ಮ್ಯಾಚ್ ಫಿಕ್ಸಿಂಗ್ ಆರೋಪ: ಅಫ್ಘಾನ್ ಕ್ರಿಕೆಟಿಗನಿಗೆ ಆರು ವರ್ಷ ನಿಷೇಧ
Team Udayavani, May 11, 2020, 6:07 PM IST
ದುಬೈ: ಇತ್ತೀಚಿನ ವರ್ಷಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಭೂತ ಕ್ರಿಕೆಟ್ ನಲ್ಲಿ ಪದೇ ಪದೇ ಕಾಡುತ್ತಿದೆ. ಕೆಲವು ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ತಮ್ಮ ಕಳ್ಳಾಟದ ಕಾರಣದಿಂದ ನಿಷೇಧ ಅನುಭವಿಸಿದ್ದಾರೆ. ಆ ಸಾಲಿಗೆ ಮತ್ತೊಂದು ಸೇರ್ಪಡೆ ಅಫ್ಘಾನಿಸ್ಥಾನದ ಶಫೀಕುಲ್ಲಾ ಶಫಕ್.
ಶಫೀಕುಲ್ಲಾ ಶಫಕ್ ಅಫ್ಘಾನಿಸ್ಥಾನ ತಂಡದ ವಿಕೆಟ್ ಕೀಪರ್. 2018 ರ ಅಫ್ಘಾನಿಸ್ಥಾನ ಪ್ರೀಮಿಯರ್ ಲೀಗ್ ನಲ್ಲಿ ಶಫೀಕುಲ್ಲಾ ಶಫಕ್ ಫಿಕ್ಸಿಂಗ್ ಮಾಡಿರುವುದು ಸಾಬೀತಾಗಿದೆ. ಅಷ್ಟೇ ಅಲ್ಲದೆ ಶಫಕ್ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ನಲ್ಲೂ ಫಿಕ್ಸಿಂಗ್ ನಡೆಸಲು ಸಹ ಆಟಗಾರನನ್ನು ಪ್ರೇರೇಪಿಸಿದ್ದ ಎನ್ನಲಾಗಿದೆ.
ಶಫೀಕುಲ್ಲಾ ಶಫಕ್ ಮೇಲೆ ಒಟ್ಟು ನಾಲ್ಕು ಆರೋಪಗಳಿದ್ದು, ಶಫಕ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಅಫ್ಘಾನಿಸ್ಥಾನ ಕ್ರಿಕೆಟ್ ಬೋರ್ಡ್ ಈ ಬಗ್ಗೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ತಿಳಿಸಲಾಗಿದೆ. ಶಫಕ್ ಗೆ ಆರು ವರ್ಷಗಳ ಕಾಲ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿಷೇಧ ಹೇರಿರುವುದಾಗಿ ಹೇಳಿದೆ.