ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು: ಸುಧಾಕರ್‌ ಚವಾಣ್‌

Team Udayavani, Nov 11, 2019, 5:50 PM IST

ಪುಣೆ, ನ. 10: ಕರ್ನಾಟಕ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಾಯೋಜಿತ ವಿಜಯಪುರದ ಉದಯೋನ್ಮುಖ ಯುವ ಚಿತ್ರ ಕಲಾವಿದೆ ಕುಮಾರಿ ಸ್ವಪ್ನಾ ಕಲಾದಗಿಯವರ ಚಿತ್ರ ಕಲಾ ಪ್ರದರ್ಶನ ಪುಣೆಯ ನವಿ ಪೇಟೆಯಲ್ಲಿರುವ ಆರ್ಟ್‌ ಇಂಪ್ರಷನ್‌ ಸ್ಟುಡಿಯೋದಲ್ಲಿ ನ. 8 ರಂದು ನೆರವೇರಿತು.

ಚಿತ್ರಕಲಾ ಪ್ರದರ್ಶನವನ್ನು ಅಭಿನವ ಕಲಾ ವಿದ್ಯಾಲಯದ ಪ್ರೊ| ಸುಧಾಕರ್‌ ಚವಾಣ್‌, ಡಾ| ಡಿ. ಆರ್‌. ಬನ್ಕರ್‌, ರಾವ್‌ ಸಾಹೇಬ್‌ ಗುರವ್‌. ಪ್ರತಿಷ್ಠಾನದ ನಿರ್ದೇಶಕ ರಾವ್‌ ಸಾಹೇಬ್‌ ಗುರವ್‌, ಪುಣೆ ಕನ್ನಡ ಸಂಘದ ಜನಸಂಪರ್ಕಾಧಿಕಾರಿ ರಾಮದಾಸ್‌ ಆಚಾರ್ಯ, ಅರ್ಥಶ್ರೀ ಪ್ರತಿಷ್ಠಾನದ ಮುರುಗೇಶ್‌ ಗಿರಿಸಾಗರ್‌ ಮತ್ತು ಮಹಾರಾಷ್ಟ್ರದ ಪ್ರಸಿದ್ಧ ಚಿತ್ರ ಕಲಾವಿದ ಡಾ| ಮುರಳಿ ಲಾಹೋಟಿ ಇವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸುಧಾಕರ್‌ ಚವಾಣ್‌ ಅವರು ಮಾತನಾಡಿ, ಇಂತಹ ಚಿತ್ರಕಲೆಯು ಯುವ ಪೀಳಿಗೆಯಲ್ಲಿ ಸಾಮಾಜಿಕ

ಬದಲಾವಣೆಯ ಸಂದೇಶವನ್ನು ಮೂಡಿಸುತ್ತಿರುವುದಲ್ಲದೆ ಜಲ- ಪ್ರಕೃತಿಯ ಮಹತ್ವದ ಹಿನ್ನೆಲೆಯಲ್ಲಿ ಬಿಂಬಿಸಿದ ಶೈಲಿ ಅದ್ಭುತವಾಗಿದ್ದು ಪ್ರಶಂಸ ನೀಯವಾಗಿದೆ. ಯುವ ಪ್ರತಿಭೆ ಗಳಿಗೆ ಪ್ರೋತ್ಸಾಹ ನೀಡಿದಾಗ ಅವರ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ರಾಮದಾಸ್‌ ಆಚಾರ್ಯ ಅವರು ಮಾತನಾಡಿ, ಕರ್ನಾಟಕದ ಅತ್ಯಂತ ಬರಗಾಲ ಮತ್ತು ಜಲಕ್ಷಾಮ ಪೀಡಿತ ವಿಜಯಪುರ ಜಿಲ್ಲೆಯ ಈ ಯುವ ಚಿತ್ರಗಾರ್ತಿ ಇಂದಿನ ಪೀಳಿಗೆಗೆ ಒಂದು ಮಾದರಿಯಾಗಿದ್ದು, ಇಂತಹ ಸುಪ್ತ ಚೇತನಗಳಿಗೆ ಸರಕಾರ ಮತ್ತು ಪ್ರತಿಷ್ಠಿತ ಸಂಸ್ಥೆಗಳು ಉತ್ತೇಜನ ನೀಡುತ್ತಿರುವುದು ಸ್ವಾಗತಾರ್ಹವಾಗಿದೆ ಎಂದು ತಿಳಿಸಿದರು.

ಮುರುಗೇಶ್‌ ಗಿರಿಸಾಗರ್‌ ಅವರು ಮಾತನಾಡಿ, ಬೆಳೆಯುತ್ತಿರುವ ಮಹಾನಗರ ಪುಣೆಯಲ್ಲಿ ಕರ್ನಾಟಕದ ಕಲಾವಿದೆಯ ಪ್ರದರ್ಶನ ಎಲ್ಲರಿಗೂ ಹೆಮ್ಮೆಯ ವಿಷಯವೆಂದು ತಿಳಿಸಿದರು. ಡಾ| ಲಹೋಟಿಯವರು ಮಾತನಾಡಿ, ತಮ್ಮ ಈ ಆರ್ಟ್‌ ಗ್ಯಾಲರಿ ಇಂತಹ ಪ್ರದರ್ಶನಗಳಿಗೆ ಸದಾ ಮುಕ್ತವೆಂದು ತಿಳಿಸಿದರು.

ಕು| ಸಪ್ನಾ ಅವರು ಅಭಿಪ್ರಾಯ ವ್ಯಕ್ತಪಡಿಸಿ, ತಾನು ತನ್ನ ವಿದ್ಯಾಭ್ಯಾಸದ ಜೊತೆಗೆ ಕಲಾಭ್ಯಾಸ ಮಾಡಲು ತನ್ನ ಮಾತಾಪಿತರು, ಸ್ನೇಹಿತರು, ಶಿಕ್ಷಕರು ಮತ್ತು ಕರ್ನಾಟಕ ಸರಕಾರದ ಉತ್ತೇಜನವೇ ಕಾರಣವಾಗಿದೆ ಎಂದು ನುಡಿದು ಪುಣೆಯ ಜನತೆಗೆ ಇಂತಹ ಒಂದು ಪ್ರದರ್ಶನಕ್ಕೆ ಸಹಕಾರ ನೀಡಿದ ಬಗ್ಗೆ ಧನ್ಯವಾದ ಸಮರ್ಪಿಸಿದರು.

ಉದಯೋನ್ಮುಖ ಚಿತ್ರ ಕಲಾವಿದರಿಗೆ ಇದೊಂದು ಸ್ಫೂರ್ತಿದಾಯಕ ಪ್ರದರ್ಶನ ವಾಗಿದ್ದು ನ. 12 ರ ವರೆಗೆ ಪ್ರತಿದಿನ ಪೂರ್ವಾಹ್ನ 11.30 ರಿಂದ ಸಂಜೆ 7.30 ರವರೆಗೆ ನಡೆಯಲಿದೆ. ಪುಣೆಯ ಕನ್ನಡ ಮತ್ತು ಕನ್ನಡೇತರ ಭಾಷಿಕ ಕಲಾಭಿಮಾನಿಗಳು ಸಂದರ್ಶಿಸಿ ಉತ್ತೇಜನ ನೀಡುವಂತೆ ಇದೇ ಸಂದರ್ಭದಲ್ಲಿ ತಿಳಿಸಲಾಯಿತು.

 

ಚಿತ್ರ-ವರದಿ: ಕಿರಣ್‌ ಬಿ. ರೈ ಕರ್ನೂರು


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ