“ರಾಜ್ಯದ ಅಭಿವೃದ್ಧಿಯಲ್ಲಿ ತುಳು-ಕನ್ನಡಿಗರ ಪಾತ್ರ ಪ್ರಮುಖ’

ಕಲ್ಯಾಣ್‌ ಕರ್ನಾಟಕ ಸಂಘದ ವತಿಯಿಂದ ನಡೆದ ಮಹಾರಾಷ್ಟ್ರ ದಿನಾಚರಣೆಯಲ್ಲಿ ಮೀನಾಕ್ಷೀ ಆರ್‌. ಶಿಂಧೆ

Team Udayavani, May 9, 2019, 12:29 PM IST

ಕಲ್ಯಾಣ್‌: ವಿಶ್ವದ ಮೂಲೆ ಮೂಲೆಗಳಲ್ಲಿ ವಾಸಿಸುವ ಕನ್ನಡಿಗರು ತಮ್ಮದೇ ಆದ ಕನ್ನಡಪರ, ಜಾತೀಯ ಸಂಘಟನೆಗಳನ್ನು ಸ್ಥಾಪಿಸಿಕೊಳ್ಳುವ ಮೂಲಕ ತಾಯ್ನಾಡಿನ ಶ್ರೀಮಂತ ಸಂಸ್ಕೃತಿ ಹಾಗೂ ಕಲೆಯನ್ನು ಪರಿಚಯಿಸುವುದರ ಜತೆ ಮಣ್ಣಿನ ಸಾಂಸ್ಕೃತಿಕ ಪರಂಪರೆಯನ್ನು ತಮ್ಮದಾಗಿಸಿಕೊಳ್ಳುವ ಹೃದಯ ವೈಶಾಲ್ಯತೆಯನ್ನು ಮೆರೆಯುತ್ತಿ ರುವುದು ಅಭಿನಂದನೀಯ ಮತ್ತು ಅನುಕರಣೀಯವಾಗಿದೆ. ಮರಾಠಿ ಮಣ್ಣಿಗೆ ಕಾಲಿಟ್ಟ ತುಳು-ಕನ್ನಡಿಗರು ಇಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ, ಮಾಡುತ್ತಿರುವ ಸಾಧನೆ ಅಪಾರವಾಗಿದೆ. ಮಹಾರಾಷ್ಟ್ರದ ಅಭಿವೃದ್ಧಿಯಲ್ಲಿ ತುಳು-ಕನ್ನಡಿಗರ ಪಾತ್ರ ಮಹತ್ತರವಾಗಿದೆ ಎಂದು ಥಾಣೆ ಮಹಾನಗರ ಪಾಲಿಕೆಯ ಮಹಾಪೌರೆ ತುಳು-ಕನ್ನಡತಿ ಮೀನಾಕ್ಷೀ ಆರ್‌. ಶಿಂಧೆ ಹೇಳಿದ್ದಾರೆ.

ಮೇ 3ರಂದು ಸಂಜೆ ಕಲ್ಯಾಣ್‌ನ ಗಿರಿಜಾ ಪಯ್ಯಡೆ ಸಭಾಗೃಹದಲ್ಲಿ ಕಲ್ಯಾಣ್‌ ಕರ್ನಾಟಕ ಸಂಘ ಆಯೋಜಿಸಿದ್ದ ವಾರ್ಷಿಕ ಮಹಾರಾಷ್ಟ್ರ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ನಾವು ಎಲ್ಲಿ ಇದ್ದರೂ ಅಲ್ಲಿಯ ಜನಜೀವನ, ಸಂಸ್ಕೃತಿ ಹಾಗೂ ಕಲೆಯನ್ನು ಪ್ರೀತಿಸಿ, ಗೌರವಿಸಬೇಕು ಎಂಬುದನ್ನು ನಮ್ಮ ಕನ್ನಡ ನಾಡಿನ ಪರಂಪರೆಯಿಂದ ಕಲಿತಿದ್ದೇವೆ. ಕರ್ನಾಟಕ ನಮ್ಮ ಜನ್ಮಭೂಮಿಯಾದರೆ, ಮಹಾರಾಷ್ಟ್ರ ಕರ್ಮಭೂಮಿಯಾಗಿದ್ದು, ನಾವೆಲ್ಲರೂ ಕನ್ನಡ ಮತ್ತು ಮರಾಠಿಗರ ಮಧುರ ಬಾಂಧವ್ಯದ ಕೊಂಡಿಗಳಾಗೋಣ. ಕಲ್ಯಾಣ್‌ ಕರ್ನಾಟಕ ಸಂಘ ಸಿದ್ಧಿ-ಸಾಧನೆಗಳನ್ನು ಹತ್ತಿರದಿಂದ ಕಾಣುವ ಸೌಭಾಗ್ಯ ಇಂದು ದೊರೆಯಿತು. ಸಂಘದ ಶೈಕ್ಷಣಿಕವಾಗಿ, ಸಾಮಾ ಜಿಕವಾಗಿ, ಸಾಂಸ್ಕೃತಿಕವಾಗಿ ಮಾಡುತ್ತಿರುವ ಕಾರ್ಯಕ್ರಮಗಳು ಇತರರಿಗೆ ಮಾದರಿಯಾಗಿವೆ. ಒಗ್ಗಟ್ಟು ಮತ್ತು ಒಮ್ಮತದಿಂದ ಸಂಸ್ಥೆಯನ್ನು ಇನ್ನಷ್ಟು ಬಲವರ್ಧಿಸುವಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗುವಂತೆ ಕರೆ ನೀಡಿದರು.

ಇನ್ನೋರ್ವ ಅತಿಥಿ ಕಲ್ಯಾಣ್‌ ಜಾಸ್ಮಿನ್‌ ಕೋ ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ಡಾ| ಸುರೇಂದ್ರ ಶೆಟ್ಟಿ ಮಾತನಾಡಿ, ಕರ್ನಾಟಕ ನಮ್ಮ ನಾವು ಹುಟ್ಟಿದ ಜಾಗವಾಗಿದೆ ಹಾಗೂ ಮಹಾರಾಷ್ಟ್ರ ಅನ್ನ ನೀಡುವ ಜಾಗವಾಗಿದೆ. ಮಹಾರಾಷ್ಟ್ರ ಈ ಪವಿತ್ರ ಭೂಮಿ ನಮಗೆಲ್ಲವನ್ನು ನೀಡಿದ್ದು, ಜನ್ಮಭೂಮಿಯಂತೆ ಕರ್ಮಭೂಮಿಯನ್ನೂ ಗೌರವಿಸೋಣ. ಸಾಮರಸ್ಯದ ಬದುಕನ್ನು ಸಾಗಿಸಿ ಇತರರಿಗೆ ಮಾದರಿಯಾಗೋಣ. ಕಲ್ಯಾಣ್‌ ಕರ್ನಾಟಕ ಸಂಘಕ್ಕೂ ನನಗೂ ಅವಿನಾಭಾವ ಸಂಬಂಧ ವಿದ್ದು, ಸಂಘದ ಪ್ರತಿಯೊಂದು ಸಮಾಜಪರ ಕಾರ್ಯಗಳಿಗೆ ನನ್ನ ಪ್ರೋತ್ಸಾಹ, ಸಹಕಾರ ಸದಾಯಿದೆ ಎಂದು ನುಡಿದರು.

ಕಲ್ಯಾಣ್‌ ಕರ್ನಾಟಕ ಸಂಘದ ಸಂಸ್ಥಾಪಕಾಧ್ಯಕ್ಷ ನಂದಾ ಶೆಟ್ಟಿ ಅವರು ಮಾತನಾಡಿ, ಸತತ

ಪ್ರಯತ್ನ ಅಗಮ್ಯ ಇಚ್ಛಾಶಕ್ತಿಯ ಸಾಧನೆಯು ಉತ್ತುಂಗ ಶಿಖರವನ್ನೇರಲು ಪ್ರೇರೇಪಿಸುತ್ತದೆ. ಇದಕ್ಕೆ ನಿದರ್ಶನ ಕಲ್ಯಾಣ್‌ ಕರ್ನಾಟಕ ಸಂಘವಾಗಿದೆ. ಮರಾಠಿ ಮಣ್ಣಿನಲ್ಲಿ ತುಳು-ಕನ್ನಡಿಗರ ಸಾಧನೆ ಆದರ್ಶಪ್ರಾಯವಾಗಿದ್ದು, ಆದ್ದರಿಂದ ಮಹಾರಾಷ್ಟ್ರದ ಮಣ್ಣಿಗೆ ನಾವೆಲ್ಲರೂ ಚಿರಋಣಿಯಾಗಿದ್ದೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಗಣ್ಯರಾದ ಪ್ರೊ| ಬಿ ಸಿ. ದಿಘೆ ಮತ್ತು ಡಾ| ಅರುಣಾ ದಿಘೆ ದಂಪತಿಯನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು. ವೇದಿಕೆಯಲ್ಲಿ ಕಲ್ಯಾಣ್‌ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಗೋಪಾಲ್‌ ಹೆಗ್ಡೆ, ಇತರ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಕಲ್ಯಾಣ್‌ ಕರ್ನಾಟಕ ಸಂಘದ ಅಧ್ಯಕ್ಷೆ ದರ್ಶನಾ ಸೋನ್ಕರ್‌ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಸಿದ್ಧಿ-ಸಾಧನೆಗಳನ್ನು ವಿವರಿಸಿ ಸಂಸ್ಥೆಯ ನಾಡು-ನುಡಿಯಪರ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರವಿರಲಿ. ನಮ್ಮ ಸಂಘವು ಮರಾಠಿ-ಕನ್ನಡ ಬಾಂಧವರ ಮಧುರ ಬಾಂಧವ್ಯದ ಸಂಕೇತವಾಗಿದ್ದು, ಸಂಘದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮಹಾನೀಯರು ಅಭಿನಂದನೀಯರು ಎಂದು ನುಡಿದು ಕೃತಜ್ಞತೆ ಸಲ್ಲಿಸಿದರು.

ಕಲಾವಿದ ಕೆ. ಎನ್‌. ಸತೀಶ್‌, ಗುರುರಾಜ ಕಾಂಜಿಕರ, ಆಶಾ ನಾಯಕ್‌, ವಿಭಾ ದೇಶು¾ಖ್‌ ಅವರು ಪ್ರಾರ್ಥನೆಗೈದರು. ಮಹಾರಾಷ್ಟ್ರ ನಾಡಗೀತೆಯೊಂದಿಗೆ ಕಾರ್ಯಕ್ರಮವನ್ನು ಗಣ್ಯರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಗಣ್ಯರಾದ ಟಿ. ಎಸ್‌. ಉಪಾಧ್ಯಾಯ, ಗೋಪಾಲ ಹೆಗ್ಡೆ, ರಮೇಶ್‌ ಶೆಟ್ಟಿ, ಜಗನ್ನಾಥ ಶೆಟ್ಟಿ ಅವರು ಉಪಸ್ಥಿತರಿದ್ದರು. ಮರಾಠಿ ಹಾಗೂ ತುಳು-ಕನ್ನಡಿಗ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯ-ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಚಿತ್ರ-ವರದಿ: ಗುರುರಾಜ ಪೋತನೀಸ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ