ಜೂ. 24-30: ಪೇಜಾವರ ಮಠಾಧೀಶರಿಗೆ ರಜತ ತುಲಾಭಾರ ಸಪ್ತಾಹ

Team Udayavani, Jun 19, 2019, 4:43 PM IST

ಮುಂಬಯಿ: ಗೋಪಾಲ ಕೃಷ್ಣ ಪಬ್ಲಿಕ್‌ ಟ್ರಸ್ಟ್‌ ಮತ್ತು ಭಕ್ತಾಭಿಮಾನಿಗಳಿಂದ ನಗರಾದ್ಯಂತ ಜೂ. 24ರಿಂದ 30ರ ವರೆಗೆ ಪ್ರಪ್ರಥಮ ಬಾರಿಗೆ ಶ್ರೀ ಪೇಜಾವರ ಮಠಾಧೀ ಶರಿಗೆ ರಜತ ತುಲಾಭಾರ ಸಪ್ತಾಹವನ್ನು ಆಯೋಜಿಸಲಾಗಿದೆ. ಜೂ. 24ರಿಂದ ಶ್ರೀ ವಿಶ್ವೇಶ ತೀರ್ಥರು 7 ದಿನಗಳ ಕಾಲ ಮಹಾನಗರ ಮುಂಬಯಿ ಸಾಂತಾಕ್ರೂಜ್‌ ಪೂರ್ವದ ಶ್ರೀ ಪೇಜಾವರ ಮಠದಲ್ಲಿ ಮೊಕ್ಕಾಂ ಹೂಡಲಿದ್ದು, ಈ ಸಂದರ್ಭದಲ್ಲಿ ಸಯಾನ್‌ ಗೋಕುಲ ಶ್ರೀ ಕೃಷ್ಣ ಮಂದಿರ ನಿರ್ಮಾಣಕ್ಕೆ ಯೋಗ್ಯ ಮಾರ್ಗದರ್ಶನ ನೀಡುವುದರೊಂದಿಗೆ ಧನ ಸಂಗ್ರಹಕ್ಕೆ ನೆರವಾಗಿ ಸದ್ಭಕ್ತರನ್ನು ಅನುಗ್ರಹಿಸಲಿದ್ದಾರೆ.

ಗೋಪಾಲಕೃಷ್ಣ ಪಬ್ಲಿಕ್‌ ಟ್ರಸ್ಟ್‌ (ಗೋಕುಲ) ನ ಆಯೋಜನೆಯಲ್ಲಿ ಶ್ರೀ ಕೃಷ್ಣ ಭಕ್ತಾದಿಗಳು ಹಾಗೂ ಶ್ರೀ ಪೇಜಾವರ ಮಠಾಧೀಶರ ಅಭಿಮಾನಿಗಳ ಜಂಟಿ ಆಯೋಜನೆಯೊಂದಿಗೆ ಮುಂಬಯಿ ಹಾಗೂ ಉಪನಗರಗಳಲ್ಲಿ ವಿಶ್ವೇಶ ಶ್ರೀಪಾದರು ಹಾಗೂ ಅವರ ಪಟ್ಟದ ದೇವರು ಶ್ರೀ ರಾಮ ವಿಠಲ ದೇವರಿಗೆ 7 ದಿವಸಗಳಲ್ಲಿ ರಜತ ತುಲಾಭಾರ ಸಪ್ತಾಹ ನೆರವೇರಲಿದೆ.

ಜೂ. 24ರಂದು ಸಾಂತಾಕ್ರೂಜ್‌ ಪೂರ್ವದ ಪೇಜಾವರ ಮಠದಲ್ಲಿ ಸಂಜೆ 6ರಿಂದ ರಾತ್ರಿ 8ರ ವರೆಗೆ ರಜತ ಸಪ್ತಾಹ ತುಲಾಭಾರ ಸೇವೆಗೆ ಚಾಲನೆ ನೀಡಲಾಗುವುದು. ಜೂ. 25ರಂದು ಶ್ರೀ ಅದಮಾರು ಮಠ ಇರ್ಲಾ, ಅಂಧೇರಿ ಪಶ್ಚಿಮ, ಜೂ. 26ರಂದು ಶ್ರೀ ಉಮಾಮಹೇಶ್ವರಿ ದೇವಸ್ಥಾನ ಜರಿಮರಿ, ಜೂ. 27ರಂದು ಶ್ರೀ ಸುಬ್ರಹ್ಮಣ್ಯ ಮಠ ಛೆಡ್ಡಾ ನಗರ್‌ ಚೆಂಬೂರು, ಜೂ. 28ರಂದು “ಆಶ್ರಯ’ ನೆರೂಲ್‌ ನವಿಮುಂಬಯಿ, ಜೂ. 29ರಂದು ಮತ್ತು ಜೂ. 30ರಂದು ಶ್ರೀ ಪೇಜಾವರ ಮಠ ಸಾಂತಾಕ್ರೂಜ್‌ ಪೂರ್ವ ಇಲ್ಲಿ ದಿನಂಪ್ರತಿ ಸಂಜೆ 6ರಿಂದ ರಾತ್ರಿ 8ರ ವರೆಗೆ ರಜತ ತುಲಾಭಾರ ಸಪ್ತಾಹವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಜೂ. 30ರಂದು ಬೆಳಗ್ಗೆ 10ರಿಂದ ಗೋಕುಲ ನಿವೇಶನ ಸಾಯನ್‌ ಇಲ್ಲಿ ಪೇಜಾವರ ಶ್ರೀ ಯತಿವರ್ಯರಿಂದ ಶ್ರೀ ಕೃಷ್ಣ ಮಂದಿರದ ಶಿಲಾನ್ಯಾಸ ಹಾಗೂ ಶ್ರೀಪಾದಂಗಳವ‌ರಿಗೆ ಪಟ್ಟದ ದೇವರ ಸಹಿತ ತುಲಾಭಾರ ನಡೆಯಲಿದೆ. ಅದೇ ದಿನ ಸಂಜೆ ಸಾಂತಾಕ್ರೂಜ್‌ ಪೂರ್ವದ ಶ್ರೀ ಪೇಜಾವರ ಮಠದಲ್ಲಿ ತುಲಾಭಾರ ಸಪ್ತಾಹ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಪ್ತಾಹದಲ್ಲಿ ದೇಣಿಗೆ ರೂಪದಲ್ಲಿ ಸಂಗ್ರಹವಾದ ಮೊತ್ತ ಹಾಗೂ ಬೆಳ್ಳಿಯನ್ನು ಶ್ರೀ ಕೃಷ್ಣಾನುಗ್ರಹ ಹಾಗೂ ತಮ್ಮ ಆಶೀರ್ವಾದೊಂದಿಗೆ ಶ್ರೀಪಾದಂಗಳವರು ಗೋಕುಲ ಶ್ರೀ ಕೃಷ್ಣ ಮಂದಿರ ನಿರ್ಮಾಣ ನಿಧಿಗೆ ಅರ್ಪಿಸಲಿದ್ದಾರೆ.

ಬೃಹನ್ಮುಂಬಯಿಯ ಹೃದಯಭಾಗ ಸಾಯನ್‌ ಪ್ರದೇಶಲ್ಲಿರುವ ಗೋಕುಲದಲ್ಲಿನ ಕೊಳಲನೂದುವ ಅಮೃತ ಶಿಲಾಮೂರ್ತಿ ಗೋಪಾಲಕೃಷ್ಣನಿಗೂ ಉಡುಪಿಯ ಶ್ರೀಕೃಷ್ಣನಿಗೂ ಅವಿನಾಭಾವ ಸಂಬಂಧವಿದೆ. ಉಡುಪಿ ಶ್ರೀ ಕೃಷ್ಣನ ಆರಾಧಕ ಉಡುಪಿಯ ಅಷ್ಠಮಠಗಳಲ್ಲಿ ಒಂದಾದ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ದಶಕಗಳ ಹಿಂದೆ ಗೋಕುಲ ಕಟ್ಟಡದ ಶಿಲಾನ್ಯಾಸ ಮಾಡಿದ ಮಹಾಯತಿಗಳು. ಉಡುಪಿಯ ಅಷ್ಠ ಮಠಾಧೀಶರು ತಮ್ಮ ಪರ್ಯಾಯ ಪೂರ್ವ ಸಂಚಾರದಲ್ಲಿ ಮುಂಬಯಿಗೆ ಆಗಮಿಸಿ ಗೋಕುಲ ಶ್ರೀಕೃಷ್ಣನನ್ನು ಪೂಜಿಸುವುದು ಮೊದಲಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ.

ಶಿಥಿಲವಾಗಿದ್ದ ಗೋಕುಲ ಕಟ್ಟಡದ ಪುನರ್‌ ನಿರ್ಮಾಣ ಕಾರ್ಯ ಎರಡು ವರ್ಷಗಳ ಹಿಂದೆ ಪ್ರಾರಂಭವಾಗಿ, 2016 ಡಿಸೆಂಬರ್‌ನಲ್ಲಿ ಶ್ರೀ ದೇವರನ್ನು ತಾತ್ಕಾಲಿಕವಾಗಿ ಬಾಲಾಲಯದಲ್ಲಿ ಸ್ಥಾಪಿಸಲಾಗಿದೆ. ನಂತರ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಮತ್ತು ಇತರ ಪ್ರಸಿದ್ಧ ಮಠಾಧೀಶರಿಂದ ಗೋಕುಲದ ನೂತನ ಕಟ್ಟಡಕ್ಕೆ ಶಿಲಾನ್ಯಾಸವಾಗಿ ಸದ್ಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಪ್ರಸ್ತುತ ಅಧ್ಯಕ್ಷರಾಗಿರುವ ಡಾ| ಸುರೇಶ್‌ ಎಸ್‌. ರಾವ್‌ ಕಟೀಲು ಅವರ ನೇತೃತ್ವದಲ್ಲಿ ಕಾರ್ಯಕಾರಿ ಸಮಿತಿಯು ಕಟ್ಟಡ ಹಾಗೂ ಶ್ರೀ ಕೃಷ್ಣ ಮಂದಿರ ನಿರ್ಮಾಣ ಕಾರ್ಯಕ್ಕೆ ಹಲವು ವಿಧಾನಗಳ ಮೂಲಕ ಧನ ಸಂಗ್ರಹಿಸುತ್ತಿದೆ. 85‌ರ ಹರೆಯದಲ್ಲೂ ಒಂದು ನಿಮಿಷವೂ ಬಿಡುವಿಲ್ಲದಂತೆ, ಅಭಿಮಾನಿಗಳ ಕರೆಗೆ ಓಗೊಡುತ್ತಾ, ಹಿಂದೂ ಧರ್ಮದ ಏಳಿಗೆಗಾಗಿ ದೇಶದಾದ್ಯಂತ ಸಂಚರಿಸುತ್ತಾ, ಶ್ರೀ ಕೃಷ್ಣನ ಸಂದೇಶವನ್ನು ಭಕ್ತಾದಿಗಳಿಗೆ ತಲುಪಿಸುತ್ತಿರುವ ಪೇಜಾವರ ಶ್ರೀಗಳು ಮುಂಬಯಿಯಲ್ಲಿ ಒಂದು ವಾರ ಕಾಲ ವಾಸ್ತವ್ಯವಿರುವುದು ಇದೇ ಪ್ರಪ್ರಥಮ ಬಾರಿ ಹಾಗೂ ಸತತ ಏಳು ದಿನಗಳ ಕಾಲ ತುಲಾಭಾರ ಸೇವೆ ನಡೆಯುವುದು ಅತ್ಯಂತ ವಿಶೇಷ ಹಾಗೂ ಮುಂಬಯಿ ಭಕ್ತಾಭಿಮಾನಿಗಳ ಸುಯೋಗವೇ ಸರಿ.

ಈ ಐತಿಹಾಸಿಕ ರಜತ ತುಲಾಭಾರ ಸಪ್ತಾಹದಲ್ಲಿ ಭಕ್ತಾಬಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಹಾಯವನ್ನಿತ್ತು ಶ್ರೀ ಕೃಷ್ಣಾನುಗ್ರಹದೊಂದಿಗೆ, ಪೇಜಾವರ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಬೇಕು ಎಂದು ಗೋಕುಲ ಗೋಪಾಲಕೃಷ್ಣ ಪಬ್ಲಿಕ್‌ ಟ್ರಸ್ಟ್‌ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ತುಲಾಭಾರ ಸಮಿತಿಯ ಸಂಚಾಲಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ