾಷೆ, ಧಾರ್ಮಿಕತೆ, ಕಲೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಲು ಸಾಧ್ಯವಾಗಿದೆ. ನಾವೆಲ್ಲರ ಸತ್ಕಾರ್ಯ, ಸತ್ಕರ್ಮಗಳ ಮುಖಾಂತರ ನಮ್ಮ ಸಂಸ್ಕೃತಿ, ಕಲೆ, ಧಾರ್ಮಿಕ ಪರಂಪರೆಯನ್ನು ಬೆಳೆಸೋಣ ಎಂದರು.

ಆಶೀರ್ವಚನ ನೀಡಿದ ಜೆರಿಮರಿ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ, ಕಲಾಪೋಷಕ ಎಸ್‌. ಎನ್‌. ಉಡುಪ ಅವರು ಮಾತನಾಡಿ, ತುಳು ಭಾಷೆಯು ಉಳಿದು ಬೆಳೆಯುತ್ತಿದ್ದರೆ ಅದಕ್ಕೆ ತುಳು ರಂಗಭೂಮಿಯ ಕೊಡುಗೆ ಅಪಾರವಾಗಿದೆ. ನಾವೆಲ್ಲಾ ತುಳು ರಂಗಭೂಮಿಗೆ ನಿರಂತರವಾಗಿ ಪ್ರೋತ್ಸಾಹ ನೀಡಬೇಕು. ಆಗ ನಮ್ಮ ಭಾಷೆ ಬೆಳೆಯಲು ಸಾಧ್ಯವಿದೆ. ಪ್ರಸ್ತುತ ಯಕ್ಷಗಾನದಿಂದ ಕನ್ನಡ ಭಾಷೆ, ನಾಟಕಗಳ ಮುಖಾಂತರ ತುಳುಭಾಷೆಯ ಬೆಳವಣಿಗೆಯಾಗುತ್ತದೆ. ನಮ್ಮ ಭಾಷೆಗಳ ಬೆಳವಣಿಗೆಯಲ್ಲಿ ನಾಟಕ ಹಾಗೂ ಯಕ್ಷಗಾನದ ಪಾತ್ರ ಮಹತ್ತರವಾಗಿದೆ. ಕಲಾ ಪೋಷಕರು, ಕಲಾ ಸಂಘಟಕರು ನಮ್ಮ ಕಲೆಯ ಏಳ್ಗೆಗಾಗಿ ಶ್ರಮಿಸುತ್ತಿದ್ದಾರೆ. ಅವರಿಗೆ ಸೂಕ್ತವಾದ ಬೆಂಬಲ, ಪ್ರೋತ್ಸಾಹವನ್ನು ಕಲಾಭಿಮಾನಿಗಳು ನೀಡುತ್ತಿದ್ದಾರೆ. ಅವರಿಗೆ ಸೂಕ್ತವಾದ ಬೆಂಬಲ, ಪ್ರೋತ್ಸಾಹವನ್ನು ಕಲಾಭಿಮಾನಿಗಳು ನೀಡುತ್ತಿದ್ದಾರೆ.

ಆದ್ದರಿಂದ ಊರಿನ ಕಲಾವಿದರಿಗೆ ಮುಂಬಯಿ ಮಹಾನಗರದಲ್ಲಿ ನಿರಂತರ ಪ್ರದರ್ಶನವನ್ನು ನೀಡಲು ಸಾಧ್ಯವಾಗುತತ್ತಿದೆ. ಕಲಾರಸಿಕರು ನಿರಂತರು ನೀಡುತ್ತಿರುವ ಪ್ರೋತ್ಸಾಹವು ಕಲೆಯ ಬೆಳವಣಿಗೆಯ ಸಂಕೇತವಾಗಿದೆ ಎಂದು ನುಡಿದರು. ಈ ಸಂದರ್ಭದಲ್ಲಿ ಕಡಂದಲೆ ಸುರೇಶ್‌ ಭಂಡಾರಿ, ಎಸ್‌. ಎನ್‌. ಉಡುಪ ಹಾಗೂ ಅತಿಥಿ ಗಣ್ಯರು ಸೇರಿ ಲಕುಮಿ ತಂಡದ ಕಲಾವಿದ ಎಚ್‌. ಕೆ. ನಯನಾಡು ಅವರನ್ನು ಸಮ್ಮಾನಿಸಲಾಯಿತು.

ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನದ ಪರವಾಗಿ ಅರವಿಂದ್‌ ಬೋಳಾರ್‌ ಅವರನ್ನು ಸಮ್ಮಾನಿಸಲಾಯಿತು. ಹೊಟೇಲ್‌ ಉದ್ಯಮಿ ಯಶವಂತ್‌ ಶೆಟ್ಟಿ ಅವರು ಮಾತನಾಡಿ, ಮುಂಬಯಿ ಮಹಾನಗರದ ತುಳು-ಕನ್ನಡಿಗರು ಕಲೆಗೆ ಹಾಗೂ ಕಲಾವಿದರಿಗೆ ಹಿಂದಿನಿಂದಲೂ ತುಂಬಾ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ. ಅದೊಂದು ಸಮಯದಲ್ಲಿ ಮಾಟುಂಗ ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಒಂದೇ ದಿನದಲ್ಲಿ ಮೂರ್‍ನಾಲ್ಕು ನಾಟಕ ಪ್ರದರ್ಶನಗೊಳ್ಳುತ್ತಿತ್ತು. ತಿಂಗಳುಗಟ್ಟಲೆ ನಾಟಕ, ಯಯಕ್ಷಗಾನ ಪ್ರದರ್ಶನ ನಡೆದರೂ ಪ್ರೇಕ್ಷಕರ ದಂಡು ಸಭಾಗೃಹದತ್ತ ದೌಡಾಯಿಸುತ್ತಿದ್ದು ಕಂಡು ಬರುತ್ತಿತ್ತು. ನಾವೆಲ್ಲಾ ಕಲೆಯನ್ನು ಉಳಿಸಿ-ಬೆಳೆಸಲು ಪ್ರಯತ್ನಶೀಲರಾಗಿರುವ ಕಲಾ ಸಂಘಟಕರಿಗೆ ಪ್ರೋತ್ಸಾಹ ನೀಡಬೇಕು ಎಂದರು.

ವೇದಿಕೆಯಲ್ಲಿ ಅತಿಥಿಗಳಾಗಿ ತೀಯಾ ಸಮಾಜ ಮುಂಬಯಿ ಅಧ್ಯಕ್ಷ ರವೀಂದ್ರ ಮಂಜೇಶ್ವರ, ಕಲಾ ಪೋಷಕ ಸಂತೋಷ್‌ ಶೆಟ್ಟಿ, ಉದ್ಯಮಿ ಧನಂಜಯ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಲಕುಮಿ ತಂಡದ ಮುಂಬಯಿ ಸಂಚಾಲಕ, ಕಲಾ ಸಂಘಟಕ ಕರ್ನೂರು ಮೋಹನ್‌ ರೈ ನಿರೂಪಿಸಿದರು. ಶ್ರೀ ಗೀತಾಂಬಿಕಾ ಮಂದಿರದ ಉಪಾಧ್ಯಕ್ಷ ಸತೀಶ್‌ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಕೋಟ್ಯಾನ್‌, ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿಯ ಸಂಚಾಲಕ ಸುನಿಲ್‌ ಅಮೀನ್‌, ಕಲಾವಿದ ಪ್ರಭಾಕರ ಕುಂದರ್‌ ಸಹಕರಿಸಿದರು. ಅಪಾರ ಸಂಖ್ಯೆಯಲ್ಲಿ ಕಲಾ ರಸಿಕರು ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ