ವಸಾಯಿರೋಡ್‌ ಜಿಎಸ್‌ಬಿ ಶಾಂತಿಧಾಮ ಸೇವಾ ಸಮಿತಿಯಲ್ಲಿ ಪ್ರತಿಷ್ಠಾ ವರ್ಧಂತಿ

Team Udayavani, May 10, 2019, 2:48 PM IST

ಮುಂಬಯಿ: ವಸಾಯಿರೋಡ್‌ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್‌ಬಿ ಸಮಾಜದವರ ಶಾಂತಿಧಾಮ ಸೇವಾ ಸಮಿತಿಯಲ್ಲಿ 8ನೇ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ಮೇ 6ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿ ಯಾಗಿ ನಡೆಯಿತು.

ಪ್ರತಿಷ್ಠಾ ವರ್ಧಂತಿ ಅಂಗವಾಗಿ ಶ್ರೀ ಸತ್ಯನಾರಾಯಣ ಪೂಜೆಯು ವೇದಮೂರ್ತಿ ಗಿರಿಧರ ಭಟ್‌ ಅವರ ಮಾರ್ಗದರ್ಶನದಲ್ಲಿ ಸಮಿತಿಯ ವಿಶ್ವಸ್ತರಾದ ಲಕ್ಷ್ಮೀನರಸಿಂಹ ಪ್ರಭು ಮತ್ತು ನರಸಿಂಹ ಅನಂತ ಪ್ರಭು ಅವರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಸಮಿತಿ ಯವರಿಂದ ಭಜನಾ ಕಾರ್ಯಕ್ರಮ ಜರಗಿತು.

ಕೊಂಕಣಿ, ಮರಾಠಿ, ಕನ್ನಡ, ಹಿಂದಿ ಭಜನೆಗಳನ್ನು ಹಾಡಿ ನೆರೆದ ಭಕ್ತಾದಿಗಳನ್ನು ರಂಜಿಸಿದರು. ಹಿಮ್ಮೇಳದಲ್ಲಿ ಹಾರ್ಮೋನಿಯಂನಲ್ಲಿ ವಿನಾಯಕ ವಸಂತ ಪ್ರಭು, ತಬಲಾದಲ್ಲಿ ಅಭಿಜಿತ್‌ ಪ್ರಭು, ಪಖ್ವಾಜ್‌ನಲ್ಲಿ ಸನತ್‌ ಕುಮಾರ್‌, ವಸಂತ ಪ್ರಭು ಅವರು ಸಹಕರಿಸಿದರು. ಅನಂತರ ಶ್ರೀ ಸತ್ಯನಾರಾಯಣ ದೇವರಿಗೆ ಮತ್ತು ಇತರ ಪರಿವಾರ ದೇವರಿಗೆ ಮಹಾಮಂಗಳಾರತಿ ನಡೆದು ಪ್ರಸಾದ ವಿತರಿಸಲಾಯಿತು.

ಅನ್ನಸಂತರ್ಪಣೆ
ಸಮಿತಿಯವರಿಂದ ಬೆಳಗ್ಗೆ ಫಲಾಹಾರ ಮತ್ತು ಪ್ರಸಾದ ರೂಪದಲ್ಲಿ ಮಧ್ಯಾಹ್ನ ಅನ್ನ ಸಂತರ್ಪಣೆ ನೆರವೇರಿತು. ಸಮಿತಿಯ ವಿಶ್ವಸ್ತರಾದ ಅಭಿಜಿತ್‌ ನರಸಿಂಹ ಪ್ರಭು ಅವರ ನೇತೃತ್ವದಲ್ಲಿ ಅಲಂಕರಿಸಿದ ಶ್ರೀ ಸತ್ಯನಾರಾಯಣ ದೇವರ ಮಂಟಪವು ಭಕ್ತಾದಿಗಳನ್ನು ಆಕರ್ಷಿಸಿತು.
ಧಾರ್ಮಿಕ ಕಾರ್ಯಕ್ರಮದಲ್ಲಿ ಜಿಎಸ್‌ಬಿ ಸಮಾಜ ಬಾಂಧವರು, ಭಕ್ತಾದಿಗಳು, ಸ್ಥಳೀಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ