ನಲಸೋಪರ ತುಳು ಒಕ್ಕೂಟ:ಪೂರ್ವಭಾವಿ ಸಭೆ

Team Udayavani, Mar 2, 2018, 4:59 PM IST

ನಲಸೋಪರ: ತುಳುವರು ಒಗ್ಗಟ್ಟಾಗಿ ತುಳು ಒಕ್ಕೂಟ ಸ್ಥಾಪಿಸುವ ವಿಷಯವಾಗಿ ನಲಸೋಪರ ತುಳು ಒಕ್ಕೂಟದ ವತಿಯಿಂದ ಪೂರ್ವಭಾವಿ ಸಭೆಯು ಇತ್ತೀಚೆಗೆ ನಲಸೋಪರ ಪೂರ್ವ ರೀಜೆನ್ಸಿ ಬ್ಯಾಂಕ್ವೆಟ್‌ ಹಾಲ್‌ನಲ್ಲಿ  ಜರಗಿತು.

ಸಭೆಯನ್ನು  ಬಂಟರ ಸಂಘದ ವಸಾಯಿ -ಡಹಾಣು ಪ್ರಾದೇಶಿಕ ಸಮಿತಿಯ ಕಾರಾಧ್ಯಕ್ಷ  ಜಯಂತ್‌ ಆರ್‌. ಪಕ್ಕಳ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ತುಳು ಒಕ್ಕೂಟ ಸ್ಥಾಪನೆಯ ಮೂಲ ಉದ್ದೇಶವೇನೆಂದರೆ  ಈ ಪರಿಸರದ ಸರ್ವ ಸಮಾಜದ ತುಳು ಬಾಂಧವರನ್ನು  ಒಗ್ಗೂಡಿಸುವುದರೊಂದಿಗೆ ಅವರ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯ ಮಾಡಲಿದೆ.  ಈ ಸಂಸ್ಥೆಯಲ್ಲಿ ಎಲ್ಲ ಜಾತಿ ಬಾಂಧವರು ಒಮ್ಮತದಿಂದ ಸೇವೆ ಸಲ್ಲಿಸಬೇಕು ಎಂದರು.

ಬಿಲ್ಲವರ ಅಸೋಸಿಯೇಶನ್‌ ವಿರಾರ್‌- ನಲಸೋಪರ ಸಮಿತಿಯ ಕಾರ್ಯಾಧ್ಯಕ್ಷ  ಕೋಡಿ ಗೋಪಾಲ ಪೂಜಾರಿ ಮಾತನಾಡಿ, ತುಳು ಒಕ್ಕೂಟದ ಉದ್ದೇಶ ಅರ್ಥಪೂರ್ಣವಾಗಿದೆ. ಪ್ರಥಮ ಸಭೆಯಲ್ಲಯೇ ನಾವೆಲ್ಲರೂ ಇಷ್ಟು  ಸಂಖ್ಯೆಯಲ್ಲಿ ಸೇರಿಕೊಂಡಿದ್ದೇವೆ. ಮುಂದೆ ಎಲ್ಲಾ  ತುಳುವರಿಗೂ ಈ ಸಂಸ್ಥೆ ಆಶ್ರಯ ತಾಣವಾಗಲಿ ಎಂದರು.

ಶ್ರೀ ದೇವಿ ಯಕ್ಷ ನಿಲಯ ನಲಾಸೋಪಾರದ ಅಧ್ಯಕ್ಷ ಶಶಿಧರ್‌ ಕೆ. ಶೆಟ್ಟಿ ಅವರು ತನ್ನ ಅಭಿಪ್ರಾಯ ತಿಳಿಸಿ, ಬಹಳ ವರ್ಷಗಳಿಂದ ತುಳು ಒಕ್ಕೂಟವನ್ನು ಸ್ಥಾಪಿಸುವ ಉದ್ದೇಶವಿತ್ತು. ಆದರೆ ಈಗ ಕಾಲ ಕೂಡಿ ಬಂದಿದೆ. ಈ ಸಂಸ್ಥೆ ಯಾವುದೇ ಸಂಘಟನೆಗೆ ಪೈಪೋಟಿ ನೀಡಲು ಹುಟ್ಟಿಕೊಂಡಿಲ್ಲ. ತುಳುವರನ್ನೆಲ್ಲಾ ಒಂದೇ ವೇದಿಕೆಯಲ್ಲಿ ತರುವುದೇ ನಮ್ಮ ಉದ್ದೇಶವಾಗಿದೆ. ಶಿಕ್ಷಣ, ಸಮಾಜ ಕಲ್ಯಾಣಕ್ಕೆ ಸಂಸ್ಥೆಯು ಹೆಚ್ಚು ಒತ್ತು ನೀಡಲಿದೆ ಎಂದರು.
ಬಿಲ್ಲವರ ಅಸೋಸಿಯೇಶನ  ವಿರಾರ್‌- ನಲಸೋಪರ ಸಮಿತಿಯ ಮಾಜಿ 

ಕಾರ್ಯಾಧ್ಯಕ್ಷ ಗಣೇಶ್‌ ಸುವರ್ಣ ಮಾತನಾಡಿ, ತುಳು ಒಕ್ಕೂಟದ ಉದ್ದೇಶಗಳು ಮಹತ್ತರವಾಗಿದೆ. ಆ ಮೂಲಕ ತುಳುವರ ಸಮಸ್ಯೆಗಳಿಗೆ ಸ್ಪಂದಿಸುವ ಸಂಘಟನೆಯ ಅಗತ್ಯವಿದೆ ಎಂದರು.

ನೂತನ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾದ ರಮೇಶ್‌ ವಿ. ಶೆಟ್ಟಿ ಕಾಪು ಮಾತನಾಡಿ, ನಮ್ಮ ನಾಡಿನಲ್ಲಿ  ಅನೇಕ ಪುಣ್ಯಯ ಕ್ಷೇತ್ರಗಳಿವೆ. ಭಾಷೆ ಮತ್ತು ಸಂಸ್ಕೃತಿಯಲ್ಲಿ  ಇತಿಹಾಸ ಪರಂಪರೆಯಿದೆ. ಅದನ್ನು ಇಂಗ್ಲಿಷ್‌ ಮಾಧ್ಯಮದಲ್ಲಿ  ಕಲಿಯುತ್ತಿರುವ ಯುವ ತುಳು ಬಾಂಧವರಿಗೆ ಅರಿವು ಮೂಡಿಸುವಂತಹ ಕಾರ್ಯಕ್ಕೆ ತುಳುವರ ಸಂಘಟನೆಯೊಂದರ ಅಗತ್ಯವಿದೆ. ಬೇರೆ ಬೇರೆ ಸಂಘಟನೆಗಳ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನನಗೆ ನೀಡಿದ ಜವಾಬ್ದಾರಿಯನ್ನು ನಿಮ್ಮೆಲ್ಲರ ಮಾರ್ಗದರ್ಶನದಲ್ಲಿ ಮುನ್ನಡೆಸುತ್ತೇನೆ ಎಂದು ನುಡಿದರು.

ವೇದಿಕೆಯಲ್ಲಿ ಕುಲಾಲ ಸಂಘದ ಮೀರಾ – ವಿರಾರ್‌ ಸಮಿತಿಯ ಕಾರ್ಯದರ್ಶಿ ಮೋಹನ ಬಂಜನ್‌ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರವೀಣ್‌ ಶೆಟ್ಟಿ ಕಣಂಜಾರು ನಿರೂಪಿಸಿ ವಂದಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ