ಕುಸಲ್ ಮೆಂಡಿಸ್ ಅಜೇಯ 166 ಟೆಸ್ಟ್: ಶ್ರೀ ಲಂಕಾ ಭಾರೀ ಮೊತ್ತ
Team Udayavani, Mar 8, 2017, 9:36 AM IST
ಗಾಲೆ: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಮಂಗಳವಾರ ಗಾಲೆಯಲ್ಲಿ ಮೊದಲ್ಗೊಂಡ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಬೃಹತ್ ಮೊತ್ತದ ಸೂಚನೆ ನೀಡಿದೆ. ಮೊದಲ ದಿನದಾಟದ ಅಂತ್ಯಕ್ಕೆ ಕೇವಲ 4 ವಿಕೆಟಿಗೆ 321 ರನ್ ಪೇರಿಸಿದೆ. ಇದರಲ್ಲಿ ಕುಸಲ್ ಮೆಂಡಿಸ್ ಪಾಲು ಅಜೇಯ 166.
ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ನಿರೀಕ್ಷಿತ ಆರಂಭ ಪಡೆ ಯುವಲ್ಲಿ ವಿಫಲವಾಯಿತು. ಉಪುಲ್ ತರಂಗ (4), ದಿನೇಶ್ ಚಂಡಿಮಾಲ್ (5) ಮತ್ತು ದಿಮುತ್ ಕರುಣಾರತ್ನೆ (30) ಬೇಗನೇ ಪೆವಿಲಿಯನ್ ಸೇರಿ ಕೊಂಡರು. ಬಳಿಕ ಕ್ರೀಸ್ ಆಕ್ರಮಿಸಿಕೊಂಡ ಕುಸಲ್ ಮೆಂಡಿಸ್ ಮತ್ತು ಅಸೇಲ ಗುಣರತ್ನೆ ಸೇರಿಕೊಂಡು 4ನೇ ವಿಕೆಟಿಗೆ 196 ರನ್ ಒಟ್ಟುಗೂಡಿಸಿ ವಿಜೃಂಭಿಸಿದರು.
ಗುಣರತ್ನೆ 85 ರನ್ ಮಾಡಿ ಔಟಾದ ಬಳಿಕ ಕೀಪರ್ ನಿರೋಷನ್ ಡಿಕ್ವೆಲ್ಲ ಬ್ಯಾಟಿಂಗಿಗೆ ಇಳಿದಿದ್ದು, 14 ರನ್ ಮಾಡಿ ಔಟಾಗದೆ ಉಳಿದಿದ್ದಾರೆ. 15ನೇ ಟೆಸ್ಟ್ ಆಡುತ್ತಿರುವ ಮೆಂಡಿಸ್ ಬಾರಿಸಿದ 2ನೇ ಶತಕ ಇದಾಗಿದೆ. ತಮ್ಮ ಜೀವನಶ್ರೇಷ್ಠ ಗಳಿಕೆಗಿಂತ ಕೇವಲ 8 ರನ್ ಹಿಂದಿದ್ದಾರೆ. ಅವರ 166 ರನ್ 242 ಎಸೆತಗಳಲ್ಲಿ ಬಂದಿದ್ದು, 18 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ್ದಾರೆ.
ಬಾಂಗ್ಲಾದೇಶ ಪರ 7 ಮಂದಿ ಬೌಲಿಂಗ್ ದಾಳಿಗಿಳಿದರು. ಇವರಲ್ಲಿ ಮುಸ್ತಫಿಜುರ್ ರೆಹಮಾನ್, ತಸ್ಕಿನ್ ಅಹ್ಮದ್, ಸುಬಾಶಿಷ್ ರಾಯ್ ಮತ್ತು ಮೆಹೆದಿ ಹಸನ್ ಮಿರಾಜ್ ಒಂದೊಂದು ವಿಕೆಟ್ ಉರುಳಿಸಿದರು.