ಭಾರತಕ್ಕೆ ನಿರೀಕ್ಷಿತ ಗೆಲುವು; ಕ್ವಾರ್ಟರ್‌ಫೈನಲಿಗೆ

Team Udayavani, Jan 22, 2020, 12:30 AM IST

ಬ್ಲೋಮ್‌ಫಾಂಟೈನ್‌ (ದಕ್ಷಿಣ ಆಫ್ರಿಕಾ): ನಿರೀಕ್ಷೆಯಂತೆ ಹಾಲಿ ಚಾಂಪಿಯನ್‌ ಭಾರತವು ಐಸಿಸಿ ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ಕ್ರಿಕೆಟ್‌ ಶಿಶು ಜಪಾನ್‌ ತಂಡದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಕ್ವಾರ್ಟರ್‌ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.

ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಭಾರತ ಪಂದ್ಯದ ಪ್ರತಿಯೊಂದು ವಿಭಾಗದಲ್ಲಿ ಮೇಲುಗೈ ಸಾಧಿಸಿ ಸುಲಭ ಜಯ ಒಲಿಸಿಕೊಂಡಿತು. ಜಪಾನ್‌ ಕೇವಲ 41 ರನ್ನಿಗೆ ಆಲೌಟಾದರೆ ಭಾರತ ಕೇವಲ 4.5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ ಜಯಭೇರಿ ಬಾರಿಸಿತು. ಸತತ ಎರಡು ಗೆಲುವು ಸಾಧಿಸಿದ ಭಾರತ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಶುಕ್ರವಾರ ನ್ಯೂಜಿಲ್ಯಾಂಡ್‌ ತಂಡವನ್ನು ಎದುರಿಸಲಿದೆ. ಮೊದಲ ಪಂದ್ಯದಲ್ಲಿ ಭಾರತವು ಶ್ರೀಲಂಕಾವನ್ನು 90 ರನ್ನುಗಳಿಂದ ಉರುಳಿಸಿತ್ತು.

41 ರನ್ನಿಗೆ ಆಲೌಟ್‌
ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ನಾಲ್ಕು ಬಾರಿಯ ಚಾಂಪಿಯನ್‌ ಭಾರತವು ಜಪಾನ್‌ ಮೇಲೆ ಮಾರಕವಾಗಿ ಎರಗಿತು. ಭಾರತದ ಘಾತಕ ದಾಳಿಗೆ ತತ್ತರಿಸಿದ ಜಪಾನ್‌ ಕೇವಲ 22.5 ಓವರ್‌ಗಳಲ್ಲಿ 41 ರನ್ನಿಗೆ ಸರ್ವಪತನ ಕಂಡಿತು. ಇದೇ ಮೊದಲ ಬಾರಿ ಐಸಿಸಿ ಕೂಟದಲ್ಲಿ ಆಡಲು ಇಳಿದ ಜಪಾನ್‌ ಆಟಗಾರರಿಗೆ ಭಾರತದ ದಾಳಿಯನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗಲಿಲ್ಲ.

ಯಾರೂ ಕೂಡ ಎರಡಂಕೆಯ ಮೊತ್ತ ಪೇರಿಸಿಲ್ಲ. ಬದಲಾಗಿ ಐವರು ಆಟಗಾರರು ಶೂನ್ಯಕ್ಕೆ ಔಟಾಗಿ ಭಾರತದೆದುರು ತಮ್ಮ ಆಟ ನಡೆಯದು ಎಂಬುದನ್ನು ತೋರಿಸಿಕೊಟ್ಟರು. 7 ರನ್‌ ಗಳಿಸಿದ ನಗುಚಿ ಮತ್ತು ದೊಬೆಲ್‌ ವೈಯಕ್ತಿಕವಾಗಿ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.

ಜಂಟಿ ಎರಡನೇ ಕನಿಷ್ಠ ಮೊತ್ತ
ಜಪಾನ್‌ ತಂಡ ಪೇರಿಸಿದ 41 ರನ್ನುಗಳ ಮೊತ್ತವು ಅಂಡರ್‌ 19 ವಿಶ್ವಕಪ್‌ನಲ್ಲಿ ತಂಡವೊಂದರ ಜಂಟಿ ಎರಡನೇ ಕನಿಷ್ಠ ಮೊತ್ತವಾಗಿದೆ. ಅಂಡರ್‌ 19 ಕ್ರಿಕೆಟ್‌ ಇತಿಹಾಸದಲ್ಲಿ ಇದು ಜಂಟಿ ಮೂರನೇ ಕನಿಷ್ಠ ಮೊತ್ತವಾಗಿದೆ.

ವೇಗಿಗಳಾದ ಕಾರ್ತಿಕ್‌ ತ್ಯಾಗಿ, ಆಕಾಶ್‌ ಸಿಂಗ್‌ ಮತ್ತು ಸ್ಪಿನ್ನರ್‌ ರವಿ ಬಿಷ್ಣೋಯಿ ಅವರ ಅದ್ಭುತ ಕೈಚಳಕದಿಂದ ಭಾರತ ಆರಾಮವಾಗಿ ಜಯಭೇರಿ ಬಾರಿಸಿತು. ಬಿಷ್ಣೋಯಿ ತನ್ನ 8 ಓವರ್‌ಗಳ ದಾಳಿಯಲ್ಲಿ ಕೇವಲ 5 ರನ್‌ ನೀಡಿ 4 ವಿಕೆಟ್‌ ಹಾರಿಸಿದ್ದರು. ತ್ಯಾಗಿ ಮೂರು ಮತ್ತು ಆಕಾಶ್‌ 2 ವಿಕೆಟ್‌ ಕಿತ್ತು ಜಪಾನ್‌ಗೆ ಆಘಾತವಿಕ್ಕಿದರು.

ಗೆಲ್ಲಲು ಸುಲಭ ಗುರಿ ಪಡೆದ ಭಾರತ ಯಾವುದೇ ವಿಕೆಟ್‌ ಕಳೆದುಕೊಳ್ಳದೇ 4.5 ಓವರ್‌ಗಳಲ್ಲಿ ಜಯಭೇರಿ ಬಾರಿಸಿತು. ಆರಂಭಿಕರಾದ ಯಶಸ್ವಿ ಜೈಸ್ವಾಲ್‌ ಮತ್ತು ಕುಮಾರ್‌ ಕುಶಾಗ್ರ ಅನುಕ್ರಮವಾಗಿ 29 ಮತ್ತು 13 ರನ್ನುಗಳಿಂದ ಅಜೇಯರಾಗಿ ಉಳಿದರು.

ಈ ಪಂದ್ಯದ ವೇಳೆ ಭಾರತದ ಧ್ರುವ್‌ ಜುರೆಲ್‌ ಮತ್ತು ಜಪಾನಿನ ಕೆಂಟೊ ಒಟಾ ದೊಬೆಲ್‌ ಕೇಕ್‌ ಅನ್ನು ಮುಖಕ್ಕೆ ಮೆತ್ತಿಕೊಳ್ಳುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್‌
ಜಪಾನ್‌ 22.5 ಓವರ್‌ಗಳಲ್ಲಿ 41 (ನಗುಚಿ 7, ದೊಬೆಲ್‌ 7, ಕಾರ್ತಿಕ್‌ ತ್ಯಾಗಿ 10ಕ್ಕೆ 3, ಆಕಾಶ್‌ 11ಕ್ಕೆ 2, ರವಿ ಬಿಷ್ಣೋಯಿ 5ಕ್ಕೆ 4); ಭಾರತ 4.5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 42 (ಯಶಸ್ವಿ ಜೈಸ್ವಾಲ್‌ 29 ಔಟಾಗದೆ, ಕುಮಾರ್‌ ಕುಶಾಗ್ರ 13 ಔಟಾಗದೆ).

ರವಿ ಬಿಷ್ಣೋಯಿ: ಪಂದ್ಯಶ್ರೇಷ್ಠ.

ತಂಡದ ನಿರ್ವಹಣೆಯಿಂದ ಖುಷಿಯಾಗಿದೆ. ಸ್ಪಿನ್ನರ್‌ಗಳು ಚೆನ್ನಾಗಿ ದಾಳಿ ಸಂಘಟಿಸಿದ್ದಾರೆ. ಸ್ಪಿನ್ನರ್‌ಗಳಿಗಿಂತ ವೇಗಿಗಳು ಲೈನ್‌ ಮತ್ತು ಲೆಂತ್‌ ಅನ್ನು ಉತ್ತಮವಾಗಿ ನಿರ್ವಹಿಸಿದರು. ಪಂದ್ಯದಲ್ಲಿ ಯಾವುದೇ ಒತ್ತಡವಿರಲಿಲ್ಲ. ಪಂದ್ಯ ಹೇಗೆ ಸಾಗುತ್ತದೆ ಎಂಬುದನ್ನು ನೋಡಿ ಆಡಲಿದ್ದೇವೆ.
– ಪ್ರಿಯಂ ಗರ್ಗ್‌, ಭಾರತ ತಂಡದ ನಾಯಕ

ಇದೊಂದು ಅತ್ಯಂತ ಕಠಿನ ಪಂದ್ಯವೆಂದು ನಾವು ತಿಳಿದಿದ್ದೆವು. ನಾವು ಬ್ಯಾಟಿಂಗ್‌ ಸಹಿತ ಪಂದ್ಯದಲ್ಲಿ ಉತ್ತಮವಾಗಿ ಆಡಿಲ್ಲ. ಆದರೆ ಬಹಳಷ್ಟು ವಿಷಯ ಕಲಿತಿದ್ದೇವೆ. ಕೆಲವೊಂದು ಬಲಿಷ್ಠ ತಂಡಗಳ ಜತೆ ಆಡಿದ ಅನುಭವದ ಲಾಭದೊಂದಿಗೆ ತವರಿಗೆ ಮರಳಲಿದ್ದೇವೆ .
– ಮಾರ್ಕಸ್‌ ತುಗೇìಟ್‌, ಜಪಾನ್‌ ತಂಡದ ನಾಯಕ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ