ಆತಂಕದ ನಡುವೆಯೂ ದ್ವಿಪಕ್ಷೀಯ ಸರಣಿ ಆಡಲು ಮುಂದಾದ ಅಫ್ಗಾನ್ ಕ್ರಿಕೆಟ್ ತಂಡ
Team Udayavani, Aug 21, 2021, 9:42 AM IST
ಕಾಬೂಲ್: ಅಫ್ಘಾನಿಸ್ಥಾನ ತಾಲಿಬಾನ್ ವಶವಾಗಿದೆ. ಉಗ್ರರ ಅಟ್ಟಹಾಸ ಮಿತಿ ಮೀರುತ್ತಿದೆ. ಅಫ್ಘಾನ್ ಕ್ರಿಕೆಟ್ ಮಂಡಳಿಯ ಕಚೇರಿಯ ಮೇಲೂ ಉಗ್ರರು ದಾಳಿ ನಡೆಸಿದ್ದಾರೆ. ಆದರೆ ಇವೆಲ್ಲದರ ನಡುವೆ ಅಫ್ಘಾನಿಸ್ಥಾನ ಕ್ರಿಕೆಟ್ ಮಂಡಳಿ ದ್ವಿಪಕ್ಷೀಯ ಸರಣಿಗೆ ಅಣಿಯಾಗುತ್ತಿದೆ.
ಸಪ್ಟೆಂಬರ್ 3ರಿಂದ ಅಫ್ಘಾನಿಸ್ಥಾನ ಮತ್ತು ಪಾಕಿಸ್ಥಾನ ತಂಡಗಳ ನಡುವೆ ಏಕದಿನ ಸರಣಿ ನಡೆಸಲು ಯೋಜಿಸಲಾಗಿತ್ತು. ಶ್ರೀಲಂಕಾದ ಹಂಬನ್ ತೋಟ ಮೈದಾನದಲ್ಲಿ ಈ ಸರಣಿ ನಡೆಯಲಿದೆ. ಇದೀಗ ಈ ಸರಣಿ ಯೋಜನೆಯಂತೆ ನಡೆಯಲಿದೆ ಎಂದು ಅಫ್ಘಾನ್ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಹಮೀದ್ ಶಿನ್ವಾರಿ ತಿಳಿಸಿದ್ದಾರೆ.
ಇದನ್ನೂ ಓದಿ:ಪ್ಯಾರಿಸ್ ಒಲಿಂಪಿಕ್ಸ್ಗೆ ಈಗಿಂದಲೇ ತಯಾರಿ : ಮುಂದಿನ ಕೂಟಕ್ಕೆ ರಾಜ್ಯದ 75 ಕ್ರೀಡಾಳುಗಳು
ನಾವು ಪಾಕಿಸ್ಥಾನ ವಿರುದ್ಧ ಸರಣಿ ಆಡಲಿದ್ದೇವೆ. ಅದಲ್ಲದೆ ಟಿ20 ವಿಶ್ವಕಪ್ ಕೂಡಾ ಆಡಲಿದ್ದೇವೆ ಎಂದು ಶಿನ್ವಾರಿ ಹೇಳಿದ್ದಾರೆ.
ಅಫ್ಘಾನಿಸ್ಥಾನ ಮತ್ತು ಪಾಕಿಸ್ಥಾನ ನಡುವಿನ ದ್ವಿಪಕ್ಷೀಯ ಸರಣಿಯ ಆತಿಥ್ಯ ವಹಿಸಲು ತಾನಿನ್ನೂ ಸಿದ್ದನಿದ್ದೇನೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಕಳೆದ ವಾರ ಘೋಷಿಸಿತ್ತು.
ಬಿಸಿಸಿಐ ಸೇರಿದಂತೆ ಇತರ ಕ್ರಿಕೆಟ್ ಮಂಡಳಿಗಳ ಜೊತೆಗೆ ನಾವು ಈಗಲಲೂ ಉತ್ತಮ ಸಂಬಂಧ ಹೊಂದಿದ್ದೇವೆ. ಐಸಿಸಿ ಕೂಡಾ ಸಂಪರ್ಕದಲ್ಲಿದೆ. ಕ್ರಿಕೆಟ್ ಗೆ ಸಂಬಂಧಿಸಿದಂತೆ ನಮಗೆ ಯಾವುದೇ ತೊಂದರೆಯಿಲ್ಲ ಎಂದಿದ್ದಾರೆ ಹಮೀದ್ ಶಿನ್ವಾರಿ.