ಆಮ್ಲಜನಕ ಯೋಜನೆ ಉದ್ಘಾಟನೆ
Team Udayavani, May 19, 2021, 1:40 PM IST
ಮೀರಾ-ಭಾಯಂದರ್: ಆಮ್ಲಜನಕ ಕೊರತೆ ನೀಗಿಸಲು ಭಾಯಂದರ್ ಪಶ್ಚಿಮದ ಪಂಡಿತ್ ಭೀಮ್‌ಸೇನ್ ಜೋಶಿ ಆಸ್ಪತ್ರೆಯಲ್ಲಿ ಆಮ್ಲಜನಕ ಯೋಜನೆ ಸ್ಥಾಪಿಸ ಲಾಗಿದ್ದು, ಭವಿಷ್ಯದಲ್ಲಿ 120 ಆಮ್ಲಜನಕ ಹಾಸಿಗೆಗಳನ್ನು ಒದಗಿಸಲಿದೆ. ಇದಕ್ಕಾಗಿ ಪುರಸಭೆ ಆಡಳಿತವು 1.80 ಕೋಟಿ ರೂ. ಗಳನ್ನು ವ್ಯಯಿಸಲಿದೆ.
ಮೀರಾ – ಭಾಯಂದರ್ ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ರೋಗಿಗಳ ದೃಷ್ಟಿ ಯಿಂದ ಸೋಮವಾರ ಉಸ್ತುವಾರಿ ಸಚಿವ ಏಕನಾಥ್ ಶಿಂಧೆ ಅವರು ರಿಬ್ಬನ್ ಕತ್ತರಿಸಿ ಯೋಜನೆಯನ್ನು ಉದ್ಘಾಟಿಸಿದರು. ಕಳೆದ ಎರಡು ದಿನಗಳಿಂದ ಚಂಡಮಾರುತದ ಹಿನ್ನೆಲೆ ಆಡಳಿತವು ಮುನ್ನೆಚ್ಚರಿಕೆಗಾಗಿ ನಿರಂತರವಾಗಿ ಜಾಗರೂಕತೆಯಿಂದ ಕರೆ ನೀಡುತ್ತಿರುವುದರಿಂದ ಈ ಉದ್ಘಾಟನ ಕಾರ್ಯಕ್ರಮದ ನಡೆಯುವ ಬಗ್ಗೆ ಅನಿಶ್ಚಿತತೆ ಇತ್ತು. ಭಾರೀ ಬಿರುಗಾಳಿ ಮತ್ತು ಧಾರಾಕಾರ ಮಳೆಯ ನಡುವೆ ಮೇಯರ್ ಜ್ಯೋಸ್ಟ್ನಾ ಹಸ್ನಾಲೆ, ಸಂಸದ ರಾಜನ್ ವಿಚಾರೆ, ಶಾಸಕ ಗೀತಾ ಜೈನ್, ಪುರಸಭೆ ಆಯುಕ್ತ ದಿಲೀಪ್ ಧೋಲ್ ಮತ್ತು ಪುರಸಭೆ ಆಡಳಿತಾಧಿಕಾರಿಗಳು ಮತ್ತು ಶಿವಸೇನೆ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವಿಪಕ್ಷಗಳಿಂದ ಟೀಕೆ
ಚಂಡಮಾರುತ ಸಮಯದಲ್ಲಿಯೂ ಆಡಳಿತ ಅಧಿಕಾರಿಗಳು ಆಮ್ಲಜನಕ ಯೋಜನೆಯ ಉದ್ಘಾಟನೆಗೆ ಸೇರಿದ್ದರು. ಒಂದೆಡೆ ರಾಜ್ಯದಲ್ಲಿ ಲಾಕ್‌ಡೌನ್ ಕಟ್ಟುನಿಟ್ಟಿನ ನಿರ್ಬಂಧಗಳು ಮತ್ತು ಮುಂಬಯಿಯಲ್ಲಿ ಚಂಡಮಾರುತ ಕುರಿತಾದ ಎಚ್ಚರಿಕೆಗಳ ಹೊರತಾಗಿಯೂ ಸಚಿವರು ಸಹಿತ ನಾಯಕರು ಮತ್ತು ಆಡಳಿತ ಅಧಿಕಾರಿಗಳಿಂದ ತುಂಬಿ ತುಳುಕುತ್ತಿದ್ದ ಈ ಸಮಾರಂಭವು ಇದೀಗ ವಿಪಕ್ಷಗಳ ಟೀಕೆಗೆ ಗುರಿಯಾಗಿದೆ.