ಜ್ವೆರೇವ್, ಕೆರ್ಬರ್ ಮುನ್ನಡೆ
Team Udayavani, Sep 1, 2018, 6:00 AM IST
ನ್ಯೂಯಾರ್ಕ್: ಜರ್ಮನಿಯ 21ರ ಹರೆಯದ ಪ್ರತಿಭಾನ್ವಿತ ಆಟಗಾರ ಅಲೆಕ್ಸಾಂಡರ್ ಜ್ವೆರೇವ್ ಮೊದಲ ಬಾರಿಗೆ ಯುಎಸ್ ಓಪನ್ ಗ್ರ್ಯಾನ್ಸ್ಲಾಮ್ನಲ್ಲಿ 3ನೇ ಸುತ್ತಿಗೇರಿದ್ದಾರೆ. ವನಿತಾ ವಿಭಾಗದಲ್ಲಿ ಆ್ಯಂಜೆಲಿಕ್ ಕೆರ್ಬರ್, ಪೆಟ್ರಾ ಕ್ವಿಟೋವಾ ಮುನ್ನಡೆದರೆ, ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಕ್ಯಾರೋಲಿನ್ ವೋಜ್ನಿಯಾಕಿ ದ್ವಿತೀಯ ಸುತ್ತಿನಲ್ಲಿ ಎಡವಿ ಹೊರಬಿದ್ದಿದ್ದಾರೆ.
ಅಲೆಕ್ಸಾಂಡರ್ ಜ್ವೆರೇವ್ 6-4, 6-4, 6-2ರಿಂದ ಫ್ರಾನ್ಸ್ನ ನಿಕೋಲಸ್ ಮಹುತ್ ಅವರನ್ನು ಮಣಿಸಿದರು. ಇವರ ಮುಂದಿನ ಎದುರಾಳಿ ಜರ್ಮನಿಯವರೇ ಆದ, ಶ್ರೇಯಾಂಕ ರಹಿತ ಆಟಗಾರ ಫಿಲಿಪ್ ಕೋಹ್ಲಶ್ರೀಬರ್. ಈವರೆಗೆ ಇವರು 4 ಸಲ ಎದುರಾಗಿದ್ದು, ಇಬ್ಬರೂ ಎರಡರಲ್ಲಿ ಜಯ ಸಾಧಿಸಿದ್ದಾರೆ.
ವನಿತಾ ಸಿಂಗಲ್ಸ್ನಲ್ಲಿ 4ನೇ ಶ್ರೇಯಾಂಕದ ಜರ್ಮನ್ ಆಟಗಾರ್ತಿ ಆ್ಯಂಜೆಲಿಕ್ ಕೆರ್ಬರ್ ಭಾರೀ ಹೋರಾಟವೊಂದನ್ನು ನಡೆಸಿ ಸ್ವೀಡನ್ನಿನ ಜೊಹಾನ್ನಾ ಲಾರ್ಸನ್ ಅವರನ್ನು 6-2, 5-7, 6-4ರಿಂದ ಹಿಮ್ಮೆಟ್ಟಿಸಿದರು. 3ನೇ ಸುತ್ತಿನಲ್ಲಿ ಸ್ಲೊವಾಕಿಯಾದ ಡೊಮಿನಿಕಾ ಸಿಬುಲ್ಕೋವಾ ಅವರನ್ನು ಎದುರಿಸುವರು.