ಮಕ್ಕಳ ಪ್ರತಿಭೆ ಪ್ರೋತ್ಸಾಹಿಸುವುದು ನಮ್ಮ ಧ್ಯೇಯ: ವಿಶ್ವನಾಥ ಶೆಟ್ಟಿ

Team Udayavani, Sep 6, 2019, 4:10 PM IST

ಮುಂಬಯಿ, ಸೆ. 5: ಯುವ ಸಮುದಾಯಕ್ಕೆ ವಿವಿಧ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹಲವಾರು ಅವಕಾಶಗಳಿರುತ್ತವೆ. ಆದರೆ ಚಿಕ್ಕ ಮಕ್ಕಳಿಗೆ ಅಂತಹ ಅವಕಾಶಗಳು ವಿರಳ. ಈ ನಿಟ್ಟಿನಲ್ಲಿ ಕುರ್ಲಾ-ಭಾಂಡುಪ್‌ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗವು ಮಕ್ಕಳಿಗಾಗಿ ಆಯೋಜಿಸಿದ ಚಿತ್ರಕಲಾ ಹಾಗೂ ರಸ ಪ್ರಶ್ನೆ ಸ್ಪರ್ಧೆ ತುಂಬಾ ಅರ್ಥಪೂರ್ಣ ಹಾಗೂ ಶ್ಲಾಘನೀಯವಾಗಿದೆ. ಮಾತ್ರವಲ್ಲದೆ ಈ ಕಾರ್ಯಕ್ರಮವು ಬಂಟರ ಸಂಘದ ಅನ್ಯ ಪ್ರಾದೇಶಿಕ ಸಮಿತಿಯ ಕಾರ್ಯಕ್ರಮಗಳಿಗೆ ಮಾದರಿಯಾಗಿದೆ. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಮಾ ಉದಯ ಶೆಟ್ಟಿ ಮತ್ತು ಪದಾಧಿಕಾರಿಗಳಿಗೆ ಅಭಿನಂದನೆಗಳು. ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಮಕ್ಕಳಲ್ಲಿ ಅಡಕವಾಗಿರುವ ಪ್ರತಿಭೆಗಳಿಗೆ ಪ್ರೋತ್ಸಾಹವನ್ನು ನಿರಂತರ ನೀಡುತ್ತೀರಿ ಎಂದು ಬಂಟರ ಸಂಘ ಮುಂಬಯಿ ಕುರ್ಲಾ – ಭಾಂಡುಪ್‌ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಸಿಎ ವಿಶ್ವನಾಥ ಶೆಟ್ಟಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಆ. 18ರಂದು ಘಾಟ್ಕೋಪರ್‌ ಪೂರ್ವದ ಕನ್ನಡ ವೈಲ್ಫೇರ್‌ ಸೊಸೈಟಿಯ ಮಹೇಶ್‌ ಎಸ್‌. ಶೆಟ್ಟಿ ಸಭಾಗೃಹದಲ್ಲಿ ಬಂಟರ ಸಂಘ ಕುರ್ಲಾ – ಭಾಂಡುಪ್‌ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಆಯೋಜನೆಯಲ್ಲಿ ಬಂಟ ಮಕ್ಕಳಿಗಾಗಿ ಜರಗಿದ ಚಿತ್ರಕಲಾ ಹಾಗೂ ರಸಪ್ರಶ್ನೆ ಸ್ಪರ್ಧೆಯ ಬಹುಮಾನ ವಿತರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದು ಯುವ ಜನತೆಯಲ್ಲಿ ನಮ್ಮ ನಾಡು, ನುಡಿ, ಸಂಸ್ಕೃತಿಯ ಚಿಂತನೆ ಕಡಿಮೆಯಾಗುತ್ತಿದ್ದು, ಇದರ ಅರಿವನ್ನು ಎಳವೆಯಲ್ಲಿಯೇ ಮಕ್ಕಳಿಗೆ ಕಲಿಸಿ ಬೆಳಸಿದರೆ ಮುಂದಿನ ಪೀಳಿಗೆಗೆ ದಾರಿದೀಪವಾಗುತ್ತದೆ. ಅದಕ್ಕೆಲ್ಲಾ ಮಹಿಳೆಯರು ಸತತ ಪ್ರಯತ್ನ ಮಾಡಬೇಕು. ಮಕ್ಕಳು ಎಲ್ಲವನ್ನೂ ಕಲಿಯುತ್ತಾರೆ ಆದರೆ ಕಲಿಸುವ ಜಾಣ್ಮೆ ಪಾಲಕರಲ್ಲಿ ಇರಬೇಕು ಎಂದು ಕಿವಿಮಾತು ಹೇಳಿದರು.

ಮೂರು ವಿಭಾಗದಲ್ಲಿ ಜರಗಿದ ಚಿತ್ರಕಲಾ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ಬಂಟ ಸಮಾಜದ ಸುಮಾರು 50 ಮಕ್ಕಳು ಭಾಗವಹಿಸಿದರು. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಮಾ ಉದಯ ಶೆಟ್ಟಿ ಅವರು, ನಮ್ಮೀ ಮಹಿಳಾ ವಿಭಾಗದ ವತಿಯಿಂದ, ಸಾಂಸ್ಕೃತಿಕ, ಸಾಮಾಜಿಕ, ಕಾರ್ಯಕ್ರಮಗಳಲ್ಲದೆ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದ್ದು, ಈ ಬಾರಿ ಮಕ್ಕಳಿಗಾಗಿ ಈ ಸ್ಪರ್ಧೆಯನ್ನು ಆಯೋಜಿಸಿದ್ದೇವೆ. ಇದರ ಮುಖ್ಯ ಉದ್ದೇಶ ಪಾಲಕರು ಮಕ್ಕಳಿಗೆ ಓದು ಬರಹದ ಜತೆಗೆ ಪಕ್ಷೇತರ ಚಟುವಟಿಕೆ ಹಾಗೂ ಸಾಮಾನ್ಯ ಜ್ಞಾನವನ್ನು ಹೊಂದಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು. ಸ್ಫರ್ಧೆಯಲ್ಲಿ ಬಹುಮಾನ ಪಡೆಯುವುದು ಮಾತ್ರ ಸಾಧನೆ ಅಲ್ಲ. ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಸ್ಪರ್ಧೆಯಲ್ಲಿ ಭಾಗವಹಿಸುವುದೂ ಮುಖ್ಯ ಆದ್ದರಿಂದ ಪಾಲಕರು ತಮ್ಮ ಮಕ್ಕಳಿಗೆ ಪಾಠದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಭಾಗವಹಿಸಲು ಪ್ರೋತ್ಸಾಹ ಬೆಂಬಲ ನೀಡಬೇಕು. ಈ ಕಾರ್ಯಕ್ರಮಕ್ಕೆ ನನ್ನೊಂದಿಗೆ ಸಹಕಾರ ಪ್ರೋತ್ಸಾಹವನ್ನಿತ್ತ ಪದಾಧಿಕಾರಿಗಳೆಲ್ಲಗೂ ಕೃತಜ್ಞತೆಗಳು ಎಂದು ನುಡಿದರು.

ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಆಗಮಿಸಿದ ವೀಕೇಸ್‌ ಇಂಗ್ಲಿಷ್‌ ಹಿರಿಯ ಶಾಲೆಯ ಮುಖ್ಯೋಪಾಧ್ಯಾಯಿನಿ ಪುಷ್ಪಲತಾ ರೈ ಮಾತನಾಡಿ, ಸಣ್ಣ ಮಕ್ಕಳಿಗೆ ಬಣ್ಣವೆಂದರೆ ತುಂಬಾ ಇಷ್ಟ. ಇಲ್ಲಿ ಮಕ್ಕಳು ಸ್ಪರ್ಧೆಯನ್ನು ಆಟವೆಂದು ಬೆರೆತು ಸಂತಸಪಡುವುದೇ ನಮ್ಮ ಕಣ್ಣಿಗೆ ಆನಂದ. ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳ ಮುಖೇನ ತೆರೆ ಮರೆಯಲ್ಲಿರುವ ಹಲವಾರು ಪ್ರತಿಭೆಗಳಿಗೆ ವೇದಿಕೆ ದೊರಕುತ್ತದೆ ಎಂದು ತಿಳಿಸಿದರು.

ಅತಿಥಿಯಾಗಿ ಆಗಮಿಸಿದ ಮಹಿಳಾ ವಿಭಾಗದ ನಿಕಟಪೂರ್ವ ಕಾರ್ಯಾಧ್ಯಕ್ಷೆ ಸರೋಜಾ ಶೆಟ್ಟಿಅವರು ಮಾತನಾಡಿ, ಇಂತಹ ಕಾರ್ಯಕ್ರಮದಲ್ಲಿ ಮಕ್ಕಳ ನಗು ಮುಖ ಕಾಣುವುದೇ ಒಂದು ಆನಂದ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂತಸವಾಯಿತು ಎಂದು ನುಡಿದರು. ಇನ್ನೋರ್ವ ಅತಿಥಿ ಉದ್ಯಮಿ ಶಿವಣ್ಣ ಶೆಟ್ಟಿಯವರು ಮಾತನಾಡಿ, ಮಹಿಳಾ ವಿಭಾಗದ ಪ್ರತಿಯೊಂದು ಕಾರ್ಯಕ್ರಮವು ತುಂಬಾ ಅರ್ಥಪೂರ್ಣ. ಇಂತಹ ಕಾರ್ಯಕ್ರಮ ಸ್ಪರ್ಧೆಗಳು ನಿರಂತರ ವಾಗಿ ನಡೆಯುತ್ತಿರಲು ನಮ್ಮ ಪ್ರೋತ್ಸಾಹ ಸದಾ ಇದೆ ಎಂದರು.

ಪ್ರಾದೇಶಿಕ ಸಮಿತಿಯ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷರಾದ ನವೀನ್‌ ಶೆಟ್ಟಿ ಇನ್ನಾಬಾಳಿಕೆ ಮಾತನಾಡಿ, ನಮ್ಮ ಬಾಲ್ಯದ ಶಾಲಾ ದಿನಗಳು ತುಂಬಾ ಕಷ್ಟಕರವಾಗಿತ್ತು. ಅಂದು ಇಂದಿನಂತೆ ಅಂತರ್ಜಾಲ, ಮೊಬೈಲ್, ಸಾಮಾಜಿಕ ಜಾಲತಾಣಗಳು ಇರಲಿಲ್ಲ. ನಮ್ಮ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕೂಡ ಸಿಗುತ್ತಿರಲಿಲ್ಲ. ಆದರೆ ಈಗ ಕಾಲಕ್ಕೆ ತಕ್ಕಂತೆ ಪರಿಸ್ಥಿತಿ ಬದಲಾಗಿದೆ. ಯಾಂತ್ರಿಕತೆಯ ಸೋಗಿನಲ್ಲಿ ಸಂಸ್ಕೃತಿ, ಸಂಸ್ಕಾರಗಳು ಮರೆಯಾಗುತ್ತಿವೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಸ್ಪರ್ಧೆ ಹಾಗೂ ನಾಡು, ನುಡಿ, ಆಚಾರ ವಿಚಾರದ ಅರಿವನ್ನು ಎಳವೆಯಲ್ಲಿ ಮಕ್ಕಳಿಗೆ ತಿಳಿ‌ಹೇಳಬೇಕು. ಈ ನಿಟ್ಟಿನಲ್ಲಿ ಚಿತ್ರಕಲಾ, ರಸಪ್ರಶ್ನೆ ಸ್ಪರ್ಧೆಗಳು ಮಕ್ಕಳ ವ್ಯಕ್ತಿತ್ವ ವಿಕಸದ ಜತೆಗೆ ಪ್ರತಿಭಾಶಾಲಿಗಳಾಗಲು ಪ್ರೇರಣೆಯಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸಂಗೀತಾ ಶೆಟ್ಟಿ, ಕಾರ್ಯದರ್ಶಿ ಅಮೃತಾ ಶೆಟ್ಟಿ, ಕೋಶಾಧಿಕಾರಿ ಪಲ್ಲವಿ ಶೆಟ್ಟಿ ಉಪಸ್ಥಿತರಿದ್ದರು. ವಿಜೇತರ ಯಾದಿಯನ್ನು ನವೀನ್‌ ಶೆಟ್ಟಿ ಇನ್ನಬಾಳಿಕೆ ವಾಚಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಬಹುಮಾನವನ್ನಿತ್ತು ಗೌರವಿಸಲಾಯಿತು. ರಸಪ್ರಶ್ನೆಯ ತೀರ್ಪುಗಾರರಾಗಿ ದಿಶಾ ರೈ, ಚಿತ್ರಕಲೆಯ ತೀರ್ಪುಗಾರರಾಗಿ ವಿಕ್ರೋಲಿ ವಿಕೇಸ್‌ ಇಂಗ್ಲಿಷ್‌ ಶಾಲೆಯ ಚಿತ್ರಕಲಾ ಅಧ್ಯಾಪಕಿ ಸವಿತಾ ಇವರು ಸಹಕರಿಸಿದರು.

ಸ್ಪರ್ಧೆಯ ಶ್ರೇಯಸ್ಸಿಗೆ ತನಿಕ್ಷಾ ಶೆಟ್ಟಿ, ಸ್ವಾತಿ ಶೆಟ್ಟಿ, ಅಕ್ಷತಾ ಶೆಟ್ಟಿ ಸಹಕರಿಸಿದರು. ಅತಿಥಿ-ಗಣ್ಯರು ಹಾಗೂ ತೀರ್ಪುಗಾರರಿಗೆ ಸಿಎ ವಿಶ್ವನಾಥ ಶೆಟ್ಟಿ ಮತ್ತು ರಮ್ಯಾ ಉದಯ ಶೆಟ್ಟಿ ಶಾಲು ಹೊದಿಸಿ ಪುಷ್ಪಗುಚ್ಛವನ್ನಿತ್ತು ಗೌರವಿಸಿದರು. ಕಾರ್ಯಕ್ರಮದಲ್ಲಿ ಕುರ್ಲಾ-ಭಾಂಡುಪ್‌ ಪ್ರಾದೇಶಿಕಸಮಿತಿಯ ಮಾಜಿ ಕಾರ್ಯಾಧ್ಯಕ್ಷರಾದ ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಭೂಮಿಕಾ ಶೆಟ್ಟಿ, ಮಹಿಳಾ ವಿಭಾಗದ ಪದಾಧಿಕಾರಿಗಳಾದ ಸರೋಜಿನಿ ಶೆಟ್ಟಿ, ವೀಣಾ ಶೆಟ್ಟಿ ಸೇರಿದಂತೆ, ವಿಜೇಂದ್ರ ಶೆಟ್ಟಿ, ಉದಯ ಎಲ್. ಶೆಟ್ಟಿ ಪೇಜಾವರ, ಚಂದ್ರಹಾಸ್‌ ಶೆಟ್ಟಿ, ಕೃಷ್ಣ ಶೆಟ್ಟಿ, ಸೀತಾರಾಮ್‌ ಶೆಟ್ಟಿ, ಜ್ಯೋತಿ ಶೆಟ್ಟಿ, ಸುರೇಖಾ ಶೆಟ್ಟಿ, ಅನಿತಾ ಶೆಟ್ಟಿ, ಶಾಂತಾ ಶೆಟ್ಟಿ, ಮಲ್ಲಿಕಾ ಶೆಟ್ಟಿ, ವೇದಾ ಶೆಟ್ಟಿ, ಶಾಲಿನಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಂದಳಿಕೆ ನಾರಾಯಣ ಶೆಟ್ಟಿ ನಿರೂಪಿಸಿದರೆ. ಸರೋಜಿನಿ ಶೆಟ್ಟಿ ವಂದಿಸಿದರು. ಕಾರ್ಯಕ್ರಮದ ಬಳಿಕ ಲಘು ಉಪಾಹಾರ ಜರಗಿತು.

ನಗರದ ಅತ್ಯಂತ ಶ್ರೀಮಂತ ಗಣಪತಿ ಎಂದೇ ಪ್ರಖ್ಯಾತವಾದ ಜಿಎಸ್‌ಬಿ ಸೇವಾ ಮಂಡಳ ಕಿಂಗ್‌ ಸರ್ಕಲ್ನಲ್ಲಿ ವಾರ್ಷಿಕ ಗಣೇಶೋತ್ಸವವು ಅದ್ದೂರಿಯಾಗಿ ನಡೆಯುತ್ತಿದ್ದು, ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್‌ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಇಂಚರ ತಂಡದಿಂದ ಭಜನಾ ಕಾರ್ಯಕ್ರಮವು ಸೆ. 2 ರಂದು ನಡೆಯಿತು. ಭಜನಾ ಕಾರ್ಯಕ್ರಮದಲ್ಲಿ ಶರ್ಮಿಳಾ, ಜಯಲಕ್ಷ್ಮೀ, ರಜನಿ, ಶೈಲಜಾ, ಗೀತಾ, ವಿಶಾಲಾಕ್ಷಿ ಹಾಗೂ ಶೋಭಾ ಅವರು ಪಾಲ್ಗೊಂಡಿದ್ದರು. ಹಿಮ್ಮೇಳದಲ್ಲಿ ಹಾರ್ಮೋನಿಯಂನಲ್ಲಿ ಶೇಖರ್‌ ಸಸಿಹಿತ್ಲು ಮತ್ತು ತಬಲಾದಲ್ಲಿ ಸಂಜಯ ವಿಚಾರೆ ಅವರು ಸಹಕರಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ